ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ವೇಳೆ ತೀವ್ರ ಹೃದಯಾಘಾತ
ಬೆಂಗಳೂರು: ಚಿನ್ನಾರಿಮುತ್ತ ಖ್ಯಾತಿಯ ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಶ್ರೀಮತಿ ಸ್ಪಂದನಾ ಅವರು ನಿಧನರಾಗಿದ್ದಾರೆ.
ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ವೇಳೆ ತೀವ್ರ ಹೃದಯಾಘಾತದಿಂದ ಅವರು ಇಹಲೋಕ ತ್ಯಜಿಸಿದರು.
ಲೋ ಬಿಪಿಯಿಂದ ಕುಸಿದು ಬಿದ್ದ ಸ್ಪಂದನಾ ಅವರನ್ನು ಕೂಡಲೆ ಬ್ಯಾಂಕಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಲೋ ಬಿಪಿ ತರುವಾಯ ತೀವ್ರ ಹೃದಯಾಘಾತವಾಗಿ ಸ್ಪಂದನ ಮೃತಪಟ್ಟರು.
ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ದಂಪತಿಗೆ ಒಬ್ಬ ಪುತ್ರ ಇದ್ದಾನೆ. ಸ್ಪಂದನಾ ಅವರ ಪಾರ್ಥಿವ ಶರೀರ ನಾಳೆ ಬೆಂಗಳೂರಿಗೆ ಬರಲಿದ್ದು, ಅಂತ್ಯಕ್ರಿಯೆ ಕಾರ್ಯ ಬೆಂಗಳೂರಿನಲ್ಲೆ ನಡೆಯಲಿದೆ.
ವಿಜಯ ರಾಘವೇಂದ್ರ ಅವರು ಪಾರ್ವತಮ್ಮ ರಾಜ್ ಕುಮಾರ್ ತಮ್ಮನ ಮಗನಾಗಿದ್ದು, ಅಪ್ಪು ನಿಧನದ ಬಳಿಕ ಸ್ಪಂದನಾ ಅವರ ಸಾವು ಡಾ.ರಾಜ್ ಕುಮಾರ್ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ. ಸ್ಪಂದನಾ ಅವರು ನಿವೃತ್ತ ಎಸಿಪಿ ಬಿ.ಕೆ.ಶಿವರಾಮ್ ಅವರ ಪುತ್ರಿ.
ಸ್ಪಂದನಾ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ತೀವ್ರ ಆಘಾತ ವ್ಯಕ್ತಪಡಿಸಿದೆ. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಂದನಾ ಅಕಾಲಿಕ ಕಾರಣಕ್ಕೆ ಅತೀವ ಶೋಕ ವ್ಯಕ್ತಪಡಿಸಿದ್ದಾರೆ.