ಮೋಹನ್ ಭಾಗವತ್ ಪ್ರೊಫೈಲ್’ನಲ್ಲೂ ತ್ರಿವರ್ಣ ಧ್ವಜ
ನವದೆಹಲಿ: ಆಜಾದಿಕ ಅಮೃತ್ ಮಹೋತ್ಸವದ ಅಂಗವಾಗಿ ಸಾಮಾಜಿಕ ಜಾಲತಾಣ ಖಾತೆಯ ಪ್ರೊಫೈಲ್ ಪಿಚ್ಚರ್ʼಗಳಲ್ಲಿ ಅ.2ರಿಂದ 15ರವರೆಗೆ ತ್ರಿವರ್ಣ ಧ್ವಜ ಹಾಕುವಂತೆ ಪ್ರಧಾನಿ ನರೇದ್ರ ಮೋದಿ ಅವರ ಕರೆಗೆ ಸಂಘ ಪರಿವಾರ ಸ್ಪಂದಿಸಿದೆ.
ಪ್ರತಿಪಕ್ಷಗಳ ತೀವ್ರ ಟೀಕೆ ಹಾಗೂ ಲೇವಡಿಗಳ ಹೊರತಾಗಿಯೂ ಅ.2ರಿಂದ ಈವರೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಟ್ವೀಟರ್ ಪೋಫೈಲ್ ನಲ್ಲಿ ಭಗದ್ ಧ್ವಜವೇ ಉಳಿದಿತ್ತು.
ಸಂಸ್ಥೆಯ ಮುಖ್ಯಸ್ಥ ಮೋಹನ್ ಭಾಗವತ್ ಅವರು ಟ್ವೀಟರ್ ಖಾತೆಯಲ್ಲಿ ತಮ್ಮದೇ ಚಿತ್ರವನ್ನು ಹಾಕಿಕೊಂಡಿದ್ದರು. ಇದನ್ನು ಕಾಂಗ್ರೆಸ್ ಸೇರಿದಂತೆ ಅನೇಕ ಪ್ರತಿಪಕ್ಷಗಳು ಪ್ರಶ್ನಿಸಿದ್ದವು. ಪ್ರಧಾನಿ ಅವರ ಕರೆಯನ್ನು ಬಿಜೆಪಿಯ ಪೋಷಕ ಸಂಸ್ಥೆಯಾದ ಸಂಘ ಪರಿವಾರವೇ ಪಾಲಿಸುತ್ತಿಲ್ಲ. ಹರ್‍ಘರ್ ತಿರಂಗಾ ಅಭಿಯಾನವನ್ನು ವ್ಯಾಪಾರ ಮನೋಭಾವದಿಂದ ಆಚರಣೆ ಮಾಡಲಾಗುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿದ್ದವು.
ಇದೇ 13 ರಿಂದ ಆ.15ರವರೆಗೂ ಹರ್‍ಘರ್ ತಿರಂಗಾ ಅಭಿಯಾನ ಆರಂಭವಾಗುತ್ತಿದ್ದು, ಆರ್‍ಎಸ್‍ಎಸ್ ತನ್ನ ಪ್ರೋಫೈಲ್ ಚಿತ್ರ ಬದಲಾವಣೆ ಮಾಡಿ ತ್ರಿವರ್ಣ ಧ್ವಜ ಹಾಕಿಕೊಂಡಿದೆ. ಮೋಹನ್‍ಭಾಗವತ್ ಅವರು ಕೂಡ ತ್ರಿವರ್ಣ ಧ್ವಜವನ್ನೇ ಪ್ರೋಫೈಲ್ ಚಿತ್ರ ಮಾಡಿಕೊಂಡಿದ್ದಾರೆ. ಆರ್‍ಎಸ್‍ಎಸ್‍ನ ಟ್ವೀಟರ್ ಖಾತೆಯಲ್ಲಿ ರಾಷ್ಟ್ರ ಧ್ವಜಾರೋಹಣವಿರುವ ಫೋಟೋಗಳು ಮತ್ತು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಸ್ವಾತಂತ್ರ್ಯದ ಅಮೃತೋತ್ಸವ ಸಂಭ್ರಮಿಸಿ, ಪ್ರತಿಯ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರೀಯ ಸ್ವಾಭಿಮಾನವನ್ನು ಹೆಚ್ಚಿಸಿ ಎಂದು ಕರೆ ನೀಡಲಾಗಿದೆ. ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಆರ್‍ಎಸ್‍ಎಸ್ 52 ವರ್ಷಗಳ ವರೆಗೂ ನಾಗಪುರದ ತನ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿರಲಿಲ್ಲ ಎಂದು ಆರೋಪಿಸಿದ್ದರು.
ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿರುವ ಸಂಘ ಪರಿವಾರದ ಪ್ರಚಾರ ಘಟಕದ ಸಹ ಸಂಚಾಲಕ ನರೇಂದ್ರ ಠಾಕೂರ್, ಸಂಘ ತನ್ನ ಶಾಖೆಯ ಪ್ರತಿಯೊಂದು ಕಚೇರಿಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯವನ್ನು ಸಂಭ್ರಮಿಸಿದೆ ಎಂದು ಹೇಳಿದ್ದಾರೆ. ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತನೂ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.
ಪ್ರಚಾರ ಸಮಿತಿಯ ಮುಖ್ಯಸ್ಥ ಸುನೀಲ್ ಅಂಬೇರ್ಕರ್ ಅವರು, ಇಂತಹ ವಿಷಯವನ್ನು ರಾಜಕೀಯಗೊಳಿಸಬಾರದು. ಸಂಘ ಪರಿವಾರ ಈಗಾಗಲೇ ಹರ್ ಘರ್ ತಿರಂಗಾ ಮತ್ತು ಆಜಾದಿಕ ಅಮೃತ್ ಮಹೋತ್ಸವಕ್ಕೆ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.