ಮಂಡ್ಯದ ಕೃಷಿ ಇಲಾಖೆಯ 7 ಸಹಾಯಕ ನಿರ್ದೇಶಕರಿಂದ ಲಿಖಿತ ದೂರು
ಕ್ರಮ ಜರುಗಿಸುವಂತೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರಿಂದ ಸೂಚನೆ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಕಾಸಿಗಾಗಿ ಹುದ್ದೆ ದಂಧೆಯಲ್ಲಿ ಪೂರ್ಣವಾಗಿ ತೊಡಗಿಕೊಂಡಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ತೀವ್ರ ಆರೋಪ ಮಾಡುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಸಂಪುಟದ ಸಚಿವರೊಬ್ಬರ ವಿರುದ್ಧ ನೇರವಾಗಿ ರಾಜ್ಯಪಾಲರಿಗೇ ದೂರು ಹೋಗಿದೆ.
ಅಧಿಕಾರಿಗಳೇ ಸಚಿವರ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ಪ್ರತಿಪಕ್ಷಗಳ ಆರೋಪಕ್ಕೆ ಮೊದಲು ಮಾತೆತ್ತಿದರೆ ದಾಖಲೆ ಕೊಡಿ ಎನ್ನುತ್ತಿದ್ದ ಸರಕಾರಕ್ಕೆ ಈಗ ಸ್ವತಃ ಅಧಿಕಾರಿಗಳೇ ರಾಜಭವನದ ಕದ ತಟ್ಟಿರುವುದು ಸರಕಾರಕ್ಕೆ ತೀವ್ರ ಮುಜುಗರ, ನಾಚಿಕೆ ಉಂಟು ಮಾಡಿದೆ.
ಕೃಷಿ ಸಚಿವರ ಮೇಲೆ ಆರೋಪಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ವಿರುದ್ಧ ಅದೇ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ನೇರ ಆರೋಪ ಮಾಡಿದ್ದಾರೆ.
ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜ ಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು ತಾಲೂಕುಗಳ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ರಾಜ್ಯಪಾಲರಿಗೆ ದೂರು ನೀಡಿ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ 7 ಮಂದಿ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲೆಯ ಕೃಷಿ ಇಲಾಖೆ ಸಿಬ್ಬಂದಿ ಬರೆದಿರುವ ಪಾತ್ರವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿರುವ ರಾಜ್ಯಪಾಲರ ಕಾರ್ಯಾಲಯ, ಈ ಬಗ್ಗೆ ಕ್ರಮಕ್ಕೆ ಸೂಚಿಸಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರಿನ ಮೂಲ ಪ್ರತಿಯನ್ನು ಲಗತ್ತಿಸಿ ದಿನಾಂಕ 1/8/2023ರಂದು ಪತ್ರ ಬರೆದಿದೆ.
ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿರುವ ಪತ್ರವು ದಿನಾಂಕ 2/8/2023ರಂದು ಮುಖ್ಯ ಕಾರ್ಯದರ್ಶಿ ಅವರ ಕಚೇರಿ ತಲುಪಿದ್ದು, ದಿನಾಂಕ 3/8/2023ರಂದು ಆ ಪತ್ರ ವಂದಿತಾ ಶರ್ಮಾ ಅವರ ಗಮನಕ್ಕೆ ಹೋಗಿದೆ.
6ರಿಂದ 8 ಲಕ್ಷ ರೂಪಾಯಿ ಡಿಮಾಂಡ್
ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಮೂಲಕ ಸಹಾಯಕ ನಿರ್ದೇಕರಲ್ಲಿ 6ರಿಂದ 8 ಲಕ್ಷ ರೂಪಾಯಿಗೆ ಬೇಡಿಕೆ ಇರಿಸಿದ್ದಾರೆ.
ಈ ವಿಷಯವನ್ನು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಸಹಾಯಕ ನಿರ್ದೇಶಕರು ಉಲ್ಲೇಖಿಸಿದ್ದಾರೆ. ಹಣಕ್ಕಾಗಿ ಸಚಿವರು ಪೀಡಿಸುತ್ತಿದ್ದ, ಇದಕ್ಕೆ ತಡೆ ಒಡ್ಡದಿದ್ದಲ್ಲಿ ಕುಟುಂಬ ಸದಸ್ಯರ ಸಮೇತ ವಿಷ ಸೇವನೆ ಮಾಡುವುದಾಗಿ ಅಧಿಕಾರಿಗಳು ರಾಜ್ಯಪಾಲರಲ್ಲಿ ಅಳಲು ತೋಡಿಕೊಂಡಿದ್ದಾರೆ.
