ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್; ರಾಜ್ಯಕ್ಕೆ ಬರುತ್ತಾರಾ ಪ್ರಿಯಾಂಕಾ ಗಾಂಧಿ
ಬೆಂಗಳೂರು: ರಾಜ್ಯದಲ್ಲಿ ಬಹುಮತದ ಸರಕಾರ ಬರುತ್ತಿದ್ದಂತೆಯೇ ಲೋಕಸಭೆ ಚುನಾವಣೆಗೆ ಭರದ ಸಿದ್ಧತೆ ಆರಂಭ ಮಾಡಿರುವ ಕಾಂಗ್ರೆಸ್ ಪಕ್ಷ, ಈಗಾಗಲೇ ಅಭ್ಯರ್ಥಿಗಳನ್ನು ಫೈನಲ್ ಮಾಡಲು ಮುಂದಾಗಿದೆ.
ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸೋನಿಯಾ ಗಾಂಧಿ ಅವರ ಪುತ್ರಿ ಆಗಿರುವ ಪ್ರಿಯಾಂಕ ಗಾಂಧಿಯವರನ್ನು ರಾಜ್ಯಕ್ಕೆ ಕರೆದುಕೊಂಡು ಬಂದು ಗೆಲ್ಲಿಸುವ ಯೋಜನೆಯನ್ನು ಪಕ್ಷ ಹಾಕಿಕೊಂಡಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಅಲ್ಲದೆ; ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೀಸಲು ಲೋಕಸಭೆ ಕ್ಷೇತ್ರವಾದ ಕೋಲಾರದಲ್ಲಿ ಅಭ್ಯರ್ಥಿ ಮಾಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಎಂದು ಗೊತ್ತಾಗಿದೆ.
ಹಾಗೆಯೇ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಅಭ್ಯರ್ಥಿ ಆಗಲು ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ಕೇಂದ್ರದ ಮಾಜಿ ವೀರಪ್ಪ ಮೊಯ್ಲಿ ಅವರಿಗೆ ಈ ಬಾರಿ ಟಿಕೆಟ್ ಅನುಮಾನ ಎನ್ನುವ ಸುದ್ದಿ ಹರಿದಾಡುತ್ತಿದೆ. ಅವರ ಬದಲಿಗೆ ಎಂ ಎಸ್ ರಾಮಯ್ಯ ಅವರ ಮೊಮ್ಮಗ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ಖಾಯಂ ಎಂದು ಹೇಳಲಾಗಿದೆ.
ಕೋಲಾರದಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಸಚಿವ ಕೆ.ಎಚ್.ಮುನಿಯಪ್ಪ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲಿಯೇ ಕ್ಷೇತ್ರಕ್ಕೆ ಖರ್ಗೆ ಅವರ ಹೆಸರು ಕೇಳಿಬಂದಿದೆ. ಕಳೆದ ಬಾರಿ ಬಿಜೆಪಿಯ ಮುನಿಸ್ವಾಮಿ ವಿರುದ್ಧ ಮುನಿಯಪ್ಪ ಸೋತಿದ್ದರು. ಹಾಗೆಯೇ, ಕಲಬುರ್ಗಿ ಕ್ಷೇತ್ರದಲ್ಲಿ ಸೋತಾಗ್ಯೂ ಈಗ ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ, ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕೋಲಾರದಲ್ಲಿ ನಿರಾಯಾಸವಾಗಿ ಗೆಲ್ಲುತ್ತಾರೆ ಹಾಗೂ ಅವರಿಂದ ಇತರೆ ಕ್ಷೇತ್ರಗಳ ಮೇಲೆ ಪ್ರಭಾವ ಬೀಳುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ ಎನ್ನಲಾಗಿದೆ.
