ಅಜ್ಞಾನದ ಕತ್ತಲು ಸರಿಸಿ ಜ್ಞಾನದ ಬೆಳಕು ಚೆಲ್ಲುವ ದೀಪಾವಳಿ
By Guruprasad Hawaldar
ನಮ್ಮ ಭಾರತೀಯ ಪರಂಪರೆಯಲ್ಲಿ “ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ” ಎಂಬ ಮಾತಿದೆ. ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಜೀವನದ ಅಥವಾ ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುವ ಬೆಳಕಿನ ಹಬ್ಬ ದೀಪಾವಳಿ, ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ಹಬ್ಬವಾಗಿದೆ.
ಕಾರ್ತಿಕ ಅಮವಾಸ್ಯೆಗೆ ಭಾರತದ ಪ್ರತಿಯೊಂದು ಮನೆಯಲ್ಲಿಯೂ ದೀಪಗಳನ್ನು ಬೆಳಗಿಸಿ ಅಬಾಲ ವೃದ್ಧರೂ ಸಂತೋಷಪಡುತ್ತಾರೆ. ಎಲ್ಲರೂ ತಮ್ಮ ತಮ್ಮ ಮನೆ-ಮನ, ಗುಡಿಗಳನ್ನು ಶುಚಿಗೊಳಿಸಿ, ಬಣ್ಣಗಳಿಂದ ಶೃಂಗರಿಸುತ್ತಾರೆ. ದೀಪಾವಳಿ ಭಾರತೀಯರ ಒಂದು ದೊಡ್ಡ ಹಬ್ಬ. ‘ಅವಳಿ’ ಎಂದರೆ ಮಾಲೆ, ಸಾಲು ಎಂದರ್ಥ. ಹಬ್ಬದ ದೃಷ್ಟಿಯಿಂದ ನೋಡಿದರೆ ದೀಪಾವಳಿ ದೀಪಗಳ ಸಾಲಿನಂತೆ ಹಬ್ಬಗಳ ಸಾಲೂ ಹೌದು.
ನೀರು ತುಂಬುವ ಹಬ್ಬದಿಂದ ಆರಂಭವಾಗಿ ನರಕ ಚತುರ್ದಶಿ, ಧನ್ ತೇರಸ, ಬಲಿಪಾಡ್ಯಮಿ, ಭಾವನ ಬಿದಿಗೆ, ಅಕ್ಕನ ತದಿಗೆ, ಪಂಚಮಿವರೆಗೆ ಪ್ರತಿದಿನವೂ ಹಬ್ಬವೋ ಹಬ್ಬ. ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ ಮೂಲತಃ ಅದು ಐದು ದಿನಗಳ ಹಬ್ಬ. ಈ ಐದು ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ ಅಮಾವಾಸ್ಯೆ , ನಾಲ್ಕನೇ ದಿನ ಬಲಿಪಾಡ್ಯಮಿ ಹಾಗೂ ಐದನೇ ದಿನ ಯಮದ್ವಿತೀಯ ಆಚರಣೆ ಇರುತ್ತದೆ.
ವ್ಯಾಪಾರಸ್ಥರು ತಮ್ಮ ಹಳೆಯ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆಗಳನ್ನು ತೆರೆಯುತ್ತಾರೆ. ಧನ ದೇವತೆ ‘ಲಕ್ಷ್ಮೀ’ ಯನ್ನು ಇದೇ ಸಮಯದಲ್ಲಿ ಆವಾಹನೆ ಮಾಡಿಕೊಂಡು ಪೂಜಿಸಲಾಗುತ್ತದೆ.
ದೀಪಾವಳಿ ಬೆಳಕಿನ ಹಬ್ಬವಾಗಿದ್ದು ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವ ಇದೆ. ದೀಪದಾನವು ಈ ಹಬ್ಬದಲ್ಲಿ ಮಾಡುವ ವಾಡಿಕೆ ಇದೆ. ಸ್ಥೂಲ ದೀಪದ ಜೊತೆಗೆ ಆತ್ಮಜೋತಿಯನ್ನು ಬೆಳಗಿಸಿದರೆ ನಮ್ಮ ಜೀವನ ಪರಿಪೂರ್ಣ ವಾಗುತ್ತದೆ. ಪ್ರತಿ ಒಂದು ಹಬ್ಬಕ್ಕೆ ತನ್ನದೇ ಆದ ಹಿನ್ನೆಲೆ ಇದ್ದು, ಅಧ್ಯಾತ್ಮಿಕ ರಹಸ್ಯವನ್ನು ತಿಳಿಸಿಕೊಡುವುದರ ಜತೆಗೆ ಅದನ್ನು ತಮ್ಮ ನಿತ್ಯ ಜೀವನದಲ್ಲಿ ಸಹಜವಾಗಿ ಹೇಗೆ ಅಳವಡಿಕೊಳ್ಳುಬೇಕು ಎನ್ನುವುದನ್ನು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹೇಳಲಾಗುತ್ತದೆ. ಅಜ್ಞಾನದ ಕತ್ತಲೆಯಿಂದ ಸತ್ಯ ಜ್ಞಾನದ ಬೆಳಕನ್ನು ನಾವು ಪಡೆದರೆ ನಮ್ಮ ಈ ಮಾನವ ಜನ್ಮ ಸಾರ್ಥಕ.
