ಹಿರಿಯ ಪತ್ರಕರ್ತ ಪಿ.ರಾಮಯ್ಯ ಪತ್ರಿಕಾರಂಗದ ಒಬ್ಬ ತಪಸ್ವಿ: ಬೊಮ್ಮಾಯಿ
ಬೆಂಗಳೂರು: ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರಿಗೆ ಸತ್ಯವೇ ಚಿಂತನೆ ಮತ್ತು ಆದರ್ಶವಾಗಿದೆ. ಅವರೊಬ್ಬ ಪತ್ರಿಕಾ ರಂಗದ ತಪಸ್ವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಗಾಂಧಿಭವನದಲ್ಲಿ ಅಭಿಮಾನಿ ಪ್ರಕಾಶನ ಪ್ರಕಟಿಸಿರುವ ಹಿರಿಯ ಪತ್ರಕರ್ತ ಪಿ. ರಾಮಯ್ಯ ಅವರ ಅನುಭವ ಕಥನ “ನಾನು ಹಿಂದೂ ರಾಮಯ್ಯ” ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಮುಖ್ಯಮಂತ್ರಿಗಳು ರಾಮಯ್ಯ ಅವರ ಬಗ್ಗೆ ಹೇಳಿದ್ದಿಷ್ಟು;
ರಾಮಯ್ಯ ಅವರು ಸಜ್ಜನ ಪತ್ರಕರ್ತ, ಸತ್ಯವನ್ನು ಪ್ರಿಯವಾಗಿ ಹೇಳಿದ್ದಾರೆ. ಅವರ ಮನದಲ್ಲಿ ಇನ್ನೂ ಸಾಕಷ್ಟು ಮಾಹಿತಿ ಇದೆ. ಆದರೆ ಅದನ್ನು ಅವರು ಹೇಳಿಲ್ಲ. ಅದು ಅವರ ಸೌಜನ್ಯ. ರಾಜ್ಯದಲ್ಲಿ ನಡೆದ ಹಲವು ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದಾರೆ.ಎರಡು ಪೀಳಿಗೆಯ ರಾಜಕಾರಣಿಗಳು ಹಾಗೂ ಮೂರು ಪೀಳಿಗೆಯ ಪತ್ರಕರ್ತರನ್ನು ನೋಡಿದ್ದಾರೆ. ಅವರು ಇದನ್ನು ರೋಚಕವಾಗಿ ಬರೆದು ಅವರು ಪ್ರಶಸ್ತಿಗೆ ಭಾಜನರಾಗಬಹುದಿತ್ತು. ಆದರೆ, ವಾಸ್ತವತೆಯನ್ನು ಮಾತ್ರ ಪುಸ್ತಕದಲ್ಲಿ ಬರೆದಿದ್ದಾರೆ ಅವರೊಬ್ಬ ಪ್ರಮಾಣಿಕ ಪತ್ರಕರ್ತ.ಅವರ ಲೇಖನಗಳಲ್ಲಿ ಸತ್ಯ ಬರೆದಾಗ ಕೆಲವರಿಗೆ ನೋವಾಗಿರಬಹುದು. ಕೆಲವರು ಸಕಾರಾತ್ಮಕವಾಗಿ ಟೀಕೆ ಮಾಡಿ ಬರೆದಾಗ ಅದನ್ನು ಎಲ್ಲರೂ ಸ್ವೀಕರಿಸುತ್ತಾರೆ.
ವಾಸ್ತವತೆಯನ್ನು ಬರೆಯುವುದರಲ್ಲಿ ಎಂದೂ ರಾಜಿಯಾಗಿಲ್ಲ. ಕೆಲವು ಜನರ ಚಿಂತನೆ ಮತ್ತು ವ್ಯಕ್ತಿತ್ವ ಬದಲಾಗುತ್ತವೆ. ರಾಮಯ್ಯ ಅವರ ವ್ಯಕ್ತಿತ್ವ ಬದಲಾಗಿಲ್ಲ. ಎಲ್ಲ ಮುಖ್ಯಮಂತ್ರಿಗಳ ಜೊತೆ ಆತ್ಮೀಯರು.ಮೊದಲು ನಾವು ಬಡ ಪತ್ರಕರ್ತರು ಅಂತ ಕರೆಯುತ್ತಿದ್ದೆವು, ಆದರೆ ಈಗ ಆ ಪದ ಬಳಕೆ ಮಾಡುವುದಿಲ್ಲ. ಈಗ ಕಾಲ ಬದಲಾಗಿದೆ.
ರಾಮಯ್ಯ ಅವರು ಶುದ್ದ ಹಸ್ತ ಪತ್ರಕರ್ತರು. ಪರ್ತಕರ್ತರು ಮತ್ತು ಜರ್ನಲಿಸ್ಟ್ ಒಂದೇ ಅಲ್ಲ . ಪತ್ರಕರ್ತರು ಮತ್ತು ನ್ಯೂಸ್ ಪ್ರೊಡ್ಯೂಷರ್ಸ್ ಬೇರೆ. ರಾಮಯ್ಯನವರು ಅಪರೂಪದ ವ್ಯಕ್ತಿ.ನಾವು ಚಿಕ್ಕವರಿದ್ದಾಗ ಮುಗ್ದರಾಗಿರುತ್ತೇವೆ ನಂತರ ಬದಲಾಗುತ್ತೇವೆ.ರಾಮಯ್ಯ ಅವರ ಮುಗ್ದತೆ ಈಗಲೂ ಬದಲಾಗಿಲ್ಲ. ಆತ್ಮಸಾಕ್ಷಿಯಿಂದ ಕೆಲಸ ಮಾಡಿದ್ದಾರೆ.ಅವರಿಗೆ ಸಾಕಷ್ಟು ಸವಾಲು ಎದುರಾಗಿರಬಹುದು. ಆದರೆ ವಾಸ್ತವತೆಯನ್ನು ಬರೆಯುವುದರಲ್ಲಿ ಎಂದೂ ರಾಜಿಯಾಗಿಲ್ಲ.
ನಾನು ರಾಮಯ್ಯ ಅವರು ನಮ್ಮ ತಂದೆ ಹಾಗೂ ರಾಮಕೃಷ್ಣ ಹೆಗಡೆ, ಎಂಪಿ ಪ್ರಕಾಶ್ ಅವರೊಂದಿಗೆ ಇವರ ಒಡನಾಟ ಮಾತುಗಳನ್ನು ಕೇಳಿ ಬೆಳೆದಿದ್ದೇನೆ. ಅವರಿಂದ ನಾನು ಕಲಿತಿದ್ದೇನೆ. ಒಬ್ಬ ಪತ್ರಕರ್ತನಿಗೆ ಹಲವಾರು ಜವಾಬ್ದಾರಿಗಳಿರುತ್ತವೆ ಎಂಬುದನ್ನು ರಾಮಯ್ಯ ಅವರ ಬರಹದಿಂದ ತಿಳಿಯಬಹುದು. ಬರಹದ ಇತಿಮಿತಿ ಹಾಗೂ ಪರಿಣಾಮಗಳ ಬಗ್ಗೆ ಯೋಚಿಸುವುದು ಬಹಳ ಮುಖ್ಯ.ಪತ್ರಕರ್ತನ ಬರಹದಲ್ಲಿ ವಿಚಾರಾತ್ಮಕ ಹಾಗೂ ಸಂಯಮದಿಂದ ಚಿಂತನೆ ಇರಬೇಕಾಗುತ್ತದೆ.
ರಾಮಯ್ಯ ಅವರಿಗೂ ಹಿಂದೂ ಪತ್ರಿಕೆಗೂ ಅವಿನಾಭಾವ ಸಂಬಂಧ ಇದೆ. ಹಿಂದೂ ಪತ್ರಿಕೆ ತನ್ನ ಮೌಲ್ಯಗಳಿಂದ, ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಭಾರತದ ಪ್ರಜಾಪ್ರಭುತ್ವದಲ್ಲಿ ಮಹತ್ವದ ಪಾತ್ರ ವಹಿಸಿದೆ. ರಾಮಯ್ಯ ಅವರು ನೀರಾವರಿ, ಇಂಧನ ಕ್ಷೇತ್ರದ ಬಗ್ಗೆ ಬರೆದಿರುವ ಅನೇಕ ಲೇಖನಗಳು ಬಹಳ ಇವೆ. ಅವು ಈಗಲೂ ನಮಗೆ ಮಾಹಿತಿಗೆ ದಾಖಲೆಗಳಾಗಿವೆ.
ರಾಮಯ್ಯ ಅವರು ನಮ್ಮ ಕರ್ನಾಟಕದ ಆಸ್ತಿ, ಅವರ ಬರಹದಿಂದ ಸಾಕಷ್ಟು ಕಲಿಯುವುದಿದೆ. ರಾಮಯ್ಯನವರು ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ.ನಿಮ್ಮ ಪುಸ್ತಕ ಸಮಕಾಲೀನ ರಾಜಕಾರಣ ಮತ್ತು ,ಜನರ ಬದುಕು, ಸಮಾಜದ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ.. ನಾನು ಹಿಂದೂ ರಾಮಯ್ಯ ಪುಸ್ತಕದಿಂದ ಯುವಕರಿಗೆ ಪ್ರೇರಣೆ ದೊರೆಯಲಿದೆ. ಅವರ ಮಾರ್ಗದರ್ಶನ ರಾಜಕಾರಣಿಗಳು, ಪತ್ರಿಕರ್ತರಿಗೆ ಮಾರ್ಗದರ್ಶನ ನೀಡಲಿ ಎಂದು ಬೊಮ್ಮಾಯಿ ಅವರು ಹೇಳಿದರು.
ಸಮಾರಂಭದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ, ಕೃತಿಯ ಲೇಖಕ ಪಿ. ರಾಮಯ್ಯ, ಅಭಿಮಾನಿ ಪ್ರಕಾಶನದ ಟಿ. ವೆಂಕಟೇಶ್, ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ವಾರ್ತಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಹೆಚ್.ಬಿ. ದಿನೇಶ್, ಮತ್ತು ಇತರ ಗಣ್ಯರು ಹಾಜರಿದ್ದರು.