ಆಜಾದ್ ಅಡ್ಜಸ್ಟ್‌ಮೆಂಟ್ ರಾಜಕಾರಣ ಗೊತ್ತಿತ್ತು ಎನ್ನುತ್ತಿದೆ ಕಾಂಗ್ರೆಸ್
ನವದೆಹಲಿ: ಬರೋಬ್ಬರಿ 49 ವರ್ಷಗಳ ಕಾಂಗ್ರೆಸ್ ಸಖ್ಯವನ್ನು ಹಿರಿಯ ನಾಯಕ ಗುಲಾಂ ನಬಿ ಆಜಾದ್ ತೊರೆಯುವುದರೊಂದಿಗೆ ಆ ಪಕ್ಷಕ್ಕೆ ದೊಡ್ಡ ಆಘಾತ ಉಂಟಾಗಿದೆ.
1973ರಲ್ಲಿ ಅವಿಭಜಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಆಗಿ ಕಾಂಗ್ರೆಸ್ ಪಕ್ಷದಲ್ಲಿ ರಾಜಕಾರಣ ಆರಂಭಿಸಿದ್ದ ಆಜಾದ್ ಈಗ ರಾಹುಲ್ ಗಾಂದಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮುನಿಸಿಕೊಂಡು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ದುರ್ಬಲವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಹೊಸ ಶಾಕ್ ಭಾರೀ ಪೆಟ್ಟು ನೀಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಬಂಡೆದ್ದಿರುವ ಆಜಾದ್ ಅವರು ಇಂದು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿ ಶಾಶ್ವತವಾಗಿ ಪಕ್ಷವನ್ನು ತೊರೆದಿದ್ದಾರೆ. ತಮ್ಮ ರಾಜೀನಾಮೆ ನಂತರ ಮಾತನಾಡಿದ ಆಜಾದ್, ಮುಖ್ಯವಾಗಿ ರಾಹುಲ್ ಗಾಂಧಿ ವಿರುದ್ಧ ಭಾರೀ ಪ್ರಮಾಣದಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.
“ಕಳೆದ 8 ವರ್ಷಗಳಿಂದ ತೀರಾ ಗಂಭೀರವಲ್ಲದ ವ್ಯಕ್ತಿಯೊಬ್ಬರ ಕೈಗೆ ಪಕ್ಷದ ನಾಯಕತ್ವದ ಚುಕ್ಕಾಣಿ ನೀಡಲು ಇನ್ನಿಲ್ಲದ ಪ್ರಯತ್ನಗಳು ನಡೆದವು” ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ ರಾಜಿನಾಮೆಗೆ ಕಾರಣವನ್ನು ಗುಲಾಂನಬಿ ಅಜಾದ್ ತಿಳಿಸಿದ್ದಾರೆ. ಐದು ಪುಟಗಳ ರಾಜಿನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ದುಷ್ಟರ ಕೂಟವಿದೆ. ರಿಮೋಟ್ ಕಂಟ್ರೋಲ್ ವ್ಯವಸ್ಥೆಯಿಂದ ಪಕ್ಷದ ನಾಯಕತ್ವದಲ್ಲಿದ್ದ ಯುಪಿಎ ಒಕ್ಕೂಟ ನಾಮಾವಶೇಷವಾಗಿದೆ ಎಂದು ಗುಲಾಂ ನಬಿ ಆಜಾದ್ ಅವರು ಕಿಡಿಕಾರಿದ್ದಾರೆ.
ಆಜಾದ್ ಅವರ ರಾಜೀನಾಮೆ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಮಾಜಿ ಶಾಸಕರಾದ ಅಮೀನ್ ಭಟ್, ಗುಲ್ಜಾರ್ ಅಹ್ಮದ್ ವಾನಿ, ಜಿ.ಎಂ.ಸರೂರಿ, ಹಾಜಿ ಅಬ್ದುಲ್ ರಶೀದ್, ಚೌಧರಿ ಮೊಹಮ್ಮದ್ ಅಕ್ರಂ ಹಾಗೂ ಮೊಹಮ್ಮದ್ ಅಮೀನ್ ಭಟ್ ಕೂಡ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಹೀಗಾಗಿ ಕಣಿವೆ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದು ದೊಡ್ಡ ನಷ್ಟ ಎಂದು ಹೇಳಲಾಗುತ್ತಿದೆ. ಇವರ ಜತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆರ್.ಎಸ್.ಚಿಬ್ ಅವರೂ ರಾಜಿನಾಮೆ ನೀಡಿದ್ದಾರೆ.
