ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬಂದರೂ ಫಸ್ಟ್ ಬೆಂಚ್ ಸಿಗಲ್ಲ ಎಂದ ಡಾ.ಜಿ.ಪರಮೇಶ್ವರ್
ಬೆಂಗಳೂರು: ೨೦೧೮ರ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರಕಾರವನ್ನು ಕೆಡವಿ ಬಾಂಬೆಗೆ ಹಾರಿ ಬಿಜೆಪಿ ಸರಕಾರ ಬರಲು ಕಾರಣರಾಗಿದ್ದವರ ಘರ್ ವಾಪ್ಸಿಗೆ ಕಾಂಗ್ರೆಸ್ಸಿನಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್, ಯಶವಂತಪುರದ ಎಸ್.ಟಿ.ಸೋಮಶೇಖರ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಕೆ ಆರ್ ಪುರದ ಭೈರತಿ ಬಸವರಾಜ್ ಸೇರಿದಂತೆ ಬಾಂಬೆ ಬಾಯ್ಸ್ ಕೈ ಪಕ್ಷಕ್ಕೆ ವಾಪಸ್ಸಾಗುವುದು ಸುಲಭವಲ್ಲ.
ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇರಿಸಿಕೊಂಡು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಪರೇಷನ್ ಕಮಲ ಗಿರಾಕಿಗಳನ್ನು ವಾಪಸ್ ಕರೆತರಲು ತೀವ್ರ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲಿಯೇ ಆ ಪಕ್ಷದ ಹಿರಿಯ ನಾಯಕರು ಅಪಸ್ವರ ಎತ್ತಿದ್ದಾರೆ.
ಮುಖ್ಯವಾಗಿ ಕೆಪಿಸಿಸಿ ಮಾಜಿ ಅಧ್ಯಕ್ಷರೂ, ಹಾಲಿ ಗೃಹ ಸಚಿವರೂ ಆಗಿರುವ ಪರಮೇಶ್ವರ್ ಅವರಂಥ ಪ್ರಮುಖರೇ ಘರ್ ವಾಪ್ಸಿ ಪ್ರಹಸನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ಶಾಸಕರು ಬರೋದಾದರೆ ಅವರನ್ನು ಸ್ವಾಗತ ಮಾಡುತ್ತೇವೆ. ಆದರೆ, ಅವರಿಗೆ ಫಸ್ಟ್ ಬೆಂಚ್ ಸಿಗಲ್ಲ ಎನ್ನುವ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಲೋಕಸಭೆ ಚುನಾವಣೆ ವೇಳೆಗೆ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗುತ್ತಿದೆಯಲ್ಲ ಎಂಬ ವರದಿಗಾರರ ಪ್ರಶ್ನಗೆ ಹೀಗೆ ಪ್ರತಿಕ್ರಿಯಿಸಿದರು.
ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಬಹುದು. ಬಿಜೆಪಿಯಲ್ಲಿ ಬೇಸರ ಆಗಿ, ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಹೇಳಿ ಶಾಸಕರು ಬರಬಹುದು.ಬಂದರೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಪರಿಶೀಲನೆ ಮಾಡಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಐಡಿಯಾಲಜಿ ನಂಬಿ, ಕಾಂಗ್ರೆಸ್ ಲೀಡರ್‌ಶಿಪ್ ಮೇಲೆ ನಂಬಿಕೆ ಇಟ್ಟು ಪಕ್ಷಕ್ಕೆ ಬಂದರೆ ಬರಬಹುದು. ಹಿಂದೆ ಪಕ್ಷ ಬಿಟ್ಟು ಹೋದವರು ಕೂಡಾ ಬರಬಹುದು ಎಂದು ಆಹ್ವಾನ ನೀಡಿದರು.
ಪಕ್ಷ ಬಿಟ್ಟು ಹೋಗೋರು ವಾಪಸ್ ಬಂದಿರೋ ಉದಾಹರಣೆ ಇದೆ, ಆದರೆ ಅವರಿಗೆ ಫಸ್ಟ್ ಬೆಂಚ್ ಸಿಗಲ್ಲ. ತಪ್ಪು ಮಾಡಿದ್ದನ್ನು ಸರಿ ಮಾಡಿಕೊಳ್ಳುತ್ತೇವೆ ಎಂದರೆ ಮಾಡಿಕೊಂಡು ಬರಬಹುದು. ಫಸ್ಟ್ ಬೆಂಚ್ ಸಿಗದೇ ಹೋದರೂ ಅವರಿಗೆ ಕ್ಲಾಸ್ ರೂಂಗೆ ಅವಕಾಶ ಇದೆ ಎಂದು ಮಾರ್ಮಿಕವಾಗಿ ನುಡಿದರು.
ನನ್ನ ಜತೆ ಶಾಸಕರು ಚರ್ಚೆ ಮಾಡಿರೋದರ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ಪರಮೇಶ್ವರ್ ಹೇಳಿದರು.
ಈ ಬಾರಿ ಕರ್ನಾಟಕದ ಜನತೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ನಡೆದಿದ್ದೇವೆ. ನುಡಿದಂತೆ ನಡೆದಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ಇದಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ ಎಂದರು.
ಬಿಜೆಪಿ ಅವರು ಕಳೆದ ಬಾರಿ 25 ಸ್ಥಾನ ಪಡೆದಿದ್ದರು. ಈ ಬಾರಿ ನಾವು ಇಷ್ಟು ಸ್ಥಾನ ಪಡೆಯಬೇಕು ಅಂತ ನಿರ್ಧರಿಸಿದ್ದೇವೆ ಜನರ ಆಶೀರ್ವಾದ ಹೇಗಿರುತ್ತದೊ ನೋಡೋಣ ಎಂದು ಗೃಹ ಸಚಿವರು ತಿಳಿಸಿದರು.