ಕಾಂಗ್ರೆಸ್- 136 / ಬಿಜೆಪಿ-65 / ಜೆಡಿಎಸ್-19
ಬೆಂಗಳೂರು: ದೇಶ,ವಿದೇಶಗಳಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಕಾಂಗ್ರೆಸ್ ಪಕ್ಷ ಭಾರೀ ಜಯ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲಿದೆ.
ಶನಿವಾರ ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಪ್ರಾರಂಭವಾದಗಿನಿಂದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಕಾದುಕೊಂಡು ಬಂದಿದ್ದರು. ಕೆಲವೆಡೆ ಮಾತ್ರ ಹಾವು ಏಣಿ ಆಟ ನಡೆದಿತ್ತು, ಕಡೆಗೆ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಹುಮತ ಸಾದಿಸಿದೆ
ಭಾರತೀಯ ಜನತಾ ಪಕ್ಷದ ಘಟಾನುಘಟಿ ನಾಯಕರು ಈ ಬಾರಿ ಸೋಲನ್ನು ಅನುಭಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್, ಜಿ ಪರಮೇಶ್ವರ್, ರಾಮಲಿಂಗಾ ರೆಡ್ಡಿ, ಪ್ರಿಯಾಂಕ್ ಖರ್ಗೆ, ಎಂ.ಕೃಷ್ಣಪ್ಪ, ಕೆ.ಜೆ.ಜಾರ್ಜ್ ಹಾಗೂ ಚುನಾವಣೆ ಸಂದರ್ಭದಲ್ಲಿ ದಿಢೀರ್ ನಿಧನರಾದ ಧ್ರುವನಾರಾಯಣ್ ಅವರ ಪುತ್ರ ದರ್ಶನ್, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಬಂದಿದ್ದ ಲಕ್ಷ್ಮಣ ಸವದಿ ಸೇರಿದಂತೆ 136 ಮಂದಿ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪ್ರತಿಷ್ಟಿತ ಕಣವಾಗಿದ್ದ ಹಾಸನದಲ್ಲಿ ಸ್ವರೂಪ್ ಪ್ರಕಾಶ್ ಸೇರಿದಂತೆ 19 ಮಂದಿ ಜಯ ಸಾಧಿಸಿದ್ದಾರೆ.
ಜೆಡಿಎಸ್ ನಲ್ಲಿ ನಿಖಿಲ್ ಕುಮಾರಸ್ವಾಮಿ, ಸಾ.ರಾ ಮಹೇಶ್ ಮತ್ತಿತರ ಘಟಾನುಘಟಿಗಳು ಸೋಲನುಭವಿಸಿದ್ದಾರೆ. ಈ ಬಾರಿ ನಾವೇ ಸಂಪೂರ್ಣ ಬಹುಮತದಿಂದ ಗೆದ್ದು ಅಧಿಕಾರದ ಗದ್ದುಗೆ ಹಿಡಿಯುತ್ತೇವೆ ಎಂದು ಬೀಗಿದ್ದ ಬಿಜೆಪಿ ಸಂಪೂರ್ಣವಾಗಿ ನೆಲಕಚ್ಚಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಆರಗ ಜ್ಞಾನೇಂದ್ರ, ಬಿ. ವೈ ವಿಜಯೇಂದ್ರ ಸೇರಿದಂತೆ ಕೇವಲ 65 ಮಂದಿ ಗೆಲುವು ಸಾಧಿಸಿದ್ದಾರೆ.
ಇದೆ ಮೊದಲ ಬಾರಿಗೆ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ಸಡ್ಡು ಹೊಡೆದು ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಒಂದು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿದ್ದಾರೆ.
ಸೋಲುಂಡ ಸಚಿವರು
ಈ ಚುನಾವಣೆ ಅನೇಕ ಅಚ್ಚರಿಗಳಿಗೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರದೀಪ್ ಈಶ್ವರ್ ಸೋಲಿಸಿದ್ದಾರೆ. ಅದೇ ರೀತಿ, ಬಳ್ಳಾರಿ ಗ್ರಾಮಾಂತ ಕ್ಷೇತ್ರದಲ್ಲಿ ಸಚಿವ ಬಿ.ಶ್ರೀರಾಮುಲು ಅವರೂ ಸೋತಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕ್ರೀಡಾ ಸಚಿವ ನಾರಾಯಣಗೌಡ, ಮುಧೋಳ್ ಕ್ಷೇತ್ರದಲ್ಲಿ ಗೋವಿಂದ ಕಾರಜೋಳ, ವರುಣಾ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಸಚಿವ ವಿ.ಸೋಮಣ್ಣ, ಬೀಳಗಿಯಲ್ಲಿ ಮುರುಗೇಶ್ ನಿರಾಣಿ, ಚಿಕ್ಕನಾಯಕನಹಳ್ಳಿಯಲ್ಲಿ ಜೆ.ಸಿ.ಮಾಧುಸ್ವಾಮಿ, ಕನಕಪುರದಲ್ಲಿ ಆರ್.ಅಶೋಕ್ ಹಾಗೂ ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರು ಪರಾಜಿತರಾಗಿದ್ದಾರೆ.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಫೈರ್ ಬ್ರ್ಯಾಂಡ್ ಸಿ.ಟಿ.ರವಿ ಅವರು ಅಚ್ಚರಿಯ ರೀತಿಯಲ್ಲಿ ಸೋಲನುಭವಿಸಿದ್ದಾರೆ. ಎಂಟು ಭಾರಿ ಸತತವಾಗಿ ಗೆದ್ದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿರುದ್ಧ 35 ಸಾವಿರ ಮತಗಳ ಅಂತರದಿಂದ ಪರಾಜಯಗೊಂಡಿದ್ದಾರೆ.
ಹಾಗೆಯೇ, ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಚಿವ ಸಿಪಿ ಯೋಗೇಶ್ವರ್ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಸೋಲುಂಡಿದ್ದಾರೆ.
ರಾಜ್ಯದಲ್ಲಿ ಪಕ್ಷಗಳ ಬಲಾಬಲ ಹೀಗಿದೆ-:
ಕಾಂಗ್ರೆಸ್- 136
ಬಿಜೆಪಿ-65
ಜೆಡಿಎಸ್-19
ಇತರರು-2
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ -1
ಸರ್ವೋದಯ ಕರ್ನಾಟಕ ಪಕ್ಷ-1
ಕರ್ನಾಟಕ ವಿಧಾನಸಭೆಯಲ್ಲಿ 224 ಕ್ಷೇತ್ರಗಳಿದ್ದು 114 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದವರು ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯುತ್ತಾರೆ. ಅದರಂತೆ 136 ಕ್ಷೇತ್ರಗಳಲ್ಲಿ ಗೆಲುವು ಸಾದಿಸಿರುವ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವುದು ಖಚಿತವಾಗಿದೆ.