ಸಂಸದ ಪ್ರತಾಪ್ ಸಿಂಹ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ; ನಿನ್ನೆ ಬಂದಿದ್ದರೆ ಹೆದ್ದಾರಿಯಲ್ಲೇ ಸ್ವಿಮ್ಮಿಂಗ್ ಮಾಡಬಹುದಿತ್ತು ಎಂದು ಕುಟುಕಿದ ಮಾಜಿ ಸಿಎಂ
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಕಾಮಗಾರಿ ಅತ್ಯುತ್ತಮವಾಗಿದೆ ಎಂದು ಹೇಳಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಕಾರು ಚಲಿಸುವಾಗ ಆಲದ ಮರ ಉಳುಳಿಬಿದ್ದು ಸಾವನ್ನಪ್ಪಿದ್ದ ಬಿಡದಿಯ ಇಟ್ಟಮಡು ನಿವಾಸಿ ಬೋರೆಗೌಡರ ನಿವಾಸಕ್ಕೆ ಬೆಳಗ್ಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂಚತ್ವನ ಹೇಳಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಉತ್ತಮವಾದ ಕೆಲಸ ಏನಾಗಿದೆ ಎಂಬುದನ್ನು ಪ್ರತಾಪಸಿಂಹ ಬಂದು ನೋಡಲಿ. ಅವರೇ ನಿಂತು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ದರಲ್ಲ, ಅವರೇ ರಸ್ತೆ ನಿರ್ಮಾಣ ಮಾಡಿರುವ ರೀತಿ ಫೋಟೊ ತೆಗೆಸಿಕೊಂಡಿದ್ದರು. ಬಿಡದಿ ಬಳಿ ಬಂದು ಅಧಿಕಾರಿಗಳ ಸಭೆ ಮಾಡಿದ್ದರು. ಇಲ್ಲಿಯೇ ಬಂದು ಮಧ್ಯಸ್ಥಿಕೆ ವಹಿಸಿದ್ದರಲ್ಲ, ಈಗ ಬಂದು ನೋಡಲಿ, ಸಂಗಬಸಪ್ಪನದೊಡ್ಡಿ ಬಳಿ ಬಂದು ಸ್ವಿಮ್ಮಿಂಗ್ ಮಾಡಬಹುದು ಎಂದು ಮಾಜಿ ಮುಖ್ಯಮಂತ್ರಿಗಳು ಹರಿಹಾಯ್ದರು.