ಇನ್ನು, ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಲೋಕಸಭೆಯಲ್ಲಿ ಎರಡು ಅವಧಿಗೆ ಪ್ರತಿನಿಧಿಸಿದ್ದ ವೀರಪ್ಪ ಮೊಯ್ಲಿ ಅವರು ಡಾ.ಮನಮೋಹನ್ ಸಿಂಗ್ ಅವರ ಎರಡು ಅವಧಿಯ ಸರಕಾರಗಳಲ್ಲಿ ಮಂತ್ರಿ ಆಗಿದ್ದರು. ಅವರಿಂದ ಕ್ಷೇತ್ರಕ್ಕೆ ಆಗಿರುವ ಲಾಭದ ಬಗ್ಗೆ ಜನರಿಗೆ ಅತೀವ ಆಕ್ರೋಶ ಇದೆ. ಕಳೆದ ಚುನಾವಣೆಯಲ್ಲಿ ಹೊಸಕೋಟೆಯ ಬಿ.ಎನ್.ಬಚ್ಚೇಗೌಡ ಎದುರು ಸೋಲು ಕಂಡಿದ್ದರು.
ಈ ಬಾರಿ ಚಿಕ್ಕಬಳ್ಳಾಪುರದ ಟಿಕೆಟ್ ತಮಗೆ ಎಂದು ಹೇಳಿಕೊಂಡಿರುವ ಮೊಯ್ಲಿ ಅವರು, ಟಿಕೆಟ್ ಬಗ್ಗೆ ತಮಗೆ ಸೋನಿಯಾ ಗಾಂಧಿ ಅವರು ಗ್ಯಾರಂಟಿ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಪ್ರಿಯಾಂಕಾ ಎಲ್ಲಿ ನಿಲ್ಲುತ್ತಾರೆ?
ಪ್ರಿಯಾಂಕಾ ಗಾಂಧಿ ಅವರನ್ನು ಕೊಡಗು – ಮೈಸೂರು ಅಥವಾ ಚಿಕ್ಕಮಗಳೂರು – ಉಡುಪಿ; ಇವೆರಡು ಕ್ಷೇತ್ರಗಳ ಪೈಕಿ ಯಾವುದಾದರೂ ಒಂದರಲ್ಲಿ ಕಣಕ್ಕೆ ಇಳಿಸಲು ಕಾಂಗ್ರೆಸ್ ಚುನಾವಣಾ ನಿಪುಣರು ಯೋಚನೆ ಮಾಡುತ್ತಿದ್ದಾರೆ.
ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಜನ್ಮ ನೀಡಿದ್ದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಿಯಾಂಕಾ ಸ್ಪರ್ಧೆ ಮಾಡಿ ಗೆದ್ದರೆ ಅದು ಇತಿಹಾಸ ಆಗುತ್ತದೆ. ಅದರಲ್ಲೂ ಅಜ್ಜಿಯ ಸೆಂಟಿಮೆಂಟ್ ಮೊಮ್ಮಗಳಿಗೆ ವರ್ಕ್ ಔಟ್ ಆಗುತ್ತದೆ ಎನ್ನುವ ಲೆಕ್ಕಾಚಾರ ಆ ನಿಪುಣರದ್ದು.
ಈ ಪಟ್ಟಿಯ ಬಗ್ಗೆ ಸಿಕೆನ್ಯೂಸ್ ನೌ ಕೆಲ ಮೂಲಗಳನ್ನು ಸಂಪರ್ಕ ಮಾಡಿತು. ಆ ಮೂಲಗಳ ಪ್ರಕಾರ ಕಾಂಗ್ರೆಸ್ ಚುನಾವಣಾ ತಂತ್ರಗಾರ ಸುನೀಲ್ ಕನಗೊಳು ಈಗಾಗಲೇ ಈ ಪಟ್ಟಿ ಬಗ್ಗೆ ಒಂದು ಸುತ್ತಿನ ಚರ್ಚೆ ಮುಗಿಸಿದ್ದಾರೆ ಎನ್ನಲಾಗಿದೆ. ಮೇಲಾಗಿ, ಅಭ್ಯರ್ಥಿಗಳನ್ನು ಕ್ಷೇತ್ರಗಳಿಂದ ಕ್ಷೇತ್ರಗಳಿಗೆ ರೀ ಲೊಕೇಟ್ ಮಾಡುವುದರಿಂದ ಪಕ್ಷಕ್ಕೆ ಲಾಭ ಖಚಿತ ಎಂದು ವರಿಷ್ಠರಿಗೆ ಮಾನವರಿಗೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
Comments 1