ನಮಗೆಲ್ಲ ಗೊತ್ತಿರುವಂತೆ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಈ ಕಲಿಯುಗದ ಅಂತಿಮ ಸಮಯವು ಪಂಚವಿಕಾರ ಮತ್ತು ಅಸುರಿಗುಣಗಳ ಸಾಮ್ರಾಜ್ಯದ ಸಮಯವಾಗಿದೆ. ಪ್ರತಿಯೊಬ್ಬ ನರ-ನಾರಿಯರ ಮನಸ್ಸಿನ ಮೇಲೆ ವಿಕಾರಗಳ ರಾಜ್ಯ ಇದೆ. ಇದಕ್ಕೆ ‘ನರಕಾಸುರ’ ಅಥವಾ ‘ರಾಜಾಬಲಿಯ’ ಅಧಿಪತ್ಯ ಎಂದು ಹೇಳಲಾಗುತ್ತದೆ.
ಭಾರತವು ಸತ್ಯಯುಗದಲ್ಲಿ ಸ್ವರ್ಗವಾಗಿತ್ತು. ಅಲ್ಲಿನ ಮನುಷ್ಯರೆಲ್ಲರು ದೇವ-ದೇವತೆಗಳಾಗಿದ್ದರು. ಅವರೇ ಜನ್ಮ ಮರಣದ ಚಕ್ರದಲ್ಲಿ ಬರುತ್ತಾ ಈಗ ನರಕದಲ್ಲಿ ‘ನರಕಾಸುರ’ ಅಥವಾ ‘ಬಲಿ’ಯ ಅಧೀನರಾಗಿದ್ದಾರೆ. ಆತ್ಮಜ್ಞಾನ ಹಾಗೂ ನಿರಾಕಾರ ಶಿವನ ಧ್ಯಾನದಿಂದ ನಾವು ಪುನಃ ಬಂಧನ ಮುಕ್ತರಾಗಲು ಸಾಧ್ಯವಿದೆ. ದೀಪಾವಳಿಯ ‘ಬಲಿ’ ರಾಜಾ ಮತ್ತು ನರಕಾಸುರನ ಎರಡು ಕಥೆಗಳು ಲಾಕ್ಷಣಿಕ ಭಾಷೆಯ ರೂಪದಲ್ಲಿ ವರ್ಣನೆ ಮಾಡಲಾಗಿದೆ. ಈಶ್ವರೀಯ ಜ್ಞಾನದ ದೃಷ್ಟಿಯಲ್ಲಿ ನೋಡಿದಾಗ ‘ನರಕಾಸುರ’ ಮಾಯೆ ಅಥವಾ ಮನೋವಿಕಾರಗಳ ರೂಪವಾಗಿದೆ. ಕಾಮ, ಕ್ರೋಧ, ಲೋಭ, ಮೋಹ, ಹಾಗೂ ಅಹಂಕಾರಗಳು ಆಸುರಿ ಲಕ್ಷಣಗಳು ಮತ್ತು ನರಕದ ದ್ವಾರ ಆಗಿವೆ. ಈ ವಿಕಾರಗಳನ್ನು ಜಯಿಸುವುದು ಎಂದರೆ ‘ಬಲಿ’ ಕೊಡುವುದು ಎಂದು ಹೇಳಲಾಗುತ್ತದೆ.
ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ್ದು, ರಾವಣ ಸಂಹಾರದ ಬಳಿಕ ಶ್ರೀರಾಮ ದೇವರು ಸೀತಾ ಸಮೇತರಾಗಿ ಮತ್ತೆ ಅಯೋಧ್ಯೆ ಪ್ರವೇಶಿಸಿದ್ದು, ಅಸಾಮಾನ್ಯ ಶೂರನಾದರೂ ಅತಿಯಾಸೆಗೆ ಬಲಿಯಾದ ಬಲಿ ಚಕ್ರವರ್ತಿಯನ್ನು ವಾಮನ ಮೂರ್ತಿ ಪಾತಾಳಕ್ಕೆ ತುಳಿದದ್ದು, ಸಮುದ್ರಮಥನ ಕಾಲದಲ್ಲಿ ಲಕ್ಷ್ಮೀದೇವಿಯ ಜನನವಾಗಿದ್ದು, ಇಂದ್ರನ ಕ್ರೋಧ ರೂಪವಾದ ಮಳೆಯಿಂದ ಗೋವುಗಳನ್ನು ರಕ್ಷಿಸಲು ಶ್ರೀಕೃಷ್ಣ ಗೋವರ್ಧನಗಿರಿಯನ್ನು ಎತ್ತಿ ಹಿಡಿದದ್ದು… ಇದೆಲ್ಲವೂ ದೀಪಾವಳಿಯ ಜತೆಗೆ ಬೆಸೆದುಕೊಂಡ ಪೌರಾಣಿಕ ಕಥನಗಳು. ಎಲ್ಲ ಕಥೆಗಳ ಆಳದಲ್ಲಿರುವುದು ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ; ಅಸಹಾಯಕತೆಯ ಕ್ಷಣಗಳಲ್ಲಿ ಕೈಹಿಡಿವ ದೇವರ ದಯೆ. ಐತಿಹಾಸಿಕವಾಗಿ ಭಗವಾನ್ ಮಹಾವೀರ ನಿರ್ವಾಣ ಹೊಂದಿದ್ದೂ ಇದೇ ಕಾಲದಲ್ಲಿ.
ಪುರುಷ ಮಾತ್ರರಿಂದ ಮರಣವಿಲ್ಲದ ವರ ಪಡೆದ ನರಕಾಸುರನನ್ನು ಸಂಹರಿಸುವಲ್ಲಿ ಕೃಷ್ಣ ನಿಮಿತ್ತ ಮಾತ್ರ. ಧನುರ್ಧಾರಿಣಿಯಾಗಿ ಕದನ ಕಣದಲ್ಲಿ ಸೆಣಸಿ ಗೆದ್ದದ್ದು ಸತ್ಯಭಾಮೆ. ಅವಳಿಂದಾಗಿಯೇ 16,000 ಗೋಪಿಕಾ ಸ್ತ್ರೀಯರ ಬಂಧಮುಕ್ತಿ. ಸಮುದ್ರಮಥನ ಕಾಲದಲ್ಲಿ ಎದ್ದು ಬಂದ ಲಕ್ಷ್ಮೀ ಕಣ್ಣಮುಂದೆ ಐಶ್ವರ್ಯ ಮಾತೆಯಾಗಿ ಮೆರೆದಾಡಿದ್ದರ ಮೂಲವಿರುವುದು ಇಲ್ಲಿಯೇ. ಇದು ಸ್ತ್ರೀಶಕ್ತಿಯ ದ್ಯೋತಕ. ದೀಪಾವಳಿಯ ಸರ್ವ ದಿನಗಳಲ್ಲೂ ಮಹಿಳೆಯರೇ ಪ್ರಧಾನ ಪಾತ್ರ ವಹಿಸುವುದು ವಿಶೇಷ.
ಆತ್ಮಜ್ಞಾನ ಎಂದರೆ ಆತ್ಮದೀಪವನ್ನು ಬೆಳಗಿಸುವುದು. ನಾನು ಒಂದು ಜ್ಯೋತಿ, ಜಾತಿ ಇಲ್ಲದ ಅತಿಸೂಕ್ಷ್ಮ ಆತ್ಮಜ್ಯೋತಿ. ಶರೀರದ ಹಣೆಯ ಮಧ್ಯದಲ್ಲಿ ಹೊಳೆಯುವ ಚ್ಯೆತನ್ಯ ಜ್ಯೋತಿ, ದೇಹ ಎಂಬ ರಥದ ಸಾರಥಿ ನಾನು ಆತ್ಮ. ದೇಹದ ಮೂಲಕ ಈ ಸೃಷ್ಟಿ ನಾಟಕದಲ್ಲಿ ಪಾತ್ರ ಅಭಿನಯಿಸುವ ಪಾತ್ರಧಾರಿ ನಾನು. ಈ ರೀತಿ ನಿತ್ಯಚಿಂತನೆ ಮಾಡಬೇಕು. ಇದನ್ನೇ ಆತ್ಮಾನುಭೂತಿ ಎಂದು ಕರೆಯಲಾಗುತ್ತದೆ. ಆತ್ಮಜ್ಯೋತಿಯನ್ನು ಬೆಳಗಿಸಲು ಜ್ಞಾನಘೃತ ಬೇಕು.
