ಕಮೀಶನ್ ಕಾಂಗ್ರೆಸ್ ಎಂದು ಮೂದಲಿಸಿದ ಜೆಡಿಎಸ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘು ಟೀಕೆ ಮಾಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.
ಈ ಬಗ್ಗೆ ಟ್ವೀಟ್ ಮೂಲಕವೇ ಟಾಂಗ್ ಕೊಟ್ಟಿರುವ ಜೆಡಿಎಸ್ ಖಾರವಾಗಿ ಪ್ರಹಾರ ನಡೆಸಿದೆ.
ಸತ್ಯಕ್ಕೆ ಸಮಾಧಿ ಕಟ್ಟುವುದು ಕಾಂಗ್ರೆಸ್ ಚಾಳಿ, ಅದು ಮೂಲತಃ ಸುಳ್ಳುಗಳ ವಾಚಾಳಿ. ಮುಖದ ಮೇಲೆ ಕೊಚ್ಚೆ ಹಾಕಿಕೊಂಡವನು ಆ ಗಲೀಜು ಅನ್ಯರ ಕಣ್ಣಿಗೆ ಬೀಳದಿರಲೆಂದು ಇನ್ನೊಬ್ಬರ ಮೇಲೆ ಅದನ್ನೇ ಎರಚಿ ಕುಣಿದನಂತೆ! ಹಂಗಿದೆ ನೋಡಿ ʼಕಮೀಷನ್ ಕಾಂಗ್ರೆಸ್ʼನ ಹೊಸ ವರಸೆ ಮತ್ತು ಹೊಸ ‘ಕಸ’ವರಿಕೆ!! ಎಂದು ಹೇಳಿದೆ. ಅಲ್ಲದೆ, ಕಮೀಷನ್ ಕಾಂಗ್ರೆಸ್ ಹ್ಯಾಷ್ ಟ್ಯಾಗ್ ಮಾಡಿ ಕುಟುಕಿದೆ.
ಮಾಜಿ ಮುಖ್ಯಮಂತ್ರಿಗಳು ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಇದ್ದರು ಎಂದು ಹೇಳಿದ್ದ ಕಾಂಗ್ರೆಸ್ ಗೆ, “ವೆಸ್ಟ್ ಎಂಡ್ ಲೆಕ್ಕ ಇರಲಿ, ʼಸಿಎಂ ಟಿಪ್ಪಣಿ ಬಿಕರಿʼಗೆ ಲೆಕ್ಕ ಇಡಿ. ಒಂದು ಎಸಿ ಹುದ್ದೆ, ಮೂರು ಟಿಪ್ಪಣಿ!! ಇದ್ಯಾವ ಅರ್ಥಶಾಸ್ತ್ರ?? ಕೌಟಿಲ್ಯನೂ ಬೆಚ್ಚಿಬೀಳುವಂಥ ರಾಜನೀತಿ!! ಈ 3 ಟಿಪ್ಪಣಿಗಳ ಹಣ ಪಕ್ಷದ ಮಂಡಿಗೋ ಅಥವಾ ವೈಎಸ್ ಟಿ ಟ್ಯಾಕ್ಸ್ ಹುಂಡಿಗೋ? ಇಲ್ಲೇ ಸಾಕ್ಷ್ಯ ಇದೆ, ಸತ್ಯ ಹೇಳಿ. ಪಾಪ.. ಬೂಟಾಟಿಕೆ ದಾಸಯ್ಯನಿಗೆ ಮೈಯ್ಯೆಲ್ಲಾ ಪಂಗನಾಮ!!” ಎಂದು ಜೆಡಿಎಸ್ ಪ್ರಹಾರ ಕೊಟ್ಟಿದೆ.
ಹೆಚ್.ಡಿ.ಕುಮಾರಸ್ವಾಮಿ ಅವರು ವೈಎಸ್ ಟಿ ಟ್ಯಾಕ್ಸ್ ಬಗ್ಗೆ ಹೇಳಿ, ʼಕಾಸಿಗಾಗಿ ಹುದ್ದೆʼ (CashForPosting) ದಂಧೆಯನ್ನು ದಾಖಲೆ ಸಮೇತ ಬಿಚ್ಚಿಟ್ಟರೂ ಆ ಅಸಹ್ಯ ತನ್ನದಲ್ಲ ಎನ್ನುವ ʼಅವಿವೇಕʼ ಕಾಂಗ್ರೆಸ್ ಪಕ್ಷದ್ದು. ಆ ಅವಿವೇಕವನ್ನು ಮುಚ್ಚಿಕೊಳ್ಳಲು ಈಗ ವೆಸ್ಟ್ʼಎಂಡ್ ಎನ್ನುವ ಸವಕಲು ವಿಷಯ ನೆನಪು ಮಾಡಿಕೊಂಡಿದೆ ಎಂದು ಜೆಡಿಎಸ್ ಕಟುವಾಗಿ ಟೀಕಿಸಿದೆ.
