ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಸಂಪತ್ ಎಂಬಾತ ಕಾಂಗ್ರೆಸ್ ಕಾರ್ಯಕರ್ತ ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಬಗ್ಗೆ ಫೋಟೋ ಸಮೇತ ಟ್ವೀಟ್ ನಲ್ಲಿ ಮಾಹಿತಿ ನೀಡಿರುವ ಕಾಂಗ್ರೆಸ್ ಪಕ್ಷವು, ಬಿಜೆಪಿ ಸುಳ್ಳುಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ.
ಬಿಜೆಪಿ & RSS ತನ್ನ ಅಜೆಂಡಾ ಸ್ಥಾಪಿಸಲು ತಮ್ಮಲ್ಲಿನ ಮುಗ್ದ ಕಾರ್ಯಕರ್ತರಿಗೆ ಯಾವ ವೇಷವನ್ನು ಬೇಕಿದ್ದರೂ ಹಾಕಿ ಕಳಿಸುತ್ತವೆ, ಯಾವ ಕೃತ್ಯಗಳನ್ನು ಬೇಕಿದ್ದರೂ ಮಾಡಿಸುತ್ತವೆ, ಅವರನ್ನೇ ಕೊಂದು ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತವೆ. RSS ‘ಪ್ಯಾಂಟು’ ತೊಟ್ಟವನಿಗೆ ಕಾಂಗ್ರೆಸ್ ವೇಷ ತೋಡಿಸಿದ ಮಾತ್ರಕ್ಕೆ ಕಾಗೆ ನವಿಲಾಗುತ್ತದೆಯೇ?! ಎಂದು ಕಾಂಗ್ರೆಸ್ ಕೇಳಿದೆ.
ನಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದ ಸಂಪತ್ RSS ಗಣವೇಷ ಧರಿಸಿರುವ ಪೋಟೋವನ್ನು ಶೇರ್ ಮಾಡಿದ್ದು, “ಬಿಜೆಪಿ ಹೇಳುವ ಸುಳ್ಳುಗಳಿಗೆ ‘ಸತ್ಯ’ವೇ ಕಂಗೆಟ್ಟು ದೇಶ ಬಿಟ್ಟು ಓಡಿ ಹೋಗಲಿದೆ! ಕಾರಿಗೆ ಮೊಟ್ಟೆ ಎಸೆದವರು ಕಾಂಗ್ರೆಸ್ನವರು ಎಂಬ ಕಟ್ಟುಕತೆ ಸೃಷ್ಟಿಸುವ ಮುನ್ನ ಉತ್ತರಿಸಿ. ಈ ವ್ಯಕ್ತಿಯೊಂದಿಗೆ ಅಪ್ಪಚ್ಚು ರಂಜನ್ ಅವರಿಗೆ ಏನು ಕೆಲಸ? ಸ್ಥಳೀಯ ಕಾಂಗ್ರೆಸ್ ಮುಖಂಡರಿಗೇ ಪರಿಚಯವಿಲ್ಲದ ಆತ ಕಾಂಗ್ರೆಸ್ ಕಾರ್ಯಕರ್ತನಾಗುವುದು ಹೇಗೆ?” ಎಂದು ಖಾರವಾಗಿ ಪ್ರಶ್ನಿಸಿದೆ.
ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾಗಕ್ಕ ಗುಬ್ಬಕ್ಕನ ಕತೆ ಕಟ್ಟಿರುವ ಬಿಜೆಪಿ ಉತ್ತರಿಸಬೇಕು. ಅವರು ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಠಾಣೆಯಿಂದ ಜಾಮೀನು ಕೊಟ್ಟು ಕರೆತಂದಿದ್ದೇಕೆ? ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಆತ ಅಪ್ಪಚ್ಚು ರಂಜನ್ಗೇಕೆ ಆಪ್ತನಾಗಿದ್ದಾನೆ ಎಂದು ಕಾಂಗ್ರೆಸ್ ಟ್ವಿಟಾಸ್ತ್ರ ಸಂದಿಸಿದೆ.