ವೈರಲ್ ಆಗಿರುವ ಪಟ್ಟಿಯಲ್ಲಿ ಸಿದ್ದು ಬೆಂಬಲಿಗರಿಗೆ ಬೆಣ್ಣೆ, ಡಿಕೆಶಿ ಗುಂಪಿಗೆ ಸುಣ್ಣ, ಮೂಲ ಕಾಂಗ್ರೆಸ್ಸಿಗೆ ಸೊನ್ನೆ
ಬೆಂಗಳೂರು: ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ನಡೆಯಲು ಸಜ್ಜಾಗಿದ್ದ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಈ ಬಾರಿಯೂ ಮುನಿಸಿಕೊಂಡಿದ್ದಾರೆ.
ಕಳೆದ ಡಿ.ಕೆ.ಶಿವಕುಮಾರ್ ಅವರ ಸಂಧಾನ ಫಲ ನೀಡಿ ಅವರು ಪಕ್ಷದಲ್ಲಿಯೇ ಉಳಿದುಕೊಂಡಿದ್ದರು. ಆಮೇಲೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ತಾವು ಹಿಂದೆ ನಿರ್ವಹಿಸಿದ್ದ ಸಾರಿಗೆ ಖಾತೆಯನ್ನೇ ಕೊಡುತ್ತಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಅವರು ಸಿಟ್ಟಾಗಿದ್ದಾರೆ.
ಈ ಹಿಂದೆ ಗೃಹ ಖಾತೆಯನ್ನೇ ನಿರ್ವಹಿಸಿದ್ದ ತಮಗೆ ಸಂಪೂರ್ಣ ನಷ್ಟದಲ್ಲಿರುವ ಸಾರಿಗೆ ಖಾತೆ ಕೊಟ್ಟರೆ ಸಂಪುಟಗಿರಿಯೇ ಬೇಡ. ಶಾಸಕನಾಗಿ ಇದ್ದುಬಿಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದಾರೆ ಎನ್ನುವ ಮಾಹಿತಿ ಪಕ್ಷದಿಂದ ಬರುತ್ತಿದೆ.
ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸಹಿ ಮಾಡಿದ್ದಾರೆ ಎನ್ನಲಾದ ಪಟ್ಟಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆ ಪಟ್ಟು ವೈರಲ್ ಆಗಿದೆ.
ಆ ಪಟ್ಟಿ ಪ್ರಕಾರ ಡಿ.ಕೆ.ಶಿವಕುಮಾರ್ ಅವರ ಬಣಕ್ಕಿಂತ ಸಿದ್ದರಾಮಯ್ಯ ಅವರ ಗುಂಪು ಪೊಗದಸ್ತಾದ ಖಾತೆಗಳನ್ನು ಬಾಚಿಕೊಂಡಿದೆ. ಕೆ. ಜೆ ಜಾರ್ಜ್ ಅವರಿಗೆ ಇಂಧನ, ಎಂ.ಬಿ.ಪಾಟೀಲ್ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮತ್ತು ಐಟಿ ಬಿಟಿ, ಸತೀಶ್ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ, ಕೃಷ್ಣ ಬೈರೇಗೌಡ ಅವರಿಗೆ ಕಂದಾಯ, ಚಲುವರಾಯ ಸ್ವಾಮಿಗೆ ಕೃಷಿ, ಹೆಚ್.ಸಿ.ಮಹಾದೇವಪ್ಪಗೆ ಸಮಾಜ ಕಲ್ಯಾಣ, ಕೆ.ಎನ್.ರಾಜಣ್ಣಗೆ ಸಹಕಾರ, ಬೈರತಿ ಸುರೇಶ್ ಅವರಿಗೆ ನಗರಾಭಿವೃದ್ಧಿ (ಬೆಂಗಳೂರು ಹೊರತುಪಡಿಸಿ)..
ಇಂಥ ಪ್ರಮುಖ, ಹೈಪ್ರೊಫೈಲ್ ಹಾಗೂ ಭರ್ಜರಿ ಅನುದಾನ ಇರುವ ಖಾತೆಗಳು ಸಿದ್ದರಾಮಯ್ಯ ಅವರ ಬೆಂಬಲಿಗರ ಹೆಸರುಗಳ ಪಕ್ಕದಲ್ಲಿವೆ.
