ಪೊಲೀಸರಿಗೆ ದೂರು; ಸದನ ಸಮಿತಿ ವರದಿಯ ಇಂಗ್ಲಿಷ್ ಪ್ರತಿಯನ್ನು ಸರಕಾರ ಇನ್ನೂ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿಲ್ಲ ಎಂದ ನವದೆಹಲಿ ಪ್ರತಿನಿಧಿ
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ನೈಸ್ (ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್) ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಿ, ಹೆಚ್ಚುವರಿ ಭೂಮಿಯನ್ನು ಸರಕಾರದ ವಶಕ್ಕೆ ಪಡೆಯಬೇಕು ಎಂದು ಒತ್ತಾಯ ಮಾಡಿದ್ದ ರಾಜ್ಯ ಸರಕಾರದ ನವದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರಿಗೆ ಜೀವ ಬೆದರಿಕೆಯ ಕರೆಗಳು ಬರುತ್ತಿವೆ.
ಈ ಬಗ್ಗೆ ಅವರ ಕಚೇರಿ ಸಿದಬಬಂದಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.
ಈ ಹಿಂದೆ 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನೈಸ್ ಕರ್ಮಕಾಂಡದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಜಯಚಂದ್ರ ಅವರ ನೇತೃತ್ವದಲ್ಲಿಯೇ ಜಂಟಿ ಸದನ ಸಮಿತಿ ರಚನೆ ಮಾಡಿದ್ದರು.
ತದ ನಂತರ ನೈಸ್ ಯೋಜನೆಯ ಎಲ್ಲಾ ಅಕ್ರಮಗಳನ್ನು ದಾಖಲೆಗಳ ಸಮೇತ ಬಗೆದಿದ್ದ ಸಮಿತಿಯು, ಸರಕಾರಕ್ಕೆ ವಿಸ್ತೃತ ವರದಿ ನೀಡಿತ್ತು. ಆದರೆ, ಈ ಬಗ್ಗೆ ಸಿದ್ದರಾಮಯ್ಯ ಸರಕಾರವಾಗಲಿ ಅಥವಾ ನಂತರ ಬಂದ ಸರಕಾರಗಳು ಕ್ರಮ ಜರುಗಿಸಿರಲಿಲ್ಲ. ಅದನ್ನೇ ಪ್ರಶ್ನಿಸಿ ಸದನದಲ್ಲಿ ಮಾತನಾಡಿದ್ದ ಜಯಚಂದ್ರ ಅವರು, ನೈಸ್ ಅಕ್ರಮಗಳೆಲ್ಲವನ್ನೂ ಬಿಡಿಸಿಟ್ಟಿದ್ದರು.
ಈ ಹಿನ್ನೆಯಲ್ಲಿ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ದೂರಿರುವ ಅವರು; ತಮಗೆ ಬರುತ್ತಿರುವ ಅನಾಮಧೇಯ ಕರೆಗಳ ಬಗ್ಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜಯಚಂದ್ರ ಅವರು; ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ಇದು. ಈ ಹಗರಣದಲ್ಲಿ ಸಾಕಷ್ಟು ಮನಿ ಲಾಂಡ್ರಿಂಗ್ ನಡೆದಿದೆ. 20,000 ಎಕರೆ ಭೂಮಿ ಇದರಲ್ಲಿ ದುರುಪಯೋಗ ಆಗಿದೆ. ಸದನದಲ್ಲಿ ವರದಿಯ ಬಗ್ಗೆ ಚರ್ಚೆ ಆಗುತ್ತಿದ್ದಂತೆ ನಿಮಗ್ಯಾಕೆ ಬೇಕಿತ್ತು ಅಂತ ನನಗೆ ಕರೆಗಳು ಬರುತ್ತಿವೆ. ಆದರೆ ಇದ್ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನನ್ನ ಆಪ್ತ ಸಹಾಯಕ, ಗನ್‌ಮೆನ್ ಪೋನ್‌ಗಳಿಗೂ ಜೀವ ಬೆದರಿಕೆ ಕರೆಗಳು ಬಂದಿವೆ. ನಮ್ಮ ಕಚೇರಿಯಿಂದ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಸಿಬಿಐ ತನಿಖೆಯ ಜತೆಗೆ ತ್ರಿಸದಸ್ಯ ಸಮಿತಿ ರಚಿಸಿಬೇಕೆಂದು ವರದಿಯಲ್ಲಿ ಉಲ್ಲೇಖಿಸಿದ್ದೇನೆ. ನಾನು ನಿಷ್ಪಕ್ಷಪಾತ, ರಾಗ ದ್ವೇಷ ಇಲ್ಲದೆ ವರದಿ ಕೊಟ್ಟಿದ್ದೇನೆ. ಈವರೆಗೂ ವರದಿಯ ಇಂಗ್ಲೀಷ್ ಕಾಪಿಯನ್ನ ಸರಕಾರವು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿಲ್ಲ. ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎನ್ನುವುದಕ್ಕಿಂತ ಇಷ್ಟೊಂದು ದೊಡ್ಡ ಮೊತ್ತದ ಹಗರಣದ ಬಗ್ಗೆ ವಿಸ್ತೃತವಾಗಿ ತನಿಖೆ ಆಗಬೇಕು. ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಸಿಗಬೇಕು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.