ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ ಪೊಲೀಸರು
ಬೆಂಗಳೂರು: ವಿವಾದಾಸ್ಪದ, ವ್ಯಕ್ತಿತ್ವಹರಣ ಹಾಗೂ ಕೀಳು ಅಭಿರುಚಿಯ ಟ್ವೀಟ್ʼಗಳನ್ನು ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕಿಯೊಬ್ಬರಿಗೆ ಬೆಂಗಳೂರು ಪೊಲೀಸರು ಶಾಕ್ ನೀಡಿದ್ದಾರೆ.
ಉಡುಪಿಯ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ವಿವಾದದ ಬಗ್ಗೆ ಟ್ವಿಟರಿನಲ್ಲಿ ಪ್ರತಿಕ್ರಿಯಿಸುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಮಹಿಳೆಯರ ಕುರಿತು ಅವಹೇಳನಾಕಾರಿ, ಅಸಭ್ಯ ಪೋಸ್ಟ್ ಹಾಕಿದ್ದ ಆರೋಪದ ಮೇರೆಗೆ ತುಮಕೂರು ಮೂಲದ ಬಿಜೆಪಿ ನಾಯಕಿ ಶಕುಂತಲಾ ನಟರಾಜ್ ಅವರನ್ನು ಬೆಂಗಳೂರು ಹೈಗ್ರೌಂಡ್ಸ್ ಪೊಲೀಸರು ವಶಕ್ಕೆ ಪಡೆದು ತದನಂತರ ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.
‘ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ ನವರ ಪ್ರಕಾರ ಮಕ್ಕಳಾಟವಂತೆ. ಸಿದ್ದರಾಮಯ್ಯನವರ ಸೊಸೆ ಅಥವಾ ಹೆಂಡ್ತಿ ಅವ್ರ ವಿಡಿಯೋವನ್ನು ಇದೇ ತರ ಮಾಡಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ?’ ಎಂದು ಶಕುಂತಲಾ ಅವರು ಟ್ವೀಟ್ ಮಾಡಿ ಮುಖ್ಯಮಂತ್ರಿಯನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದರು.
ಇದಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಶಕುಂತಲಾ ಅವರನ್ನು ವಶಕ್ಕೆ ಪಡೆದ ನಂತರ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಲಾಗಿದೆ. ಬಳಿಕ ಶಕುಂತಲಾ ನಟರಾಜ್ ಅವರಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಒಡಿಶಾದಲ್ಲಿ ಸಂಭವಿಸಿದ್ದ ರೈಲು ದುರಂತದ ಬಗ್ಗೆಯೂ ವಿವಾದಾಸ್ಪದ ಟ್ವೀಟ್ ಮಾಡಿದ್ದ ಶಕುಂತಲಾ ಅವರು ಒಡಿಶಾ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದರು. ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಕಾರಣಕ್ಕೆ ಶಕುಂತಲಾ ಅವರನ್ನು ಒಡಿಶಾ ಪೊಲೀಸರು ಹುಡುಕಾಟ ನಡೆಸಿದ್ದರು.
ರೈಲು ದುರಂತಕ್ಕೆ ಇಂಟರ್ ಲಾಕಿಂಗ್ ಪ್ರಕ್ರಿಯೆಯಲ್ಲಾಗಿರುವ ಲೋಪವೇ ಕಾರಣವೆಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದರು.
ಆದರೆ, ಶಕುಂತಲಾ ಅವರು ಟ್ವೀಟ್ ನಲ್ಲಿ, ಒಡಿಶಾ ದುರಂತಕ್ಕೆ ಪಕ್ಕದಲ್ಲಿರುವ ಮಸೀದಿ ಕಾರಣ ಎಂದು ಬಿಂಬಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅವರ ಪೋಸ್ಟ್ ವೈರಲ್ ಆಗಿತ್ತಲ್ಲದೆ ಒಡಿಶಾ ಪೊಲೀಸರ ಗಮನಕ್ಕೆ ಹೋಗಿತ್ತು.
ಟ್ವೀಟರ್ ಮೂಲಕವೇ ಈ ಬಗ್ಗೆ ಎಚ್ಚರಿಕೆ ನೀಡಿದ್ದ ಒಡಿಶಾ ಪೊಲೀಸರು, ಶಕುಂತಲಾ ಅವರ ಬಗ್ಗೆ ಕರ್ನಾಟಕ ಪೊಲೀಸರಲ್ಲಿ ಮಾಹಿತಿ ಸಂಗ್ರಹಿಸಿದ್ದರು.