ಕಾಮಗಾರಿ ಸುತ್ತ ಅನುಮಾನದ ಹುತ್ತ; ಮಾಜಿ ಸಚಿವರು, ಹಿಂದಿನ ಉನ್ನತ ಅಧಿಕಾರಿಗಳ ಪಾತ್ರದ ಬಗ್ಗೆ ಶಂಕೆ
ಬೆಂಗಳೂರು: ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜ್ ಮೇಲೆ ಈಗ ಕಾಂಗ್ರೆಸ್ ಸರಕಾರದ ಕಣ್ಣು ಬಿದ್ದಿದೆ. ಕಾಲೇಜ್ ಟೆಂಡರ್ ಮತ್ತು ನಿರ್ಮಾಣದಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪ ಹಿನ್ನಲೆಯಲ್ಲಿ ಸರಕಾರ ಅದರ ಜನ್ಮ ಜಾಲಾಡಲು ಹೊರಟಿದೆ.
ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ತಲೆ ಎತ್ತಿರುವ ಮೆಡಿಕಲ್ ಕಾಲೇಜ್ ಗಳ ಪೈಕಿ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿನ ನಿರ್ಮಾಣದಲ್ಲ ಅವ್ಯವಹಾರಗಳು ದೊಡ್ಡ ಪ್ರಮಾಣದಲ್ಲಿ ನಡೆದಿರುವ ಅನುಮಾನವನ್ನು ರಾಜ್ಯ ಕಾಂಗ್ರೆಸ್ ಸರಕಾರ ಹೊಂದಿದೆ.
ಕಾರಣವಿಷ್ಟೇ; 500 ಕೋಟಿ ರೂ.ಗಳ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿನ ಟೆಂಡರ್ ಮೊತ್ತವನ್ನು ಏಕಾಎಕಿ 800 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಸರಿ ಸುಮಾರು 300 ಕೋಟಿ ರೂ.ಗಳಷ್ಟು ದೊಡ್ಡ ಪ್ರಮಾಣದಲ್ಲಿ ಟೆಂಡರ್ ಮೊತ್ತವನ್ನು ಪರಿಷ್ಕರಣೆ ಮಾಡಿದ ಒಳ ಉದ್ದೇಶ ಏನೆಂಬುದು ಗೊತ್ತಾಗಬೇಕಿದೆ ವೈದ್ಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಅಧಿಕಾರಿಗಳ ಬಗ್ಗೆಯೂ ಅನುಮಾನ
ಅಲ್ಲದೆ, ಗುತ್ತಿಗೆ ನಿರ್ವಹಣೆ, ಕಾಮಗಾರಿ ಗುಣಮಟ್ಟ, ನಿರ್ಮಾಣ ವಸ್ತುಗಳ ಪೂರೈಕೆ, ಚಿಕ್ಕಬಳ್ಳಾಪುರ ನಗರ ಸಮೀಪ ನಿರ್ಮಾಣವಾಗಬೇಕಿದ್ದ ಕಾಲೇಜ್ ಪೆರೇಸಂದ್ರಕ್ಕೆ ಶಿಫ್ಟ್ ಆಗಿದ್ದು, ಈ ಎಲ್ಲಾ ಪ್ರಕ್ರಿಯೆಯಲ್ಲಿ ಅಂದಿನ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಹಾಗೂ ಅಂದಿನ ಜಿಲ್ಲೆಯ ಉನ್ನತ ಅಧಿಕಾರಿಗಳ ಶಂಕಿತ ಪಾತ್ರ ಇತ್ಯಾದಿಗಳನ್ನು ಆಮೂಲಾಗ್ರವಾಗಿ ತನಿಖೆ ಮಾಡಲು ಸರಕಾರ ನಿರ್ಧರಿಸಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ಹೇಳುವ ಪ್ರಕಾರ, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜ್ ನಿರ್ಮಾಣದ ಬಗ್ಗೆ ಅನೇಕ ದೂರುಗಳು ಬಂದಿದ್ದು, ಹಿಂದಿನ ವೈದ್ಯಕೀಯ ಶೀಕ್ಷಣ ಖಾತೆ ಸಚಿವರ ವಿರುದ್ಧ ಗುರುತರ ಆರೋಪಗಳು ಬಂದಿವೆ. ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಸರಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಸರಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಮುಂದಾಗಿದೆ.
