ಸಚಿವರಾದ ಮುರುಗೇಶ್ ನಿರಾಣಿ, ಡಾ.ಸುಧಾಕರ್ ವಿರುದ್ಧವೂ ಕಿಡಿ
ಡಾ.ಸುಧಾಕರ್ ರೈತರ ಆಕ್ರೋಶಕ್ಕೆ ಒಳಗಾಗುವ ನಡವಳಿಕೆ ಒಳ್ಳೆಯದಲ್ಲ
ರೈತರ ಭೂಮಿ ಸ್ವಾಧೀನ; ರಾಜ್ಯ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ದೇವನಹಳ್ಳಿ ರೈತರ ಜತೆ ಪ್ರತಿಭಟನೆ ನಡೆಸಿದ ಹೆಚ್‌ಡಿಕೆ
ದೇವನಹಳ್ಳಿ: ರಾಜ್ಯದಲ್ಲಿ ಹಿಂದೆ ಬಿಜೆಪಿ ಸರಕಾರ ಇದ್ದಾಗ ಭೂ ವ್ಯವಹಾರಗಳಲ್ಲಿ ಅಕ್ರvಮ ನಡೆದು ಸ್ವತಃ ಕೈಗಾರಿಕಾ ಸಚಿವರೇ ಜೈಲಿಗೆ ಹೋದರು. ಅದರೂ ಬಿಜೆಪಿ ಪಾಠ ಕಲಿತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿ ಕಾರಿದರು.
ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಕೃಷಿ ಭೂಮಿಯನ್ನು ಸರಕಾರ ನಿರ್ದಯವಾಗಿ ಸ್ವಾಧೀನ ಮಾಡಿಕೊಳ್ಳುತ್ತಿರುವುದು ಖಂಡಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬೃಹತ್ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಅಷ್ಟೆಲ್ಲಾ ಆದರು ಕೂಡ ಬಿಜೆಪಿಗೆ ಇನ್ನೂ ಬುದ್ದಿ ಬಂದಿಲ್ಲ. ಈಗಿನ ಕೈಗಾರಿಕಾ ಸಚಿವರದ್ದು ಬ್ರಹ್ಮಾಂಡ ಭ್ರಷ್ಟಾಚಾರ ಇದೆ ಎಂದು ಕುಮಾರಸ್ವಾಮಿ ಅವರು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ದ ಟೀಕಾ ಪ್ರಹಾರ ನಡೆಸಿದರು.
ರೈತರ ಬದುಕಿನ ಜೊತೆ ಚೆಲ್ಲಾಟ ಆಡುವುದು ಮುರುಗೇಶ್ ನಿರಾಣಿ ಮಾಡುತ್ತಿರುವ ಘನಂದಾರಿ ಕೆಲಸ. ಇವರ ದೃಷ್ಟಿಯಲ್ಲಿ ರೈತರು ಬದುಕುವ ಹಾಗೆಯೇ ಇಲ್ಲ. ಬೆಂಗಳೂರಿನಲ್ಲಿಯೂ ಬದಕಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಕೇವಲ ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಕೈಗಾರಿ ಬರಬೇಕು ಎಂಬ ಚಿಂತನೆ ಬಿಡಿ, ಕೃಷಿಯೇತರ ಭೂಮಿಗಳಲ್ಲಿ ಕೈಗಾರಿಕೆಗಳನ್ನು ಆರಂಭ ಮಾಡಬೇಕೆ ವಿನಾ ಫಲವತ್ತಾದ ಜಮೀನನನ್ನು ಕಿತ್ತುಕೊಂಡು ಅಲ್ಲಿ ಕೈಗಾರಿಕೆ ಮಾಡುವುದಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.
ಡಾ.ಸುಧಾಕರ್ ವಿರುದ್ಧವೂ ಕಿಡಿ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧವೂ ಹರಿಹಾಯ್ದ ಮಾಜಿ ಮುಖ್ಯಮಂತ್ರಿಗಳು; ರೈತರ ಆಕ್ರೋಶಕ್ಕೆ ಒಳಗಾಗುವ ನಡವಳಿಕೆ ಒಳ್ಳೆಯದಲ್ಲ. ಎಷ್ಟು ದಿನ ನಿಮ್ಮ ದಬ್ಬಾಳಿಕೆ ನಡೆಯಲಿದೆ? ಅಧಿಕಾರ ಶಾಶ್ವತ ಅಲ್ಲ. ಯಾರೇ ಮಂತ್ರಿ ಇರಲಿ, ಅಧಿಕಾರ ದುರಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಇದಕ್ಕೆಲ್ಲ ಮುಂದೆ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಒಂದು ಜೈಲು ಸಾಕಾಗಲ್ಲ