ಪರಮಾತ್ಮನು ನಿರಾಕಾರ, ಅಯೋನಿಜ, ಅಭೊಕ್ತ, ಅಜನ್ಮ, ಅವ್ಯಕ್ತ ಅಶರೀರಿ, ಅವಿಭಾಜ್ಯ, ಅಮರ, ಅವಿನಾಶಿ, ಸರ್ವಶ್ರೇಷ್ಠನಾದ, ಶಿವನು, ಅವನೇ ಅಲ್ಲಾ, ಅವನೆ ಈಶ್ವರ, ಅವನೇ ಗಾಡ್, ಓಂಕಾರನು, ‘ದೇವನೊಬ್ಬ, ನಾಮ ಹಲವು, ಭಾವ ಒಂದೇ’, ಭಾಷೆ ಹಲವು, ನಮ್ಮಲ್ಲೇಕೆ ಭೇದವೂ. ನಾನು ಹಿಂದು, ನಾನು ಮುಸಲ್ಮಾನ, ಕ್ರೈಸ್ತರೆಂಬ ಭೇದವೂ. ನಾಳೆ ನಾಡನಾಳುವಂತಾ ಮಕ್ಕಳಲ್ಲಿ ಜಗಳವೂ. ಬ್ರಹ್ಮ, ವಿಷ್ಣು, ಬಸವ, ಯೇಸು, ನಾನಕ್ ರೆಲ್ಲ ಒಬ್ಬದೇವನ ಮಕ್ಕಳು. ಸರ್ವಧರ್ಮವನ್ನು ಬಿಟ್ಟು, ದೇಹ ಧರ್ಮವನ್ನು ಸುಟ್ಟು, ನಿರಾಕಾರ ಜೋತಿಬಂಧು ತಂದೆ ಶಿವನ ನೆನೆಸಿದಾಗ ಮುಕ್ತಿ ಮತ್ತು ಜೀವನಮುಕ್ತಿಯು ಪ್ರಾಪ್ತವಾಗುವುದು. ಹೀಗೆ ನಾನು ಆತ್ಮಜ್ಯೋತಿಯಾಗಿ ಪರಮಜ್ಯೋತಿಯನ್ನು ನೆನಪು ಮಾಡುವುದಕ್ಕೆ ಸಹಜ ರಾಜಯೋಗವೆಂದು ಹೇಳುತ್ತಾರೆ.
ಬೌದ್ಧರಲ್ಲಿರುವ ಹಲವಾರು ಪಂಗಡಗಳು ದೀಪಾವಳಿಯ ಮೂರು ದಿನ ಪೂಜೆ ಮಾಡುತ್ತಾರೆ. ಸಿಖ್ಖರು ಕೂಡ ಆಚರಿಸುತ್ತಾರೆ. ಜೈನರು, ಬೌದ್ಧರು ಸಿಖ್ಖರು, ಹಿಂದೂಗಳು, ಕಾಡಿನಿಂದ ಹಿಡಿದು ನಾಡಿನ ಜನರವರೆಗೂ ಆಚರಿಸುವ ಪುರಾತನ ಹಬ್ಬ.
ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು. ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ.
ಈ ಹಬ್ಬವು ಅಸುರಿ ಗುಣಗಳ ಮೇಲೆ ದೇವತ್ವದ ವಿಜಯದ ಪ್ರತೀಕವಾಗಿದೆ. ದೀಪಾವಳಿಯಂದು ಎಲ್ಲರೂ ತಮ್ಮ-ತಮ್ಮ ಮನೆಗಳನ್ನು, ಗಲ್ಲಿಗಳನ್ನು, ಅಂಗಡಿಗಳನ್ನು ದೀಪಗಳಿಂದ ಬೆಳಗಿಸುತ್ತಾರೆ. ಇದರ ಜೊತೆ-ಜೊತೆಗೆ ಮನಸ್ಸಿನ ಅಜ್ಞಾನದ ಕತ್ತಲನ್ನು ದೂರ ಮಾಡುವಂತಹ ಜ್ಞಾನದೀಪವನ್ನು ಬೆಳಗಿಸಿಕೊಳ್ಳುವುದು ಸಹ ಅವಶ್ಯಕವಾಗಿದೆ.
