ವಿಜಯದಶಮಿ ಬ್ರೇಕ್ ನಂತರ ಪುನಾರಂಭವಾಯಿತು ಯಾತ್ರೆ
ಬೆಂಗಳೂರು/ಮಂಡ್ಯ: ಆಯುಧ ಪೂಜೆ ಮತ್ತು ವಿಜಯದಶಮಿ ನಿಮಿತ್ತ ಎರಡು ದಿನಗಳ ಬ್ರೇಕ್ ನಂತರ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಪುನಾರಂಭವಾಗಿದೆ.
ಪುತ್ರನ ಜತೆ ಸ್ವಲ್ಪ ದೂರ ಹೆಜ್ಜೆ ಹಾಕುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಐಕ್ಯತಾ ಯಾತ್ರೆಗೆ ನವ ಚೈತನ್ಯ ತುಂಬಿದ್ದಾರೆ.
ಸ್ವಲ್ಪ ಕಾಲ ಯಾತ್ರೆಯಲ್ಲಿ ಭಾಗಿಯಾಗುವೆ ಎಂದು ಆಗಮಿಸಿದ್ದ ಸೋನಿಯಾ ಅವರು, ಕಾರ್ಯಕರ್ತರ ಹುಮ್ಮಸ್ಸು ಕಂಡು ಹೆಚ್ಚು ಸಮಯ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಮಾರ್ಗದ ನಡುವೆ ಮೂರು ಸಲ ಕಾರಿಂದ ಇಳಿದು ಸ್ವಲ್ಪ ದೂರ ಪಾದಯಾತ್ರೆಯಲ್ಲಿ ನಡೆದ ಅವರು, ಮಧ್ಯಾಹ್ನದ ಹೊತ್ತಿಗೆ ರಾಹುಲ್ʼಗೆ ಶುಭಕೋರಿ ಮೈಸೂರಿನಿಂದ ವಿಶೇಷ ವಿಮಾನದಲ್ಲಿ ನವದೆಹಲಿಗೆ ತೆರಳಿದರು.
ಸೋನಿಯಾ ಗಾಂಧಿ ಅವರು ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗೇಟ್ ಬಳಿ ಯಾತ್ರೆಯನ್ನು ಸೇರಿಕೊಂಡರು. ಆಗ ಬೆಳಗ್ಗೆ ೮.೩೦ ಗಂಟೆ ಸಮಯವಾಗಿತ್ತು. ೧೫ ನಿಮಿಷಗಳ ಕಾಲ ಅವರು ರಾಹುಲ್ ಗಾಂಧಿ ಅವರ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಮಹಿಳೆಯರು ಸೋನಿಯಾ ಅವರಿಗೆ ಆರತಿ ಬೆಳಗಿ ಪೂರ್ಣಕುಂಭದ ಸ್ವಾಗತ ಕೋರಿದರು. ವಿದ್ಯಾರ್ಥಿಗಳು, ಯುವಕರು ಸಾಲುಗಟ್ಟಿ ಫೋಟೋ ತೆಗೆಸಿಕೊಂಡರು. ಸೋನಿಯಾ ಅವರು ಮಕ್ಕಳು, ವಿದ್ಯಾರ್ಥಿಗಳಿಗೆ ಚಾಕೋಲೇಟ್ ಕೊಟ್ಟರು.
ಅಮೃತಿ ಗ್ರಾಮದ ತನಕ ನಡೆದ ಸೋನಿಯಾ ಗಾಂಧಿ ಅವರು ರಾಹುಲ್ ಮನವಿಯ ಮೇರೆಗೆ ಕೆಲಹೊತ್ತು ಕಾರಿನಲ್ಲಿ ಕೂತರು. ನಂತರ ಜಕ್ಕನಹಳ್ಳಿ ಸಮೀಪ ಅಮ್ಮಾಸ್ ಕೆಫೆಯಲ್ಲಿ ಪುತ್ರನ ಜತೆ ಕಾಫಿ ಸೇವಿಸಿ ಐದು ನಿಮಿಷ ಪುನಾ ಹೆಜ್ಜೆ ಹಾಕಿದರು.
ಇದೇ ವೇಳೆ ಜನಜಂಗುಳಿಯಲ್ಲಿ ಕೆಳಕ್ಕೆ ಬಿದ್ದ ಮಗುವನ್ನು ಸೋನಿಯಾ, ರಾಹುಲ್ ಇಬ್ಬರೂ ಮೇಲೆತ್ತಿ ಸಂತೈಸಿದರು. ಸೋನಿಯಾ ಅವರು ಆ ಬಾಲಕಿಗೆ ಚಾಕೋಲೇಟ್ ನೀಡಿ ಮುದ್ದು ಮಾಡಿದರು. ಹೀಗೆ ಮಾರ್ಗಮಧ್ಯೆ ಹೆಜ್ಜೆ ಹಾಕುವಾಗ ತಾಯಿಯ ಶೂ ಲೇಸ್ ಕಳಚಿಕೊಂಡಿತು. ರಾಹುಲ್ ಅದನ್ನು ಕಟ್ಟಿದರು.
ಹೀಗೆ ಸೋನಿಯಾ ಗಾಂಧಿ ಅವರು ಪುತ್ರನ ಪಾದಯಾತ್ರೆಗೆ ಚೈತನ್ಯ ತುಂಬಿದರಲ್ಲದೆ, ಬಳ್ಳಾರಿಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.