ಒತ್ತಡಕ್ಕೆ ಮಣಿದು ಜನೋತ್ಸವ ಮುಂದೂಡಿಕೆ ಘೋಷಣೆ; 3 ದಿನ ಶೋಕಾಚರಣೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರದ ಸಾಧನೆಗಳನ್ನು ಅಬ್ಬರದ ಮೆರವಣಿಗೆ ಮಾಡಲು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ʼಜನೋತ್ಸವʼ ಕಾರ್ಯಕ್ರಮವನ್ನು ಶತಾಯಗತಾಯ ಗುರುವಾರ ನಡೆಸಲೇಬೇಕೆಂದು ಹೊರಟಿದ್ದ ಕೆಲವರು ಉತ್ತರ ಕರ್ನಾಟಕದ ಶಾಸಕರ ಆವಾಜ್‌ಗೆ ಪತರಿಗುಟ್ಟಿಹೋಗಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳವಾರ ರಾತ್ರಿ ನಿಧನರಾದ ಹಾಲಿ ಸಚಿವ ಉಮೇಶ್ ಕತ್ತಿ ಅವರ ಗೌರವಾರ್ಥ ಮೂರು ದಿನಗಳ ಶೋಕಾಚರಣೆಯನ್ನು ಒಂದು ದಿನಕ್ಕಷ್ಟೇ ಇಳಿಸಿ ʼಜನೋತ್ಸವʼದ ಅಬ್ಬರದಲ್ಲಿ ತೇಲಿಹೋಗಲು ಉದ್ದೇಶಿಸಿದ್ದ ಬಿಜೆಪಿಯ ʼಕೆಲವರಿಗೆʼ ಸಂಘ ಪರಿವಾರದ ಉನ್ನತ ನಾಯಕರು ಹಾಗೂ ಉತ್ತರ ಕರ್ನಾಟಕದ ಬಿಜೆಪಿಯ ಬಹುತೇಕ ಶಾಸಕರು ಸರಿಯಾಗಿಯೇ ಬೆವರಿಳಿಸಿದ್ದಾರೆ ಎಂದು ನಿಖರ ಮೂಲಗಳಿಂದ ಗೊತ್ತಾಗಿದೆ.
ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿರುವ ʼಜನೋತ್ಸವʼ ಕಾರ್ಯಕ್ರಮವನ್ನು ಈಗಾಗಲೇ ಎರಡು ಸಲ ಮುಂದಕ್ಕೆ ಹಾಕಲಾಗಿದೆ. ಕರಾವಳಿಯ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಕಾರಣಕ್ಕೆ ಮೊದಲ ಬಾರಿಗೆ ಮುಂದೂಡಲಾಗಿತ್ತು. ಆಮೇಲೆ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಬರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎರಡನೇ ಸಲವೂ ಒಲ್ಲದ ಮನಸ್ಸಿನಿಂದಲೇ ಮುಂದಕ್ಕೆ ಹಾಕಲಾಗಿತ್ತು. ಈಗ ಮೂರನೇ ಸಲ ವಿಧಿ ಇಲ್ಲದೆ ಮುಂದೂಡಲಾಗಿದೆ.
ಮುಖ್ಯಮಂತ್ರಿ ಸುತ್ತಲೂ ಸದಾ ಗಿರಕಿ ಹೊಡೆಯುತ್ತಲೇ ಇರುವ ಪಟಾಲಂವೊಂದು ಜನೋತ್ಸವದ ಉಸ್ತುವಾರಿ ಹೊಂದಿದ್ದು, ಎರಡೂ ಸಲವೂ ಈ ಸಮಾವೇಶವನ್ನು ಒಲ್ಲದ ಮನಸ್ಸಿನಿಂದಲೇ ಮುಂದೂಡಿದ್ದರು. ಈಗ ಮೂರನೇ ಬಾರಿಯೂ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ಮುಂದೂಡಬೇಕಾಗಿ ಬಂದಿದೆ.
ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕತ್ತಿ ಅವರು ನಿಧನರಾಗುತ್ತಿದ್ದಂತೆ ಬಿಜೆಪಿ ಮತ್ತು ಸರಕಾರದಲ್ಲಿರುವ ಆ ʼಕೆಲವರಿಗೆʼಜನೋತ್ಸವದ ಚಿಂತೆ ಹತ್ತಿಕೊಂಡಿತ್ತು. ಸಾವಿನ ಮನೆಯಲ್ಲಿ ಉತ್ಸವ ಮಾಡಬೇಕೆ? ಬೇಡವೇ? ಎಂದು ರಾತ್ರಿಯೆಲ್ಲ ಗಂಭೀರ ಸಂದಿಗ್ಧದಲ್ಲಿ ಮುಳುಗಿದ್ದರು. ಹಾಲಿ ಸಚಿವರೊಬ್ಬರು ನಿಧನರಾದ ಕಠಿಣ ಸಂದರ್ಭದಲ್ಲಿಯೂ ಆ ʼಕೆಲವರʼ ಹುನ್ನಾರದಿಂದ ಸರಕಾರ ಕೇವಲ ಒಂದು ದಿನದ ಮಟ್ಟಿಗೆ ಕಾಟಾಚಾರದ ಶೋಕಾಚರಣೆ ನಡೆಸಿ, ಗುರುವಾರ ʼಜನೋತ್ಸವʼ ನಡೆಸುವ ಉಮೇದಿನಲ್ಲಿತ್ತು.
ಸರಕಾರದ, ಅದರಲ್ಲೂ ಆ ʼಕೆಲವರʼಚಿತಾವಣಿಯೂ ಉತ್ತರ ಕರ್ನಾಟಕದ ಶಾಸಕರ ಕಿವಿಗೆ ಬಿದ್ದಿದೆ. ಕೂಡಲೇ ತಮ್ಮದೇ ಶೈಲಿಯಲ್ಲಿ ಅವರು ಬಿಟ್ಟ ಆವಾಜ್‌ಗೆ ಈ ಪಟಾಲಂ ಬೆದರಿ ಹೋಗಿದೆ. ಪರಿಣಾಮವಾಗಿ ಗುರುವಾರ ನಡೆಯಬೇಕಿದ್ದ ʼಜನೋತ್ಸವʼವನ್ನು ಭಾನುವಾರಕ್ಕೆ ಮರುನಿಗದಿ ಮಾಡಲಾಗಿದೆ.
ಕೇವಲ ಒಂದು ದಿನಕ್ಕಷ್ಟೇ ಶೋಕಾಚರಣೆ ಘೋಷಿಸಿ, ಬೆಳಗಾವಿ ಜಿಲ್ಲೆಯಲ್ಲಷ್ಟೇ ಸಾರ್ವಜನಿಕ ರಜೆ ಘೋಷಿಸಿದ್ದ ಸರಕಾರದ ನಡೆ ಅನೇಕ ಶಾಸಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸರಕಾರವು ಕತ್ತಿ ಅವರನ್ನು ಅಪಮಾನಿಸುತ್ತಿದೆ ಎಂದು ಅನೇಕರು ಭಾವಿಸಿದರು. ಇದೇ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, “ಕ್ಯಾಬಿನೇಟ್ ಸಚಿವರೊಬ್ಬರು ನಿಧನರಾದ ದುಃಖದ ಸಂದರ್ಭದಲ್ಲಿ ಜನೋತ್ಸವ ಅಗತ್ಯವೇ?” ಎಂದು ಪ್ರಶ್ನೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ಶುರುವಾಗಿತ್ತು. ಮಾಧ್ಯಮಗಳು ಕೂಡ, ಸೂತಕದ ಮನೆಯಲ್ಲಿ ಉತ್ಸವ ಬೇಕೆ ಎಂದು ಕೇಳಿದ್ದವು.
ಅಲ್ಲಿಗೆ ದೊಡ್ಡಬಳ್ಳಾಪುರದ ಜನೋತ್ಸವ ಭಾನುವಾರಕ್ಕೆ ಮುಂದೂಡಲ್ಪಟ್ಟಿತು.
ಅಂತ್ಯಕ್ರಿಯೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸ್ವಗ್ರಾಮ ಬೆಲ್ಲದಬಾಗೇವಾಡಿಯ ತಮ್ಮ ತೋಟದಲ್ಲಿ ಕತ್ತಿ ಅವರ ಅಂತ್ಯಕ್ರಿಯೆ ನಡೆಯಿತು. ಬುಧವಾರ ರಾತ್ರಿ ಸಕಲ ಸರಕಾರಿ ಗೌರವಗಳನ್ನು ಅರ್ಪಿಸಿ ಅವರನ್ನು ಬೀಳ್ಕೊಡಲಾಯಿತು.
ಕತ್ತಿ ಅವರ ಅತ್ಯಕ್ರಿಯೆಯಲ್ಲಿ ಅನೇಕ ಸ್ವಾಮೀಜಿಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ,ಬಹುತೇಕ ಶಾಸಕರು, ಸಚಿವರು ಭಾಗಿಯಾಗಿ ಅಗಲಿದ ನಾಯಕನಿದ ಭಾವಪೂರ್ಣ ವಿದಾಯ ಹೇಳಿದರು.