ಇಲ್ಲಿ ಅಮಾವಾಸ್ಯೆಯು ಅಜ್ಞಾನ ಅಂಧಕಾರದ ಪ್ರತೀಕವಾಗಿದೆ. ಆಧ್ಯಾತ್ಮಿಕ ಭಾಷೆಯಲ್ಲಿ ಕತ್ತಲನ್ನು ಅಜ್ಞಾನವೆಂದು ಕರೆಯುತ್ತಾರೆ. ಹಾಗಾಗಿ ಭಕ್ತರು ಭಗವಂತನಲ್ಲಿ ಈ ರೀತಿ ಮೊರೆ ಇಡುತ್ತಾರೆ – ‘ದೇವರೇ, ನಮ್ಮನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗು, ಕತ್ತಲಿನಿಂದ ಬೆಳಕಿನಡೆಗೆ ಕರೆದುಕೊಂಡು ಹೋಗು, ಮೃತ್ಯುವಿನಿಂದ ಅಮರತ್ವದೆಡೆಗೆ ಕರೆದುಕೊಂಡು ಹೋಗು.’ ಯಾರು ಈ ದೀಪಾವಳಿಯಂದು ದೀಪದಾನ ಮಾಡುತ್ತಾರೆಯೋ ಅವರು ಅಕಾಲ-ಮೃತ್ಯುವಿನಿಂದ ದೂರವಾಗುತ್ತಾರೆ ಎಂಬ ಪ್ರತೀತಿಯೂ ಸಹ ಇದೆ. ದೀಪದಾನ ಮಾಡುವುದೆಂದರೆ ‘ಜ್ಞಾನ-ದಾನ ಮಾಡುವುದು.
ಇಂದಿಗೂ ಸಹ ಸಾಧಕರು ದೀಪೋತ್ಸವದ ರಾತ್ರಿಯನ್ನು ಸಾಧನೆಯ ದೃಷ್ಟಿಕೋನದಿಂದ ‘ಮಹಾರಾತ್ರಿ’ಯೆಂದು ಕಾಣುತ್ತಾರೆ. ಅವರ ಪ್ರಕಾರ ಈ ರಾತ್ರಿಯು ಸಾಧಕರಿಗೆ ಇನ್ನೂ ಹೆಚ್ಚಿನ ಶಕ್ತಿ ಮತ್ತು ಯುಕ್ತಿಯನ್ನು ತಂದುಕೊಡುತ್ತದೆ. ಆದ್ದರಿಂದ ಸಾಧಕರು ಈ ರಾತ್ರಿಯಂದು ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ. ಈ ಮಾನ್ಯತೆಯು ಕಲಿಯುಗದ ಘೋರ ಅಜ್ಞಾನರಾತ್ರಿಯ ಪ್ರತೀಕವಾಗಿದೆ. ಕಲಿಯುಗದ ಈ ತಮೋಪ್ರಧಾನ ಅಂತಿಮ ಚರಣದಲ್ಲಿ ಯಾರು ಪರಮಾತ್ಮನ ಮಾರ್ಗದಲ್ಲಿ ಅವನು ಹೇಳಿದಂತೆ ನಡೆಯುತ್ತಾರೆಯೋ ಅವರಿಗೆ ಸರ್ವಸಿದ್ಧಿಗಳು ದೊರೆಯುತ್ತವೆ.ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು.
ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ(ಪ್ರಕಾಶ) ಅವಶ್ಯಕ. ಆದ್ದರಿಂದಲೇ ‘ನಹಿ ಜ್ಞಾನೇನ ಸದೃಶಂ'(ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) ‘ಜ್ಞಾನ ವಿನಃ ಪಶು:'(ಜ್ಞಾನವಿಲ್ಲದವನು ಪಶು) ,ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ ಪ್ರತಿ ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಮೂಲ ಸಂದೇಶವಾಗಿದೆ.
***
ಡಾ.ಗುರುಪ್ರಸಾದ್ ಹವಾಲ್ದಾರ್
- ವೃತ್ತಿಯಲ್ಲಿ ಶಿಕ್ಷಕರು, ಪ್ರವೃತ್ತಿಯಲ್ಲಿ ಲೇಖಕರು. ಅಧ್ಯಾತ್ಮ ಮತ್ತು ಪುರಾಣ ಕಥನಗಳ ಬರವಣಿಗೆಯಲ್ಲಿ ಎತ್ತಿದ ಕೈ. ಸಮಕಾಲೀನ ಸಂದರ್ಭಗಳ ಬಗ್ಗೆಯೂ ಅವರ ಬರಹ ಬಹಳ ಮೊನಚು. ರಾಜ್ಯದ ಅನೇಕ ಪತ್ರಿಕೆ, ವೆಬ್ ತಾಣ್, ಡಿಜಿಟಲ್ ಮಾಧ್ಯಮಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.