ಪರಿಣಿತರಿಂದ ಸಲಹೆಗಳನ್ನು ಆಹ್ವಾನಿಸಿದ ಸರಕಾರ
ಬೆಂಗಳೂರು: ಉತ್ಕೃಷ್ಣ ಗುಣಮಟ್ಟಕ್ಕೆ ಹೆಸರಾಗಿರುವ ಮೈಸೂರು ಸ್ಯಾಂಡಲ್ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ ತಂದುಕೊಟ್ಟು, ಕರ್ನಾಟಕದ ಹೆಮ್ಮೆಯ ಉತ್ಪನ್ನವಾಗಿ ಮಾಡಲಾಗುವುದು. ಇದಕ್ಕಾಗಿ ಉದ್ಯಮ ಪರಿಣತರಿಂದ ಸಲಹೆಗಳನ್ನು ಮುಕ್ತವಾಗಿ ಆಹ್ವಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಆಸಕ್ತರು [email protected]ಗೆ ತಮ್ಮ ಸಲಹೆಗಳನ್ನು ಕಳಿಸಬಹುದು.
ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಅವರು, “ಮೈಸೂರು ಸ್ಯಾಂಡಲ್ ಸೋಪ್, ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರಂಭಿಸಿದ ಉತ್ಪನ್ನವಾಗಿದೆ. ಅದು ರಾಜ್ಯದ ಮಕುಟಮಣಿಯ ಅನರ್ಘ್ಯರತ್ನವಾಗಿದೆ. ಅವರ ಆಶಯಕ್ಕೆ ತಕ್ಕಂತೆ ಈ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ. ಉದ್ಯಮಿಗಳು ಈ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ಕೊಟ್ಟು, ಸರಕಾರದ ಈ ಪ್ರಯತ್ನಕ್ಕೆ ಕೈಗೂಡಿಸಬೇಕು” ಎಂದು ಆಹ್ವಾನಿಸಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ರಾಜ್ಯದ ಸಾಬೂನು ಮಾರುಕಟ್ಟೆಯಲ್ಲೂ ಸಿಂಹಪಾಲು ಹೊಂದಿಲ್ಲ. ಹಾಗೆಯೇ, ಈ ಬ್ರ್ಯಾಂಡ್ ಉತ್ಪನ್ನವು ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿದೆ. ಮಾರುಕಟ್ಟೆಯಲ್ಲಿ ಉಳಿದ ಹೆಸರಿನ ಸಾಬೂನುಗಳು ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಜೊತೆಗೆ ಒಟ್ಟು ವಹಿವಾಟಿನಲ್ಲಿ ಶೇಕಡ 3ರಷ್ಟು ಮಾತ್ರ ರಫ್ತು ವಹಿವಾಟಿನ ಮೂಲಕ ಬರುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.
ಇದು ಸ್ಪರ್ಧಾತ್ಮಕ ಮಾರುಕಟ್ಟೆಯ ಯುಗವಾಗಿದೆ. ನಮ್ಮ ಬಳಿ ಮೈಸೂರು ಸ್ಯಾಂಡಲ್ ಸೋಪ್‌ನಂತಹ ಉತ್ಕೃಷ್ಟ ಉತ್ಪನ್ನವಿದ್ದೂ ನಾವು ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸೋತಿದ್ದೇವೆ. ಈ ನಿರಾಶಾದಾಯಕ ಪರಿಸ್ಥಿತಿಯನ್ನು ನಿವಾರಿಸಲು ಸರಕಾರ ಉತ್ಸುಕವಾಗಿದೆ. ಒಟ್ಟಿನಲ್ಲಿ ರಾಜ್ಯದ ಈ ಹೆಮ್ಮೆಯ ಉತ್ಪನ್ನಕ್ಕೆ ಮರುಜೀವ ತುಂಬಿ, ಮಾರುಕಟ್ಟೆಯನ್ನು ಸೃಷ್ಟಿಸಲು ಹಲವು ಉಪಕ್ರಮಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.