ಈ ಪತ್ರವನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವುದು ಸತ್ಯ. ಪತ್ರ ತಲುಪಿದ ಕೂಡಲೇ ಅದನ್ನು ಪರಿಶೀಲನೆ ಮಾಡಲಾಗಿದೆ. ರಾಜ್ಯಪಾಲರ ಅಧೀನ ಕಾರ್ಯದರ್ಶಿ ಜಿ. ಪ್ರದೀಪ್ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯಪಾಲರು ಸೂಚಿದ್ದಾರೆಂದು ತಿಳಿಸಿದ್ದಾರೆ.
ರಾಜ್ಯಪಾಲರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿ ಅವರಿಗೆ ಹೋಗಿರುವ ಪತ್ರ ಇಂದು ಬೆಳಗ್ಗೆಯಿಂದಲೇ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.
ವಿಧಾನಸಭೆಯಲ್ಲಿ ಆರೋಪ ಮಾಡಿದ್ದ ಕುಮಾರಸ್ವಾಮಿ
ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಕೃಷಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದರು. ಕೃಷಿ ಇಲಾಖೆಯಲ್ಲಿ ಯಾವ್ಯಾವ ಕೆಲಸಗಳಿಗೆ ಸಚಿವಾಲಯದ ಮಟ್ಟದಲ್ಲೇ ರೇಟ್ ಫಿಕ್ಸ್ ಆಗಿದೆ ಎಂಬುದಕ್ಕೆ ಸಾಕ್ಷಿ ನೀಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಅವರ ಆರೋಪದ ಬೆನ್ನಲ್ಲಿಯೇ, ಆ ದರಗಳನ್ನು ಉಲ್ಲೇಖಿಸಲಾಗಿದ್ದ ಎಕ್ಸೆಲ್ ಶೀಟ್ ಒಂದು ಬಿಡುಗಡೆ ಆಗಿತ್ತು.
ಆ ಶೀಟ್ ನಲ್ಲಿದ್ದ ಮಾಹಿತಿ ಪ್ರಕಾರ, ಜಿಲ್ಲಾ ಮಟ್ಟದ ಜಂಟಿ ಕೃಷಿ ನಿರ್ದೇಶಕರ ಹುದ್ದೆಗಳ ವರ್ಗಾವಣೆಗಳಿಗೆ ದರ ಫಿಕ್ಸ್ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಆ ಹುದ್ದೆಗಳಲ್ಲಿರುವವರಿಗೆ ಒಂದು ಜಿಲ್ಲೆಯಿಂದ ಅವರು ಕೇಳುವ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳಬೇಕೆಂದರೆ 15 ಲಕ್ಷ ರೂ.ಗಳಿಂದ 75 ಲಕ್ಷ ರೂ.ಗಳವರೆಗೆ ಫಿಕ್ಸ್ ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದ್ದರು.
ಬೆಂಗಳೂರಿನಲ್ಲಿರುವ ಕೃಷಿ ಇಲಾಖೆಯಲ್ಲಿರುವ ಕೇಂದ್ರ ಕಚೇರಿಗಳಿಗೆ ವರ್ಗಾವಣೆ ಕೋರುವ ಜಂಟಿ ಕೃಷಿ ನಿರ್ದೇಶಕರಿಗೆ 1 ರಿಂದ 1.5 ಕೋಟಿ ರೂ.ಗಳನ್ನು ಫಿಕ್ಸ್ ಮಾಡಲಾಗಿದೆ ಎಂದು ಕುಮಾರಸ್ವಾಮಿಯವರು ಬಿಡುಗಡೆ ಮಾಡಿರುವ ಎಕ್ಸೆಲ್ ಶೀಟ್ ನಲ್ಲಿ ಆರೋಪಿಸಲಾಗಿತ್ತು.