ಐಟಿ ಕಂಪನಿಗಳ ಕಡೆ ಬೊಟ್ಟು ಮಾಡಿದ ವಿಶ್ರಾಂತ ಲೋಕಾಯುಕ್ತರು
ಧಾರವಾಡ: ಬೆಂಗಳೂರಿನ ರಾಜಕಾಲುವೆ ಒತ್ತುವರಿ ಹಿಂದೆ ಐಟಿ ಕಂಪನಿಗಳ ಕೈವಾಡವೂ ಇದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆರೋಪಿಸಿದ್ದಾರೆ.
ಜತೆಗೆ ಆಗರ್ಭ ಶ್ರೀಮಂತರ ಕಟ್ಟಡದಿಂದಲೂ ಒತ್ತುವರಿಯಾಗಿದೆ ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜನಸಂಖ್ಯೆ ಜಾಸ್ತಿಯಾದಂತೆ ಬಡಾವಣೆಗಳೂ ಜಾಸ್ತಿಯಾಗುತ್ತಿವೆ ಎಂದು ತಿಳಿಸಿದರು.
ಸುಭಾಷ್ನಗರ ಬಸ್ ನಿಲ್ದಾಣ ಕೆರೆಯಾಗಿತ್ತು, ಸಂಪಂಗಿಯಲ್ಲಿ ಕ್ರೀಡಾಂಗಣ ಮಾಡಿದ್ದಾರೆ. ಅಕ್ಕಿ ತಿಮ್ಮನ ಹಳ್ಳಿಯಲ್ಲಿ ಹಾಕಿ ಕ್ರೀಡಾಂಗಣ ಮಾಡಿದ್ದಾರೆ.
ಎಲ್ಲ ಕೆರೆಗಳನ್ನು ಬಿಡಿಎ ಮುಖಾಂತರ ಲಾಭಕ್ಕಾಗಿ ಬಳಕೆ ಮಾಡಿದ್ದಾರೆ ಎಂದು ಬೇಸರಪಟ್ಟರು.
ಇದರಲ್ಲಿ ಜನರ ಹಾಗೂ ಅಧಿಕಾರದಲ್ಲಿ ಇದ್ದವರ, ಇಲ್ಲದವರ ದುರಾಸೆಯೂ ಇದೆ. ಐಟಿ ಕಂಪನಿಗಳ ಕೈವಾಡವೂ ಇದೆ. ಆಗರ್ಭ ಶ್ರೀಮಂತರ ಕಟ್ಟಡಗಳಿಂದಲೂ ಒತ್ತುವರಿಯಾಗಿದೆ ಎಂದು ದೂರಿದರು.
ಬಹಳ ಹಿಂದೆಯೇ ನಾನು ರಾಜಕಾಲುವೆ ಒತ್ತುವರಿ ಬಗ್ಗೆ ಎರಡು ವರದಿಯನ್ನು ಎನ್ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಮಂಡಳಿ) ಹಾಗೂ ಸರ್ಕಾರಕ್ಕೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಮಹಾರಾಜರು ಹಿಂದೆ ಮಳೆ ನೀರು ಸಂಗ್ರಹಿಸುವ ಉದ್ದೇಶದಿಂದ ನೂರಾರು ಕೆರೆ ಕಟ್ಟಿಸಿದ್ದರು, ಮಳೆ ಬಂದಾಗ ಅಲ್ಲಿಗೇ ನೀರು ಹರಿದು ಹೋಗುತ್ತಿತ್ತು ಈಗ ಬೆಂಗಳೂರಲ್ಲಿ ಕೆರೆಗಳೇ ಮಾಯವಾಗಿವೆ ಎಂದು ಅಸಮಾಧಾನ ಪಟ್ಟರು.
ಬೆಂಗಳೂರಿನಲ್ಲಿ ಸುಮಾರು 200 ಕೆರೆಗಳಿದ್ದವು. ಭಾಷಾವಾರು ಪ್ರಾಂತ್ಯ ಆದಾಗ ಬೆಂಗಳೂರು ರಾಜಧಾನಿ ಆಯಿತು. ಅಗ ಇಲ್ಲಿ ದಿಢೀರ್ ಜನಸಂಖ್ಯೆ ಹೆಚ್ಚಾಯಿತು.
ಆದರೆ ಸರ್ಕಾರ ಯೋಜನೆ ಮಾಡಿ ಜಾಗ ಕೊಡೋದನ್ನು ಬಿಟ್ಟು ರಾಜಕಾಲುವೆ ಒತ್ತುವರಿ ಮಾಡಲು ಅವಕಾಶ ಮಾಡಿಕೊಟ್ಟಿತು.
ನೀರು ಹೋಗುವ ರಾಜಕಾಲುವೆ ಈಗ ಅಲ್ಲಿ ಇಲ್ಲಾ, ಈಗ ಮಳೆ ಬಂದರೆ ನೀರು ಹೋಗಲೂ ಜಾಗ ಇಲ್ಲಾ, ಎಲ್ಲಾ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ ಎಂದು ಹೇಳಿದರು.
ಈ ಹಿಂದೆಯೂ ಬೆಂಗಳೂರಿನಲ್ಲಿ ಮಳೆಯಾಗಿದೆ. ಹಿಂದೆ ಕೆರೆ ನೀರು ಹೋಗಲು ಒಂದು ಸಿಸ್ಟಮ್ ಇತ್ತು. 70ರ ದಶಕದವರೆಗೆ ಆರ್ಮಿ ಅವರಿಗೆ ಫ್ಯಾನ್ ಬೇಕಿರಲಿಲ್ಲ, ಅಷ್ಟು ತಣ್ಣನೆಯ ಗಾಳಿ ಇರುತ್ತಿತ್ತು.
ಈಗ ಬಿಸಿಲು ಜಾಸ್ತಿಯಾಗಿದೆ, ಕೆರೆಗಳೂ ಇಲ್ಲ. ಇದೆಲ್ಲವೂ ಮನುಷ್ಯನ ದುರಾಸೆಯ ಪ್ರತಿಫಲ ಎಂದು ಸಂತೋಷ್ ಹೆಗ್ಡೆ ತೀವ್ರ ಬೇಸರ ವ್ಯಕ್ತಪಡಿಸಿದರು.