ಮಹಾನಟನಿಗೆ ಸಂದ ಗೌರವ
ನವದೆಹಲಿ: ಭಾರತೀಯ ಚಿತ್ರರಂಗದ ಮಹಾನ್ ನಟ ಹಾಗೂ ಅವಿಭಜಿತ ಆಂದ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 100 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರು ನೂತನ ನಾಣ್ಯವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಆಂದ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್ ಟಿಆರ್ ಅವರ ಪುತ್ರ, ನಟ ಹಾಗೂ ಶಾಸಕ ನಂದಮೂರಿ ಬಾಲಕೃಷ್ಣ ಸೇರಿ ಅವರ ಕುಟುಂಬದ ಸದಸ್ಯರೆಲ್ಲರೂ ಹಾಜರಿದ್ದರು.
ಸಿನಿಮಾ ಕ್ಷೇತ್ರದಲ್ಲಿ ಎನ್ ಟಿಆರ್ ಅವರು ಅಚ್ಚಳಿಯದ ಛಾಪು ಮೂಡಿಸಿರುವ ಮಹಾನ್ ತಾರೆ. ಶ್ರೀರಾಮ, ಶ್ರೀಕೃಷ್ಣ, ಅರ್ಜುನ ಪಾತ್ರಗಳಷ್ಟೇ ಅಲ್ಲದೆ, ನೆಗೆಟಿವ್ ಶೇಡ್ ಇರುವ ದುರ್ಯೋಧನ, ರಾವಣ, ಕೀಚಕ, ಕರ್ಣ ಸೇರಿ ಅನೇಕ ಪಾತ್ರಗಳಿಗೆ ಜೀವ ತುಂಬಿದ್ದರು. ಆ ಮೂಲಕ ಜನತೆಯ ಹೃದಯದಲ್ಲಿ ನೆಲೆಸಿದ್ದಾರೆ.
ಅಲ್ಲದೆ, ಮುಖ್ಯಮಂತ್ರಿ ಆಗಿಯೂ ಅವರು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ದಕ್ಷ, ಕಟ್ಟುನಿಟ್ಟಿನ ಆಡಳಿತ ಹಾಗೂ ಜನಪರ ಆಡಳಿತದ ಮೂಲಕ ಅವರು ತೆಲುಗು ಜನರ ಆರಾಧ್ಯ ದೈವ ಆಗಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಎನ್ ಟಿಆರ್ ಅವರ ಗುಣಗಾನ ಮಾಡಿ, ಅವರ ಸಾಧನೆಗಳನ್ನು ಸ್ಮರಿಸಿದರು. ಅಲ್ಲದೆ, ಅವರ ಸ್ಮರಣೆಯಲ್ಲಿ ನಾಣ್ಯವನ್ನು ಹೊರತಂದ ಹಣಕಾಸು ಇಲಾಖೆಯನ್ನು ಅವರು ಅಭಿನಂದಿಸಿದರು.