ವೆಸ್ಟ್ʼಎಂಡ್ ಬಾಡಿಗೆ ಮಾತಿರಲಿ; ಲುಲು ಮಾಲು ವಿಷಯಕ್ಕೆ ಬರೋಣ. ಹೊಲ ಉತ್ತಿ, ಬೀಜ ಬಿತ್ತಿ ಬೆವರಿನ ಹೊಳೆ ಹರಿಸಿ ತೆಗೆದ ಫಸಲಿಗೆ ಲುಲು ಮಾಡಬಹುದಾ? ಒಂದು ವೇಳೆ ಮಾಡಬಹುದಾದರೆ, ನಿಮ್ಮ ʼಲುಲುಕುಮಾರ್ʼಗಿಂತ ಬೆಸ್ಟ್ ಎಕಾನಮಿಸ್ಟ್ ಇನ್ನೊಬ್ಬರಿಲ್ಲ, ಹಾಗಿದ್ದರೆ, ಅವರನ್ನೇ ವಿತ್ತಮಂತ್ರಿ ಮಾಡಬಹುದಿತ್ತಲ್ಲವೇ? ಎಂದು ಕಿಡಿಕಾರಿರುವ ಜೆಡಿಎಸ್, ಲುಲುಕುಮಾರ್ ಎಂದು ಹ್ಯಾಷ್ ಟ್ಯಾಗ್ ಮಾಡಿ ಕಾಂಗ್ರೆಸ್ ಕಾಲೆಳೆದಿದೆ.
ವರ್ಗಾವಣೆ ರದ್ದು; ಮತ್ತೆ ಟಾಂಗ್ ಕೊಟ್ಟ ಜೆಡಿಎಸ್ / ಕಾಸಿಗಾಗಿ ಹುದ್ದೆ ಸರಕಾರದ 6ನೇ ಗ್ಯಾರಂಟಿ
ಶಿಕ್ಷಣ ಇಲಾಖೆಯ ನಾಲ್ವರು ಉಪ ನಿರ್ದೇಶಕರ ವರ್ಗಾವಣೆಯನ್ನು ವರ್ಗ ಮಾಡಿದ ದಿನವೇ ಹಿಂಪಡೆದ ಕ್ರಮವನ್ನು ಜೆಡಿಎಸ್ ಟೀಕೆ ಮಾಡಿದೆ.ವರ್ಗಾವಣೆ ಹಾಗೂ ವರ್ಗಾವಣೆ ಹಿಂಪಡೆದ ಆದೇಶ ಪತ್ರಗಳನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷವು ಸಿಎಂ ಕಚೇರಿ ಮೇಲೆಯೇ ಬೊಟ್ಟು ಮಾಡಿ ತೋರಿಸಿದೆ.
ಇದು ಪಾರದರ್ಶಕವಷ್ಟೇ ಅಲ್ಲ, ‘ಅಪಾರ’ದರ್ಶಕ ಆಡಳಿತಕ್ಕೆ ಹಿಡಿದ ಕನ್ನಡಿ! ಏಕೆಂದರೆ, ಸಿಎಂ ಕಚೇರಿಯಿಂದ ನಡೆಯುವ ವರ್ಗಾವಣೆ, ಶಿಫಾರಸ್ಸಿನ ಟಿಪ್ಪಣಿಗಳ ಬಿಕರಿಗೆ ಇಲ್ಲಿದೆ ಇನ್ನೊಂದು ಸಾಕ್ಷ್ಯ, ಅಲ್ಲಿನವರಿಗೆ ಇದೇ ಪಂಚಭಕ್ಷ್ಯ ಎಂದು ಜೆಡಿಎಸ್ ಟೀಕೆ ಮಾಡಿದೆ.
ಸಿಎಂಓ ಅಂದರೆ ಸಿಎಂ ಆಫ್ ಕರ್ನಾಟಕ ಎಂದುಕೊಂಡಿದ್ದ ಕನ್ನಡಿಗರಿಗೆ ಅದು ಈಗ ಕರಪ್ಶನ್ ಮ್ಯಾನೇಜ್ ಕಮೀಶನ್ ಕಾಂಗ್ರೆಸ್ ಎಂದು ಮೂದಲಿಸಿದ ಜೆಡಿಎಸ್ ಆಫೀಸ್ ಆಗಿದೆ ಎನ್ನುವುದು ಅರ್ಥವಾಗಿದೆ. ಕಾರಣವಿಷ್ಟೇ; ಅಲ್ಲಿ ವೈ ಎಸ್ ಟಿ ಟ್ಯಾಕ್ಸ್ ಪಾವತಿ ಆಗದಿದ್ದರೆ ವರ್ಗಾವಣೆ ಆದೇಶಗಳೆಲ್ಲ ಮುಲಾಜಿಲ್ಲದೆ ಕಸದ ಬುಟ್ಟಿ ಸೇರುತ್ತವೆ ಎಂದು ಜೆಡಿಎಸ್ ಹೇಳಿದೆ.
ವಿಶೇಷ ಸೂಚನೆ: ವರ್ಗಾವಣೆ ಆದೇಶದ ದಿನವೇ ಅದು ಕೈಗೆ ಸಿಗಬೇಕಾದರೆ ವೈ ಎಸ್ ಟಿ ಟ್ಯಾಕ್ಸ್ ಕಡ್ಡಾಯ. ಇಲ್ಲವಾದರೆ ತಪ್ಪಿದ್ದಲ್ಲ ಅನ್ಯಾಯ!! ಕೈ ಬೆಚ್ಚಗೆ ಆಗದಿದ್ದರೆ ವರ್ಗಾವಣೆ ಆದೇಶದ ಪ್ರತಿ ನೇರ ಕಸದ ಬುಟ್ಟಿಗೆ ಹೋಗುವುದು ಗ್ಯಾರಂಟಿ!!! ಎಂದು ತೀವ್ರ ಕಿಡಿಕಾರಿರುವ ಜೆಡಿಎಸ್, ಕಾಸಿಗಾಗಿ ಹುದ್ದೆ ಸರಕಾರದ 6ನೇ ಗ್ಯಾರಂಟಿ ಎಂದು ಲೇವಡಿ ಮಾಡಿದೆ.