ಸಂಸದ ಡಿಕೆ ಸುರೇಶ್ ಗೆ ಟಾಂಗ್ ಕೊಟ್ಟ ಮಾಜಿ ಮುಖ್ಯಮಂತ್ರಿ
ರಾಮನಗರ/ಚನ್ನಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಚರ್ಚೆ ವಿಚಾರದ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು; ಇದೆಲ್ಲಾ ಗಾಳಿ ಸುದ್ದಿ, ಆ ರೀತಿಯ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸೋಮವಾರ ಕೆಡಿಪಿ ಸಭೆಯಲ್ಲಿ ಭಾಗವಹಿಸುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ರಾಜಕಾರಣದಲ್ಲಿ ಊಹಾಪೋಹ ಮಾಮೂಲಿ, ಈ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ನಡೆಸಿ.ಗೆದ್ದ ಸೋತ ಅಭ್ಯರ್ಥಿಗಳ ಜತೆ ಮಾತನಾಡಿದ್ದೇನೆ. ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧ ಮಾಡುತ್ತಿದ್ದೇವೆ ಎಂದು ಅವರು ನೇರವಾಗಿ ಹೇಳಿದರು.
ನೀವು ರಾಷ್ಟ್ರ ರಾಜಕಾರಣದ ಬಗ್ಗೆ ಒಲವು ವಿಚಾರ ಹೊಂದಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು; ನನಗೆ ರಾಷ್ಟ್ರ ರಾಜಕಾರಣದ ಮೇಲೆ ಒಲವಿಲ್ಲ. ಕಳೆದ ಬಾರಿಯೂ ನನಗೆ ಚುನಾವಣೆ ಎದುರಿಸುವ ಆಸಕ್ತಿ ಇರಲಿಲ್ಲ. ಆದರೆ ಕಾರ್ಯಕರ್ತರ ಒತ್ತಾಸೆಯಿಂದ ರಾಜಕಾರಣದಲ್ಲಿದ್ದೇನೆ. ನಂದುಬಿಡಿ, ಹಾಲಿ ಸಂಸದರ ಕಥೆಯೇ ಕೇಳಿ. ಭ್ರಷ್ಟಾಚಾರದ ಮಧ್ಯೆ ಚುನಾವಣೆ ಬೇಡ ಅಂತಿದ್ದಾರೆ. ಅಂತವರೇ ಚುನಾವಣೆ ಬೇಡ ಅಂತ ಹೇಳ್ತಿರುವಾಗ ನಮ್ದೆಲ್ಲ ಯಾವ ಲೆಕ್ಕ? ಎಂದು ಸಂಸದ ಡಿ.ಕೆ.ಸುರೇಶ್ ಹೆಸರು ಪ್ರಸ್ತಾಪಿಸದೇ ಹೆಚ್‌ಡಿಕೆ ಟಾಂಗ್ ಕೊಟ್ಟರು.
ಗ್ಯಾರಂಟಿಗಳ ಬಗ್ಗೆ ಗೊಂದಲವಿದೆ
ಶಕ್ತಿ ಯೋಜನೆಗೆ ಚಾಲನೆ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಅವರು; ಸರ್ಕಾರದ ಐದು ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆ ಮಾಡಲು ಇನ್ನೂ ಸಮಯ ಇದೆ. ಕೊಟ್ಟ ಮಾತನ್ನು ಉಳಿಸಿಕೊಳ್ತಿವಿ ಅಂತಿದ್ದಾರೆ. ಅದರೆ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಹೇಗೆ ತಲುಪಿಸುತ್ತಾರೆ ಅನ್ನೋದು ಮುಖ್ಯ. ಈಗಾಗಲೇ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಇಲ್ಲ ಅಂತಿದ್ದರು. ಆಮೇಲೆ ಕೊಡ್ತೀವಿ ಅಂದ್ರು, ಈಗ ಮನೆ ಮಾಲೀಕರು ಬಾಡಿಗೆದಾರರ ಜತೆ ಅಗ್ರಿಮೆಂಟ್ ಮಾಡಿಕೊಳ್ಳುತ್ತಿಲ್ಲ. ನಾನಾ ಸಮಸ್ಯೆಗಳು ಉದ್ಭವ ಆಗ್ತಿವೆ. ಘೋಷಣೆ ಮಾಡಿದಾಗ ನನಗೂ ಫ್ರೀ, ನಿನಗೂ ಫ್ರೀ ಅಂದರು. ಈಗ ಅದನ್ನೆಲ್ಲ ಯಾವರೀತಿ ನಿಬಾಯಿಸುತ್ತಾರೆ ನೋಡಬೇಕು ಎಂದರು ಕುಮಾರಸ್ವಾಮಿ ಅವರು.