ಯಾವ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದ ಕೋಲಾರ ಜಿಲ್ಲಾ ಉಸ್ತುವಾರಿ ಮಂತ್ರಿ
by SK Chandrashekar kolar
ಕೋಲಾರ: ಗುತ್ತಿಗೆದಾರರ ಸಂಘ ತಮ್ಮ ವಿರುದ್ಧ ಮಾಡಿರುವ ಕಮಿಷನ್ ಕಲೆಕ್ಷನ್ ಆರೋಪದ ಬಗ್ಗೆ ನಿರಂತರವಾಗಿ ಮಾತನಾಡುತ್ತಿರುವ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು; ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ನಾಳೆ ಬೆಳಗ್ಗೆ (ಸೋಮವಾರ) 11 ಗಂಟೆಗೆ ಮಾನನಷ್ಟ ಮೊಕದ್ದಮೆ ನೊಟೀಸ್ ಕಳಿಸಲಾಗುವುದು ಎಂದು ತಿಳಿಸಿದ್ದಾರೆ.
ಕೋಲಾರದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಈಗಾಗಲೆ ನಾನು ಗುತ್ತಿಗೆದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ. ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಮಾನನಷ್ಟ ಮೊಕದ್ದಮೆ ನೊಟೀಸ್ ನೀಡಲಾಗುವುದು. ಭಾನುವಾರ ಅಂಚೇ ಕಚೇರಿ ಇರಲ್ಲ. ನಾಳೆ ಬೆಳಗ್ಗೆ 11 ಗಂಟೆಗೆ ನೊಟೀಸ್ ಸರ್ವ್ ಮಾಡಲಾಗುವುದು. ಅದಾದ 8 ದಿನಗಳಲ್ಲಿ ಅವರ ಹೇಳಿಕೆ ಆಧರಿಸಿ ಅವರ ವಿರುದ್ದ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕೆಂಪಣ್ಣ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲಾಗುವುದು. ಇದೆಲ್ಲದರ ಮಧ್ಯೆ ಕೋಲಾರದಲ್ಲಿ ಕಾಮಗಾರಿ ಪರಿಶೀಲನೆ ಮಾಡಲಾಗುವುದು, ಆಯಾ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿ ಪರಿಶೀಲನೆ ಮುಂದಿನ ವಾರದಿಂದ ನಡೆಸಲಾಗುತ್ತದೆ. ಅಧಿಕಾರಿಗಳ ಸಮ್ಮುಖದಲ್ಲೇ ಎಲ್ಲವೂ ನಡೆಯಲಿದೆ ಎಂದು ಮುನಿರತ್ನ ತಿಳಿಸಿದರು.
ಇನ್ನೂ ಡಿಸಿಸಿ ಬ್ಯಾಂಕ್ ಅಕ್ರಮ ಹಾಗೂ ಕಳಪೆ ರಸ್ತೆಗಳ ವಿರುದ್ದ ತನಿಖೆ ಮಾಡಲಾಗುವುದು, ಒಂದು ವೇಳೆ ಪತ್ರದ ಮೂಲಕ ಕ್ಷಮಾಪಣೆ ಕೋರಿದ್ದೆ ಆದಲ್ಲಿ, ಅರೋಪ ಮಾಡಿದವರು ಪ್ರಧಾನಿಗಳಿಗೆ ನೇರವಾಗಿ ಕ್ಷಮಾಪಣೆ ಪತ್ರ ನೀಡದ್ದೇ ಆದರೆ ಲೋಕಾಯುಕ್ತ, ರಾಜ್ಯಪಾಲರಿಗೆ ಅವರ ಬಳಿ ಇರುವ ದಾಖಲೆಗಳನ್ನ ನೀಡಿದರೆ ಮೊಕದ್ದಮೆ ವಾಪಸ್ ಪಡೆಯಲಾಗುವುದು ಎಂದು ಸಚಿವರು ಹೇಳಿದರು.
ವಿರೋಧ ಪಕ್ಷಗಳ ಬಳಿ ಏನಾದರೂ ದಾಖಲೆಗಳಿದ್ದರೆ ಕೊಡಲಿ, ಅದು ಬಿಟ್ಟು ರಾಜೀನಾಮೆ ಕೇಳುವ ಹಕ್ಕು ಅವರಿಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.