ಇಸ್ರೋ ಕೇಂದ್ರದಲ್ಲಿ ಪ್ರಧಾನಿ ಮೋದಿ
ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.
ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿಯವರು ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಹಾಗೂ ಆಗಸ್ಟ್ 23ರ ದಿನವನ್ನ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದರು.
ಈ ವೇಳೆ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ವಿಜ್ಞಾನಿಗಳ ಸಾಧನೆ ಐತಿಹಾಸಿಕ ದಾಖಲೆ ಎಂದು ಕೊಂಡಾಡಿದರು.
ಚಂದ್ರಯಾನ-3 ಯೋಜನೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆದ ದಿನವನ್ನು, ಅಂದರೆ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.ಚಂದ್ರಯಾನ-2 ಪತನ ಸ್ಥಳಕ್ಕೆ ತಿರಂಗ ಪಾಯಿಂಟ್ ಎಂದು ನಾಮಕರಣ ಮಾಡಿದ ಪ್ರಧಾನಿ,ಈ ತಿರಂಗ ಪಾಯಿಂಟ್ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಯಿತು ಎಂದು ಹೇಳಿದರು.
ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು, ಮೇಕ್ ಇನ್ ಇಂಡಿಯಾ ಚಂದ್ರನವರೆಗೂ ತಲುಪಿದೆ, ವಿಜ್ಞಾನಿಗಳ ಸಾಧನೆ ದೇಶದ ಪ್ರತಿಯೊಬ್ಬರಿಗೂ ತಿಳಿಯಬೇಕಿದೆ.ಚಂದ್ರಯಾನ-3 ರ ಯಶಸ್ಸಿನಿಂದ ಯುವ ಪೀಳಿಗೆಗೆ ನಿರಂತರವಾಗಿ ಪ್ರೇರಣೆ ಸಿಗಲಿದೆ ಎಂದು ಹೇಳಿದರು.
ಕೇಂದ್ರ, ರಾಜ್ಯ ಸರ್ಕಾರ ಸಹಯೋಗದಲ್ಲಿ ಬಾಹ್ಯಾಕಾಶ, ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ರಾಷ್ಟ್ರಮಟ್ಟದ ಹ್ಯಾಕಥಾನ್ ಆಯೋಜಿಸಲಾಗುವುದು ಎಂದು ಇದೇ ವೇಳೆ ಮೋದಿ ತಿಳಿಸಿದರು.ಇಸ್ರೋ ವಿಜ್ಞಾನಿಗಳು ಹಲವು ಉಪಗ್ರಹ ಉಡಾವಣೆ ಮಾಡಿದ್ದಾರೆ. ಈ ಉಪಗ್ರಹಗಳ ನೆರವಿನಿಂದ ಹಲವು ಕ್ಷೇತ್ರಗಳಿಗೆ ಅನುಕೂಲ ಆಗುತ್ತಿದೆ.ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಿಗೆ ಅನುಕೂಲವಾಗುತ್ತಿದೆ. ತಂತ್ರಜ್ಞಾನ ಬೆಳವಣಿಗೆಯಾದರೆ ದೇಶ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಪ್ರಧಾನಿ ಹೇಳಿದರು.