ಡಾ.ಎಂ.ಸಿ.ಸುಧಾಕರ್ ಅವರಿಗೆ ಉನ್ನತ ಶಿಕ್ಷಣ?
ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸಂಪುಟಕ್ಕೆ ಸೇರ್ಪಡೆ ಆಗಿರುವ ಡಾ.ಎಂ.ಸಿ.ಸುಧಾಕರ್ ಅವರಿಗೆ ಮೊದಲು ವೈದ್ಯಕೀಯ ಶಿಕ್ಷಣ ಖಾತೆ ಎನ್ನುವ ಪಟ್ಟಿ ವೈರಲ್ ಆಗಿತ್ತು. ಸ್ವಲ್ಪ ಹೊತ್ತಿನಲ್ಲೇ ವೈರಲ್ ಆದ ಮತ್ತೊಂದು ಪಟ್ಟಿಯಲ್ಲಿ ಅವರಿಗೆ ಉನ್ನತ ಶಿಕ್ಷಣ ಖಾತೆ ಎಂದಿದೆ. ಮೂಲತಃ ವೈದ್ಯರಾದ ಸುಧಾಕರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಕೊಡಬೇಕಿತ್ತು. ಹಿಂದೆ ಬಿಜೆಪಿ ಸರಕಾರದಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳೆರಡನ್ನೂ ಕೊಡಲಾಗಿತ್ತು!!
ಇನ್ನು, ಡಿ.ಕೆ.ಶಿವಕುಮಾರ್ ಅವರ ಗುಂಪಿನ ವಿಷಯಕ್ಕೆ ಬಂದರೆ; ಸ್ವತಃ ಡಿಕೆಶಿ ಅವರಿಗೆ ಬೊಂಬಾಟ್ ಅನುದಾನವುಳ್ಳ ಜಲಸಂಪನ್ಮೂಲ ಹಾಗೂ ಕಾಮಧೇನು ಎಂದು ನಂಬಲಾಗಿರುವ ಬೆಂಗಳೂರು ಅಭಿವೃದ್ಧಿ ಖಾತೆಗಳನ್ನು ಹೆಸರಿಸಲಾಗಿದೆ. ಉಳಿದಂತೆ ಡಿ.ಸುಧಾಕರ್ ಅವರಿಗೆ ಮೂಲಸೌಕರ್ಯ ಅಭಿವೃದ್ಧಿ, ಯೋಜನಾ ಮತ್ತು ಸಾಂಖ್ಯಿಕ ಖಾತೆ, ಲಕ್ಷ್ಮಿ ಹೆಬ್ಬಾಳ್ ಕರ್ ಅವರಿಗೆ ನಿರೀಕ್ಷೆಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೊಡಲಾಗಿದೆಯಂತೆ. ತಮ್ಮ ಬೆಂಬಲಿಗರಿಗೆ ಸಿಕ್ಕಿರುವ ಖಾತೆಗಳ ಬಗ್ಗೆ ಸ್ವತಃ ಡಿಕೆಶಿ ಅವರಿಗೆ ಅಸಮಾಧಾನ ಇದೆ ಎನ್ನುವ ಮಾಹಿತಿ ಇದೆ.
