ದಲಿತ ಸಹೋದರಿಯರಿಬ್ಬರ ಮೇಲೆ ಅತ್ಯಾಚಾರ, ಕೊಲೆ ದೃಢ
ಲಖನೌ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಘೋರ ದೌರ್ಜನ್ಯಗಳು ಏಕೆ ಹೆಚ್ಚುತ್ತಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಖಾರವಾಗಿ ಪ್ರಶ್ನಿಸಿದ್ದಾರೆ.
ಯೋಗಿ ಆದಿತ್ಯನಾಥ ಸರಕಾರ ಇದಕ್ಕೆಲ್ಲ ಕಡಿವಾಣ ಹಾಕದೆ ಏನು ಮಾಡುತ್ತಿದೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಲಖಿಂಪುರ ಖೇರಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರ ಮೃತ ದೇಹ ಪತ್ತೆಯಾದ ವರದಿ ಸಂಬಂಧ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೆಣ್ಣುಮಕ್ಕಳ ಮೇಲೆಯೇ ಘೋರ ಅಪರಾಧಗಳು ಸಂಭವಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಇಬ್ಬರು ಬಾಲಕಿಯರ ದೇಹ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹಗಲಲ್ಲೇ ಬಾಲಕಿಯರನ್ನು ಅಪಹರಿಸಲಾಗಿದೆ ಎಂದು ಸಂಬಂಧಿಕರು ಹೇಳುತ್ತಿದ್ದಾರೆ. ಇಬ್ಬರು ಸಹೋದರಿಯರ ಹತ್ಯೆ ಹೃದಯ ವಿದ್ರಾವಕವಾದದ್ದು ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
ಟ್ವಿಟರ್‍ನಲ್ಲಿ ಮಾಧ್ಯಮಗಳ ವರದಿಯನ್ನು ಹಂಚಿಕೊಂಡಿದ್ದು, ಹುಡುಗಿಯರ ಶವಗಳನ್ನು ಮೂವರು ಪುರುಷರು ಅಪಹರಿಸಿದ ನಂತರ ಮರಕ್ಕೆ ನೇಣು ಹಾಕಿರುವುದು ಕಂಡುಬಂದಿದೆ. ಸರ್ಕಾರ ಯಾವಾಗ ಎಚ್ಚೆತ್ತುಕೊಳ್ಳುತ್ತದೆ ಎಂದು ಕಿಡಿಕಾರಿದ್ದಾರೆ.
ಅತ್ಯಾಚಾರ, ಕೊಲೆ ದೃಢ
ಉತ್ತರ ಪ್ರದೇಶದ ಲಖೀಮ್ ಪುರ್ ಖೇರಿಯಲ್ಲಿ ದಲಿತ ಸಹೋದರಿಯರಿಬ್ಬರ ಸಾವು ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಪ್ರಕಟಗೊಂಡಿದೆ. ಅವರಿಬ್ಬರ ಮೇಲೆ ಪೈಶಾಚಿಕವಾಗಿ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಂದಿರುವುದು ದೃಢಪಟ್ಟಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಈ ವಿಷಯ ತಿಳಿಸಿದ್ದಾರೆ.
ಲಖೀಮ್ ಪುರ್ ಖೇರಿಯಲ್ಲಿ ಬುಧವಾರ (ಸೆ.14 ರಂದು) ಇಬ್ಬರು ಯುವತಿಯರ ಶರೀರ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.