ಆಪರೇಶನ್ ಕಮಲಕ್ಕೆ ಸಿಲುಕಿ ಮಾರಿಕೊಳ್ಳದೆ ಪಕ್ಷನಿಷ್ಠೆ ಮೆರೆದ ಶಾಸಕರಿಗೆ ಸಿಗದ ಸಚಿವ ಸ್ಥಾನ
by GS Bharath Gudibande
ಬೆಂಗಳೂರು/ಚಿಕ್ಕಬಳ್ಳಾಪುರ: ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸ ಹುಸಿಯಾಗಿರುವುದು ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಂಡಿದೆ.
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಮವವನ್ನು ಬಿಜೆಪಿ ಆಪರೇಷನ್ ಕಮಲದ ಖೆಡ್ಡಕ್ಕೆ ಬೀಳಿಸಿದಾಗ ಸುಬ್ಬಾರೆಡ್ಡಿ ಅವರು ಅಂದಿನ ಚಿಕ್ಕಬಳ್ಳಾಪುರದ ಶಾಸಕ ಡಾ.ಕೆ.ಸುಧಾಕರ್ ಅವರ ಜತೆಯಲ್ಲೇ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು. ಈ ಬಗ್ಗೆ ಸಚಿವರಾದ ಮೇಲೆ ಸ್ವತಃ ಡಾ.ಕೆ.ಸುಧಾಕರ್ ಅವರು ಬಾಗೇಪಲ್ಲಿಯಲ್ಲಿ ಸುಳಿವು ಬಿಟ್ಟುಕೊಟ್ಟಿದ್ದರು.
ಬಿಜೆಪಿ ಆಪರೇಷನ್ ಕಮಲದ ಸರಕಾರ ರಚನೆಯಾದ ವೇಳೆ ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಆಮಿಷ ಒಡ್ಡಲಾಗಿತ್ತು. ಆದರೆ, ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಸುಬ್ಬಾರೆಡ್ಡಿ ಅವರ ಮಾತಿಗೆ ಬೆಲೆಕೊಟ್ಟು ಪಕ್ಷದಲ್ಲೇ ಉಳಿದುಕೊಂಡಿದ್ದರು ಸುಬ್ಬಾರೆಡ್ಡಿ.
ಅಂದು ಬಿಜೆಪಿ ಖೆಡ್ಡಾಕ್ಕೆ ಬೀಳದೆ ಪಕ್ಷದಲ್ಲೇ ಉಳಿದುಕೊಂಡಿದ್ದ ಸುಬ್ಬಾರೆಡ್ಡಿ ಅವರಿಗೆ ಕಾಂಗ್ರೆಸ್ ಪಕ್ಷ ಅಕ್ಷರಶಃ ಟೋಪಿ ಹಾಕಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಬ್ಬಾರೆಡ್ಡಿ ಅವರ ಪಕ್ಷನಿಷ್ಠೆಗೆ ವರಿಷ್ಠರು ಮೂರು ಕಾಸಿನ ಕಿಮ್ಮತ್ತು ನೀಡಿಲ್ಲ. ಸತತವಾಗಿ 3ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರೂ ಕೊನೆಪಕ್ಷ ಆಕಾಂಕ್ಷಿಗಳ ಪೊಟ್ಟಿಯಲ್ಲೂ ಸುಬ್ಬಾರೆಡ್ಡಿ ಅವರು ಕಾಣಲಿಲ್ಲ. ಇದು ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ.
ನಿಗಮ-ಮಂಡಳಿಯಾದರೂ ಸಿಗುತ್ತಾ?
ಹಿರಿಯ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರಿಗೆ ಯಾವುದಾರೂ ಮಹತ್ವದ ನಿಗಮ-ಮಂಡಳಿಯಾದರೂ ಸಿಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಪಕ್ಷನಿಷ್ಠರು ಹಾಗೂ ಹಿರಿಯ ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನವುಳ್ಳ ಯಾವುದಾದರೂ ನಿಗಮ ಮಂಡಳಿಗಳನ್ನು ನೀಡಲು ಪಕ್ಷ ನಿರ್ಧರಿಸಿದೆ. ಇನ್ನು ಕೆಲ ದಿನಗಳಲ್ಲಿಯೇ ನಿಗಮ ಮಂಡಳಿ ಅಧಿಕಾರ ಹಂಚಲು ವರಿಷ್ಠರು ಡಿಸೈಡ್ ಮಾಡಿದ್ದಾರೆ ಎನ್ನುವುದು ಗೊತ್ತಾಗಿದೆ.
ಸಿಕೆನ್ಯೂಸ್ ನೌ ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಎರಡು ವಾರಗಳಲ್ಲಿ ನಿಗಮ-ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದ್ದು, ಇದರಲ್ಲಿ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಹಾಗೂ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಅರಸೀಕೆರೆಯ ಶಿವಲಿಂಗೇಗೌಡ ಸೇರಿದ್ದಾರೆ ಎಂದು ಗೊತ್ತಾಗಿದೆ. ಇಲ್ಲವಾದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಒಳೇಟು ಬೀಳುವುದು ಖಚಿತ ಎನ್ನುವ ಸತ್ಯವನ್ನು ವರಿಷ್ಠರು ಗ್ರಹಿಸಿದ್ದಾರೆ.
“
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ಸ್ಥಾನಗಳಿಗೆ 4 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಜನರು ಆಯ್ಕೆ ಮಾಡಿದ್ದಾರೆ. ಅವರಲ್ಲಿ ಬಾಗೇಪಲ್ಲಿ ಕ್ಷೇತ್ರದ ಶಾಸಕರಾದ ಎಸ್.ಎನ್ ಸುಬ್ಬಾರೆಡ್ಡಿ ಅವರು 3ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇವರನ್ನು ಬಿಟ್ಟು ಉಳಿದ ಎಲ್ಲರೂ ಈ ಬಾರಿ ಆಯ್ಕೆಯಾಗಿದ್ದಾರೆ. ಈ ಸಲ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ವಿಶ್ವಾಸವನ್ನು ನಾಯಕರು ಹುಸಿ ಮಾಡಿದ್ದಾರೆ.
ನವೀನ್ ಕುಮಾರ್ ಜಿ.ಎಸ್ / ಅಧ್ಯಕ್ಷರು, ಕೆ.ಪಿ.ಸಿ.ಸಿ ಸಾಮಾಜಿಕ ಜಾಲತಾಣ, ಗುಡಿಬಂಡೆ