ರಾಜ್ಯದಲ್ಲಿ ಅಕ್ರಮ, ಅನ್ಯಾಯಗಳು ಎಷ್ಟು ಮೇರೆ ಮೀರಿವೆ ಎಂದರೆ, ತಪ್ಪಿತಸ್ಥರಿಗೆ ಒಂದು ಪರಪ್ಪನ ಆಗ್ರಹಾರ ಜೈಲು ಸಾಲುವುದಿಲ್ಲ. ಈಗಿನ ಭ್ರಷ್ಟಾಚಾರ ನೋಡಿದರೆ ೧೦-೧೫ ಪರಪ್ಪನ ಅಗ್ರಹಾರ ಜೈಲುಗಳು ಬೇಕು ಎಂದ ಅವರು; ಇಷ್ಟೆಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಇಟ್ಟುಕೊಂಡು ಪಾಪ.. ಸಿಸೋಡಿಯಾ ಅವರನ್ನು ಹಿಡಿಯಲು ಹೊರಟಿದ್ದಾರೆ. ಅಬಕಾರಿ ನೀತಿಯಲ್ಲಿ 1 ಕೋಟಿ ವರ್ಗಾವಣೆ ಆಗಿದೆ ಅಂತ ಆರೋಪ ಮಾಡಿ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಏನು ನಡೆಯುತ್ತಿದೆ? ಕೇಂದ್ರ ಸರಕಾರ ಏನು ಮಾಡುತ್ತಿದೆ? ಕರ್ನಾಟಕದಲ್ಲಿ ಏನೇನು ನಡಿತಿದೆ ಎನ್ನುವುದಕ್ಕೆ ಲಕ್ಷಾಂತರ ಕೇಸ್ʼಗಳನ್ನು ಕೊಡಬಹುದು ಎಂದು ಕೇಂದ್ರ ಸರಕಾರದ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ನಡಿಯುತ್ತಿರುವ ಅಕ್ರಮಗಳು ಜಾರಿ ನಿರ್ದೇಶನಲಾಯಕ್ಕೆ ಗೊತ್ತಿಲ್ವಾ? ಐಟಿಯವರಿಗೆ ಗೊತ್ತಿಲ್ವಾ? ಕೇಂದ್ರದ ಗೃಹ ಇಲಾಖೆಗೆ ಮಾಹಿತಿ ಇಲ್ಲವಾ? ಲೆಕ್ಕ ಹಾಕುತ್ತಾ ಹೋದರೆ ಎಲ್ಲ ದಾಖಲೆಗಳನ್ನು ಸರಿಗಟ್ಟಬಹುದು. ಬೌರಿಂಗ್ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಲು ಎರಡು ವರ್ಷದ ಸಂಬಳವನ್ನು ಲಂಚವಾಗಿ ಕೊಡಿ ಎಂದು ಕೇಳುತ್ತಿದ್ದಾರೆ. ಇದೆಲ್ಲರ ಬಗ್ಗೆ ಕೇಂದ್ರ ಸರಕಾರಕ್ಕೆ ಗೊತ್ತಿಲ್ಲವೆ? ಎಂದು ಅವರು ಪ್ರಶ್ನೆ ಮಾಡಿದರು.
ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ಅವರ 40% ಕಮೀಷನ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿಗಳು; 40% ಕಮೀಷನ್ ವಿಚಾರ ಬೀದಿ ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ. ಇದು ಈ ಸರಕಾರದ ಹಣೆಬರಹ. ಲಂಚ ಇಲ್ಲದೆ ಅಧಿಕಾರಿಗಳು ಯಾರು ಬರುವ ಹಾಗೆಯೇ ಇಲ್ಲ. ನಾನು ಸಿಎಂ ಆಗಿದ್ದಾಗ ಯಲಹಂಕ ತಹಶೀಲ್ದಾರ್ ಆಗಲು ಯಾರೋ ಒಬ್ಬರು ಒಂದೂವರೆ ಕೋಟಿ ರೂ. ಲಂಚ ಕೊಡಲು ಬಂದಿದ್ದರು. ಉಗಿದು ಕಳಿಸಿದ್ದೆ ನಾನು. ನಾನು ಸಿಎಂ ಸ್ಥಾನದಿಂದ ಇಳಿದ 24 ಗಂಟೆಯಲ್ಲಿ ಅತ ಯಲಹಂಕ ತಹಶೀಲ್ದಾರ್ ಹುದ್ದೆಯಲ್ಲಿ ಕೂತಿದ್ದ. ನಾವು ಪ್ರಾಮಾಣಿಕರು ಎಂದು ಹೇಳುವ ಬಿಜೆಪಿಯವರ ನಿಜಸ್ವರೂಪ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ವೀರ ಸಾವರ್ಕರ್ ಫೋಟೊ ಇಡ್ಕೊಂಡು ಈಗ ಬೀದಿ ಸುತ್ತುತ್ತಿದ್ದಾರೆ. ಇಲ್ಲಿ ಜನರ ಬದುಕಿನ ಜತೆ ಚೆಲ್ಲಾಟ ಆಡ್ತಿದ್ದಾರೆ. ವೀರ ಸಾವರ್ಕರ್ ಫೋಟೊ ಇಡ್ಕೊಂಡು ಜನರ ಹೊಟ್ಟೆ ತುಂಬಿಸ್ರಾರ ಇವರು? ಎಲ್ಲವೂ ಜನರಿಗೆ ಅರ್ಥವಾಗುತ್ತಿದೆ. ಇದಕ್ಕೆ ಪ್ರಾಯಶ್ಚಿತ್ತವಾಗಿ ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲು ಮುಚ್ಚಲಿದೆ ಎಂದು ಅವರು ಭವಿಷ್ಯ ನುಡಿದರು.
ಇದಕ್ಕೂ ಮೊದಲು ಭೂಮಿ ಕಸಿದುಕೊಳ್ಳುತ್ತಿರುವ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ರೈತರ ಜತೆಗೂಡಿ ಕುಮಾರಸ್ವಾಮಿ ಅವರು ಧರಣಿ ನಡೆಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ರೈತರು ಹಾಜರಿದ್ದರು. ಪ್ರತಿಭಟನೆ ನೇತೃತ್ವ ವಹಿಸಿದ ರೈತ ಮುಖಂಡ ಜಿಸಿ ಬಯ್ಯಾರೆಡ್ಡಿ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ಶಾಸಕ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.