ಹೊಸ ಪಕ್ಷ ಸ್ಥಾಪನೆ
ಪ್ರಧಾನಿ ಮೋದಿ ಅವರಿಗೆ ಆಪ್ತರಾದ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಈ ಸುದ್ದಿಗಳಿಗೆ ತೆರೆ ಎಳೆದು; “ಬಿಜೆಪಿ ಸೇರುವುದಿಲ್ಲ. ಹೊಸ ಪಕ್ಷ ಕಟ್ಟುತ್ತೇನೆ” ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಆಜಾದ್ ಪಕ್ಷದ ತೊರೆದ ಬಗ್ಗೆ ಕಾಂಗ್ರೆಸ್ʼನಲ್ಲಿ ಅಂಥ ಅಚ್ಚರಿಯೇನೂ ಆಗಿಲ್ಲ ಎಂದು ಆಂತರಿಕ ಮೂಲಗಳು ಸಿಕೆನ್ಯೂಸ್ ನೌ ಗೆ ತಿಳಿಸಿವೆ.
“ಗುಲಾಂನಬಿ ಆಜಾದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಬಾಂಧವ್ಯ ಎಂಥದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆಜಾದ್ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಮುಕ್ತಾಯವಾದಾಗ ಸ್ವತಃ ಮೋದಿ ಅವರು ಆಜಾದ್ ಗುಣಗಾನ ಮಾಡಿ ಸದನದಲ್ಲೇ ಕಣ್ಣೀರಧಾರೆ ಹರಿಸಿದ್ದರು. ಆ ಬೆಳವಣಿಗೆ ಅಂದು ಪಕ್ಷದಲ್ಲಿ ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಆಮೇಲೆ ಆಜಾದ್ ನಡವಳಿಕೆಗಳು ಬದಲಾದವು. 2022ರಲ್ಲಿ ಅವರಿಗೆ ʼಪದ್ಮಭೂಷಣʼಪುರಸ್ಕಾರವನ್ನು ಘೋಷಣೆ ಮಾಡಿದಾಗ ಇನ್ನಷ್ಟು ಗೊಂದಲಗಳಿಗೆ ಕಾರಣವಾಯಿತು. ಬಿಜೆಪಿ, ನರೇಂದ್ರ ಮೋದಿ ಹಾಗೂ ಆಜಾದ್ ನಡುವಿನ ಸಂಬಂಧಗಳು ಏನು ಎಂಬ ಬಗ್ಗೆ ಅವರ ನಿರ್ಗಮನ ಉತ್ತರ ಕೊಟ್ಟಿದೆ” ಎಂದು ಮೂಲವೊಂದು ತಿಳಿಸಿದೆ.
ಅಷ್ಟು ಮಾತ್ರವಲ್ಲ; ಸಂಸತ್ತಿನ ಒಳಗೆ ಮತ್ತು ಹೊರಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಿದ್ದರೆ ಆಜಾದ್ ಅವರು ನರೇಂದ್ರ ಮೋದಿ ಅವರ ಜತೆ ಅಡ್ಜಸ್ಟ್ʼಮೆಂಟ್ ರಾಜಕಾರಣ ಮಾಡುತ್ತಿದ್ದರು ಎಂದು ಆ ಮೂಲಗಳು ಹೇಳಿವೆ.
ಇನ್ನೊಂದೆಡೆ ಪಕ್ಷದ ಕೆಲ ನಾಯಕರು ಆಜಾದ್ ವಿರುದ್ಧ ಮುಗಿಬಿದ್ದಿದ್ದಾರೆ. “ರಾಜ್ಯಸಭಾ ಅಧಿಕಾರಾವಧಿಯ ಅಂತ್ಯಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿ ದ್ರೋಹ ಬಗೆದಿರುವುದು ಅವರ ನಿಜವಾದ ವ್ಯಕ್ತಿತ್ವವನ್ನು ತೋರಿಸುತ್ತದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿ ಟೀಕಿಸಿದ್ದಾರೆ.
“ಕಾಂಗ್ರೆಸ್ ನಾಯಕತ್ವದಿಂದ ಅತ್ಯಂತ ಗೌರವದಿಂದ ನಡೆಸಿಕೊಳ್ಳಲ್ಪಟ್ಟ ವ್ಯಕ್ತಿಯೊಬ್ಬರು ತಮ್ಮ ಕೆಟ್ಟ ವೈಯಕ್ತಿಕ ದಾಳಿಯಿಂದ ದ್ರೋಹ ಬಗೆದಿದ್ದಾರೆ. ಇದು ಅವರ ನೈಜ ಸ್ವರೂಪವನ್ನು ಬಹಿರಂಗಪಡಿಸುತ್ತದೆ. ಗುಲಾಂ ನಬಿ ಆಜಾದ್ ಡಿಎನ್ಎ ಮೋದಿ-ಫೈಡ್ ಆಗಿದೆ” ಎಂದು ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ.