ಸಿದ್ದು, ಡಿಕೆಶಿ ಸೇರಿ ಸಂಪುಟ ಸಂಖ್ಯೆ 34; ಎಸ್.ಎನ್.ಸುಬ್ಬಾರೆಡ್ಡಿ, ಎಸ್.ಎನ್.ನಾರಾಯಣಸ್ವಾಮಿಗೆ ಚಾನ್ಸ್ ಮಿಸ್ ಆಗಿದ್ದೇಗೆ?
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನೆಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಿಯ ಕಾಡ್ಗಿಚ್ಚು ಉಂಟಾಗಿದೆ.
ಬೇಕು ಬೇಕಾದವರಿಗೆ ಮಂತ್ರಿಗಿರಿಯನ್ನು ಹಂಚಲಾಗಿದೆ ಎಂದು ನಿಷ್ಠರೇ ಈಗ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಹೊಸ ಮಂತ್ರಿಗಳು ಗೂಟದ ಕಾರು ಏರಿ ವಿಧಾನಸೌಧಕ್ಕೆ ಬಂದು ಹೊಸ ಕಚೇರಿಗಳಲ್ಲಿ ಆಸೀನರಾಗುವ ಮುನ್ನವೇ ಭಿನ್ನಮತ ಸ್ಫೋಟಗೊಂಡಿದೆ.
ಪಕ್ಷ ನಿಷ್ಠಾಂತ ನಾಯಕ ಹಾಗೂ ಗಾಂಧಿ ಕುಟುಂಬದ ನಿಷ್ಠ ಬಿ.ಕೆ.ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಸ್ವತಃ ಪಕ್ಷದ ಮೂಲ ನಿವಾಸಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಬಹುಶಃ ಅವರು ಇಂದು ಅಥವಾ ಸೋಮವಾರದ ಹೊತ್ತಿಗೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಎಲ್ಲಾ ಸಾಧ್ಯತೆಯೂ ಇದೆ.
ಇನ್ನು, ಪಕ್ಷದ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಅವರನ್ನು ಸಂಪುಟದಿಂದ ಅತ್ಯಂತ ಅಪಮಾನಕರವಾಗಿ ಹೊರಗಿಡಲಾಗಿದೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿಕೆಶಿಯೇ ಕಾರಣ ಎಂದು ಹೇಳಲಾಗಿದೆ. ಆದರೆ, ಪಕ್ಷಕ್ಕೆ ಆಳಿಲು ಸೇವೆಯಷ್ಟನ್ನೂ ಮಾಡದ ಅವರ ಬಗ್ಗೆ ಪಕ್ಷದೊಳಗೇ ಯಾರಿಂದಲೂ ಸಿಂಪಥಿ ವ್ಯಕ್ತವಾಗುತ್ತಿಲ್ಲ.
ಸಿದ್ದು ನೆರಳಿನಲ್ಲಿ ಇದ್ದುಕೊಂಡು ಮಂತ್ರಿ ಆಗಬಹುದು ಎಂದು ನಂಬಿಕೊಂಡು ಜೆಡಿಎಸ್ ಪಕ್ಷಕ್ಕೆ ಕೈಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಹಾರಿ ಅರಸೀಕೆರೆ ಕ್ಷೇತ್ರದಿಂದ ಪುನರಾಯ್ಕೆ ಆಗಿರುವ ಕೆ.ಎಂ.ಶಿವಲಿಂಗೇಗೌಡ ಒಳಗೊಳಗೇ ಕುದಿಯುತ್ತಿದ್ದಾರೆ. ನಿನ್ನೆ ಅವರು ಸಿದ್ದರಾಮಯ್ಯ ಅವರ ಮನೆ ಬಾಗಿಲ ಬಳಿ ಅಸಹಾಯಕರಾಗಿ ನಿಂತಿದ್ದ ದೃಶ್ಯಗಳು ವೈರಲ್ ಆಗಿವೆ.
ಕುಂಚಿಟಿಗ ಸಮುದಾಯದ ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ವರಿಷ್ಠರಲ್ಲಿ ಒಬ್ಬರು ಕೈಕೊಟ್ಟಿದ್ದಾರೆ ಎನ್ನುವ ಖಚಿತ ಮಾಹಿತಿ ಇದೆ. ಹಿಂದೆ, ಜೆಡಿಎಸ್ ಪಕ್ಷದ ಸತ್ಯನಾರಾಯಣ ಅವರು ಅಕಾಲ ಮರಣಕ್ಕೀಡಾದಾಗ ಶಿರಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಜಯಚಂದ್ರ ಅವರಿಗೆ ಟಿಕೆಟ್ ನೀಡಲು ರಂದೀಪ್ ಸುರ್ಜೇವಾಲ ಅವರು ಸ್ಪಷ್ಟ ವಿರೋಧ ವ್ಯಕ್ತಪಡಿಸಿದ್ದರು. ಕುಂಚಿಟಿಗ ಒಕ್ಕಲಿಗರು ಈಗ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದಾರೆ.
ಇನ್ನು ಕ್ಷೇತ್ರಕ್ಕೆ ಹೆಜ್ಜೆಯನ್ನೇ ಇಡದೆ ಗೆದ್ದುಬೀಗಿದ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರನ್ನು ಅನಿರೀಕ್ಷಿತವಾಗಿ ಕೈಬಿಡಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದ ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಬಹಳ ಇತ್ತು. ಅವರಿಗೆ ಕಾಂಗ್ರೆಸ್ ಕೈಕೊಟ್ಟಿದೆ.
ಅದೇ, ಬಿಜೆಪಿ ಪಕ್ಷವನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಕೂಡ ನಿರೀಕ್ಷಿತ ಎನ್ನುವಂತೆ ಕಾಂಗ್ರೆಸ್ ಕೈಕೊಟ್ಟಿದೆ. ಈ ಇಬ್ಬರು ಲಿಂಗಾಯತ ನಾಯಕರನ್ನು ಬಿಜೆಪಿಯಿಂದ ಸೆಲೆದುಕೊಳ್ಳಲು ಇನ್ನಿಲ್ಲದ ಉತ್ಸಾಹ ತೋರಿಸಿದ ಕಾಂಗ್ರೆಸ್ಸಿಗರು, ಅವರಿಗೆ ಹೊಡೆತ ಕೊಟ್ಟಿದೆ. ಅಟ್ ಲೀಸ್ಟ್ ಸವದಿಯನ್ನು ಮಂತ್ರಿ ಮಾಡಬಹುದು, ಶೆಟ್ಟರ್ ಅವರನ್ನು ಆರು ತಿಂಗಳ ನಂತರ ಮೇಲ್ಮನೆಗೆ ಕರೆಸಿಕೊಂಡು ಮಂತ್ರಿ ಮಾಡಬಹುದು ಎನ್ನುವ ಆಸೆಯೂ ಕಮರಿಹೋಗಿದೆ.
32 ಸಚಿವೆರ ಆಯ್ಕೆಯ ಮಾನದಂಡದ ಬಗ್ಗೆ ಕಾಂಗ್ರೆಸ್ ನಲ್ಲಿ ಅತೃಪ್ತಿಯ ಹೊಗೆ ಎದ್ದಿದೆ. ಕೇವಲ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ನಡುವಿನ ತಿಕ್ಕಾಟ ಶಮನ ಮಾಡುವ ರೀತಿಯಲ್ಲಿ ಕ್ಯಾಬಿನೇಟ್ ರಚನೆ ಮಾಡಲಾಗಿದೆ ಎಂದು ಮಾಜಿ ಸಚಿವರೊಬ್ಬರು ದೂರಿದರು.
ಸಿಎಂ, ಡಿಸಿಎಂ ಇಬ್ಬರು ತಮ್ಮ ಆಪ್ತರಿಗಾಗಿ ವಿಸ್ತರಣೆ ಮಾಡಿಕೊಂಡ ಸಂಪುಟ ಇದಾಗಿದೆ ಎಂದು ಕೋಲಾರದ ಹಿರಿಯ ನಾಯಕರೊಬ್ಬರು ಸಿಕೆನ್ಯೂಸ್ ನೌ ಜತೆ ಬೇಸರ ತೋಡಿಕೊಂಡರು.
ಎಸ್.ಎನ್.ಸುಬ್ಬಾರೆಡ್ಡಿ, ಎಸ್.ಎನ್.ನಾರಾಯಣಸ್ವಾಮಿ ನೋ ಚಾನ್ಸ್!!
ಸತತ ಹ್ಯಾಟ್ರಿಕ್ ಭಾರಿಸಿ ವಿಧಾನಸಭೆಗೆ ಆಯ್ಕೆ ಆಗಿರುವ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಬಂಗಾರಪೇಟೆಯ ಎಸ್ ಎನ್ ನಾರಾಯಣಸ್ವಾಮಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಇವರಿಬ್ಬರಿಗೂ ಅವಕಾಶ ಸಿಗಬಹುದು ಎಂದು ಮಾಧ್ಯಮಗಳು ಲೆಕ್ಕಾಚಾರ ಹಾಕಿದ್ದವು.
ಆದರೆ, ಸುಬ್ಬಾರೆಡ್ಡಿ ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿಯನ್ನೇನೂ ಮಾಡಿಲಿಲ್ಲ. ಸೌಮ್ಯ ಸ್ವಭಾವದ ಅವರಿಗೆ ಮಂತ್ರಿಗಿರಿ ಹ್ಯಾಂಡಲ್ ಮಾಡುವುದು ಕಷ್ಟವೆಂದು ಅಪಪ್ರಚಾರ ನಡೆಸಲಾಯಿತು. ಅದೇ ರೀತಿ, ಕೋಲಾರದ ಕಾಂಗ್ರೆಸ್ ಲೀಡರುಗಳಲ್ಲಿ ಕೆಲವರು ನಾರಾಯಣಸ್ವಾಮಿಗೆ ಅಡ್ಡಗಾಲು ಹಾಕಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪರಮಾಪ್ತರಾದ ಒಬ್ಬರು ಬಂಗಾರಪೇಟೆ ಶಾಸಕರಿಗೆ ಚೆಕ್ ಮೇಟ್ ಇಟ್ಟರು ಎನ್ನುವ ಸುದ್ದಿ ಬಂದಿದೆ.