ಪಟ್ಟಿ ರಾಜಭವನಕ್ಕೆ ಹೋಗುವ ಮುನ್ನವೇ ಅದು ಎಲ್ಲಡೆ ವೈರಲ್ ಆಗಿಬಿಟ್ಟಿದೆ. ಸಿದ್ಧರಾಮಯ್ಯ ಅವರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಇದೇ ರೀತಿ ಹಲವು ಸಚಿವರು ತಮಗೆ ಸಿಗುವ ಖಾತೆಯ ಸುಳಿವು ಸಿಗುತ್ತಿದ್ದಂತೆಯೇ ಅಸಮಾಧಾನಗೊಂಡಿದ್ದು, ಉದ್ದೇಶಪೂರ್ವಕವಾಗಿ ತಮ್ಮನ್ನು ಅವಮಾನಿಸುವ ಪ್ರಯತ್ನ ಉದ್ಬವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಮಗೆ ಸಾರಿಗೆ ಖಾತೆ ಕೊಡುವ ನಿರ್ಧಾರದ ಬಗ್ಗೆ ಕೆಂಡಾಮಂಡಲಗೊಂಡಿರುವ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಇದು ತಮ್ಮನ್ನು ಅವಮಾನಿಸುವ ಯತ್ನ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಈ ಹಿಂದೆ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ತಾವು ಸಾರಿಗೆ ಸಚಿವರಾಗಿ ಕೆಲಸ ಮಾಡಿದ್ದು, ಈಗ ಅದೇ ಖಾತೆಯನ್ನು ಕೊಡುವ ಅಗತ್ಯವಿರಲಿಲ್ಲ. ಗೃಹ ಸಚಿವರಾಗಿ ಕೆಲಸ ಮಾಡಿರುವ ತಮಗೆ ಇನ್ನೂ ಮಹತ್ವದ ಖಾತೆ ನೀಡಬೇಕಿತ್ತು. ಆದರೆ ಸಾರಿಗೆ ಖಾತೆಯನ್ನೇ ಕೊಡಲು ಮುಂದಾಗಿ ತಮ್ಮನ್ನು ಅವಮಾನಿಸಲಾಗುತ್ತಿದೆ. ತಮಗಿಂತ ಕಿರಿಯರಿಗೆ ಮಹತ್ವದ ಖಾತೆಗಳನ್ನು ಕೊಟ್ಟು, ತಮಗೆ ಮಾತ್ರ ಹಿಂಬಡ್ತಿ ನೀಡುವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಇದು ಸರಿಯಲ್ಲ. ಸಾರಿಗೆ ಖಾತೆಯನ್ನೇ ನನಗೆ ಅಂಟಿಸುವುದಾದರೆ ನನಗೆ ಸಚಿವ ಸಸ್ಥಾನವೇ ಬೇಡ. ತಕ್ಷಣವೇ ರಾಜೀನಾಮೆ ಕೊಟ್ಟು ಬಿಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಅಸಮಾಧಾನ ತೋಡಿಕೊಂಡಿದ್ದಾರೆ.
ಖಾತೆ ಹಂಚಿಕೆಯ ವಿಷಯದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಹಲ ಸಚಿವರು ಅಸಮಾಧಾನ ವ್ಯಕ್ತಪಡಿಸತೊಡಗಿದ್ದು, ಸರಿಪಡಿಸದೆ ಹೋದರೆ ಸಿದ್ಧರಾಮಯ್ಯ ಅವರ ಸರ್ಕಾರಕ್ಕೆ ಮುಜುಗರ ಉಂಟಾಗುವುದು ಬಹುತೇಕ ಖಚಿತ. ಮುಖ್ಯವಾಗಿ ಮೂಲ ಕಾಂಗ್ರೆಸ್ಸಿಗರ ವಿಷಯದಲ್ಲಿ ತಾರತಮ್ಯ ಎಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುವ ಅಂಶ.
ನಕಲಿ ಪಟ್ಟಿ ಎಂದ ಕಾಂಗ್ರೆಸ್
ಜಾಲತಾಣಗಳಲ್ಲಿ ವೈರಲ್ ಆಗಿರುವ ಪಟ್ಟಿ ನಕಲಿ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಈ ಬಗ್ಗೆ ಪಕ್ಷದ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಖಾತೆ ಹಂಚಿಕೆಯಾಗಿರುವ ಬಗ್ಗೆ ನಕಲಿ ಪಟ್ಟಿ ವೈರಲ್ ಆಗಿದೆ. ಇನ್ನೂ ಸಹ ಖಾತೆ ಹಂಚಿಕೆಯಾಗಿರುವುದಿಲ್ಲ, ಯಾರೂ ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಹಾಗೂ ನಕಲಿ ಸುದ್ದಿಗಳನ್ನು ಹಂಚಬೇಡಿ. ಸರ್ಕಾರ ಅಧಿಕೃತವಾಗಿ ಖಾತೆ ಹಂಚಿಕೆಯ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
Comments 1