ಚಿಕ್ಕಬಳ್ಳಾಪುರ ನಗರ ಸಮೀಪವೇ ನಿರ್ಮಾಣವಾಗಬೇಕಿದ್ದ ಮೆಡಿಕಲ್ ಕಾಲೇಜ್ ಅಂದಿನ ವೈದ್ಯಕೀಯ ಶಿಕ್ಷಣ ಸಚಿವರ ಹಿತಾಸಕ್ತಿಗೆ ಅನುಗುಣವಾಗಿ ಆ ಕಾಲೇಜ್ ಅನ್ನು ಮಾಜಿ ಸಚಿವರ ಹುಟ್ಟೂರು ಪೆರೇಸಂದ್ರ ಸಮೀಪದ ಆರೂರು ಗ್ರಾಮಕ್ಕೆ ಶಿಪ್ಟ್ ಮಾಡಿದ ಬಗ್ಗೆಯೂ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಅಲ್ಲದೆ, ಈ ಪ್ರಕ್ರಿಯೆಯಲ್ಲಿ ಅಂದಿನ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆಯೂ ಅನೇಕ ಸಂಶಯಗಳಿವೆ. ಆ ಕುರಿತಂತೆ ಅಧಿಕಾರಿಗಳ ವಿರುದ್ಧವೂ ಆಮೂಲಾಗ್ರ ತನಿಖೆ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಈಗಾಗಲೇ ಸರಕಾರವನ್ನು ಒತ್ತಾಯ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜ್ ಒಂದರಲ್ಲಿಯೇ ಬಹುಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ನಿನ್ನೆ ಕಲಬುರಗಿಯಲ್ಲಿ ವೈದ್ಯ ಶಿಕ್ಷಣ ಖಾತೆ ಸಚಿವ ಡಾ.ಶರಣ ಪ್ರಕಾಶ್ ಹೇಳಿದ್ದರು. ಅವರ ಈ ಹೇಳಿಕೆ ಬಿಜೆಪಿ ವಲಯದಲ್ಲಿ ತಲ್ಲಣ ಉಂಟು ಮಾಡಿದೆ.
ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ಹಾಗೂ ಹಾವೇರಿ ವೈದ್ಯ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು ಈ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು ಎಂದು ಎಂದು ಅವರು ತಿಳಿಸಿದ್ದರು.
ಬಹುತೇಕ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲೇ ಹೆಚ್ಚಿನ ಅವ್ಯವಹಾರ ನಡೆದಿದೆ ಎಂದು ಹಾಲಿ ಸಚಿವರು ಹೇಳಿದ್ದು, ಅವರು ಮಾಜಿ ಸಚಿವರತ್ತ ನೇರವಾಗಿ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲೊಕೋಪಯೋಗಿ ಇಲಾಖೆ ಕಾರ್ಯದರ್ಶಿ ಮಟ್ಟದಲ್ಲಿ ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಹಾವೇರಿ ಮೆಡಿಕಲ್ ಕಾಲೇಜು ನಿರ್ಮಾಣದ ಅಂದಾಜು ವೆಚ್ಚ 365 ಕೋಟಿ ರೂ. ಆಗಿತ್ತು. ಅದನ್ನು ಏಕಾಎಕಿ 499 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಅಂದಾಜು ವೆಚ್ಚದಲ್ಲಿ ಏಕಾಎಕಿ 136 ಕೋಟಿ ರೂ. ಹೆಚ್ಚಳ ಅನೇಕ ಸಂಶಯಗಳಿಗೆ ಕಾರಣವಾಗಿದೆ ಎನ್ನುವುದು ಆ ಮೂಲಗಳು ಹೇಳುವ ಮಾತು.