ಜೆಡಿಎಸ್ ಎಂಎಲ್ಸಿ ಇಂಚರ ಗೋವಿಂದರಾಜು ಅನುದಾನದಲ್ಲಿ ಕೊಳವೆಬಾವಿ
ಉಕ್ಕಿ ಹರಿದ ಜೀವಜಲ; ಸಂಘದ ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿ ಸಂತಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿಗಳು
ಗುಡಿಬಂಡೆ/ಬೆಂಗಳೂರು: ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಆದಿನಾರಾರಾಯಣ ಸ್ವಾಮಿ ಸನ್ನಿಧಿ ಎಲ್ಲೋಡಿನ ಆದಿನಾರಾಯಣ ಬೆಟ್ಟದ ತಪ್ಪಲಿನಲ್ಲಿ ಕಲ್ಯಾಣ ಮಂಟಪಕ್ಕೆ ಕುಡಿಯುವ ನೀರು ಒದಗಿಸುವ ಕಾರ್ಯ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಒತ್ತಾಸೆಯೊಂದಿಗೆ ಸಾಕಾರಗೊಂಡಿದೆ.
ಸುಮಾರು 3 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಕಲ್ಯಾಣ ಮಂಟಪದ ಸಮೀಪದ ಕೊಳವೆ ಬಾವಿಯನ್ನು ಕೊರೆಸಲಾಗಿದ್ದು, ಅದರಲ್ಲಿ ಸಮೃದ್ಧವಾಗಿ ನೀರು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಎಲ್ಲೋಡು ಗ್ರಾಮದ ಜನರು ಹಾಗೂ ಭಕ್ತ ಸಮೂಹ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ 2022 ನವೆಂಬರ್ 26ರಂದು ಪಂಚರತ್ನ ರಥಯಾತ್ರೆಯ ನಿಮಿತ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎಲ್ಲೋಡು ಗ್ರಾಮದ ಕೂರ್ಮಗಿರಿಯ ಕ್ಷೇತ್ರದ ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿದ್ದರು. ಪೂಜಾ ಕಾರ್ಯಕ್ರಮವು ಮುಗಿದ ಮೇಲೆ ದೇವಸ್ಥಾನಕ್ಕೆ ನೀರಿನ ಅವಶ್ಯಕತೆ ಇರುವುದರಿಂದ ಕೊಳವೆಬಾವಿಯನ್ನು ಕೊರೆಸಿ ಕೊಡುವಂತೆ ಬ್ರಾಹ್ಮಣರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯ ಪ್ರಕಾಶ್ ಹಾಗೂ ದೇಗುಲದ ಪ್ರಧಾನ ಅರ್ಚಕರಾದ ಜ್ವಾಲಾ ಪ್ರಸಾದ್ ಶರ್ಮ ಅವರು ಮನವಿ ಮಾಡಿದ್ದರು.
ಈ ಮನವಿಗೆ ಸಕಾರಾತ್ಮಕವಾಗಿ ಕೂಡಲೇ ಸ್ಪಂದಿಸಿದ ಕುಮಾರಸ್ವಾಮಿ ಅವರು, ಅಂದು ತಮ್ಮ ಜತೆಯಲ್ಲಿಯೇ ಹಾಜರಿದ್ದ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು ಅವರಿಗೆ, ತಮ್ಮ ಅನುದಾನದಲ್ಲಿ ಕೊಳವೆಬಾವಿ ಮಂಜೂರು ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಮಾಜಿ ಮುಖ್ಯಮಂತ್ರಿಗಳ ನಿರ್ದೇಶನದಂತೆ 2022 ಡಿಸೆಂಬರ್ 23ರಂದು ಬ್ರಾಹ್ಮಣ ಸೇವಾ ಸಂಘದ ಹೆಸರಿನಲ್ಲಿ ಮನವಿ ಪತ್ರ ಸಿದ್ಧಪಡಿಸಿ ಇಂಚರ ಗೋವಿಂದರಾಜು ಅವರಿಗೆ ಸಲ್ಲಿಸಲಾಗಿತ್ತು. ಅದರಂತೆ 2023 ಜನವರಿ 17ರಂದು ತಮ್ಮ ಅನುದಾನದಲ್ಲಿ 3 ಲಕ್ಷ ರೂ.ಗಳನ್ನು ಮಂಜೂರು ಮಾಡಿ ಕೊಳವೆಬಾವಿ ಕೊರೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದ್ದರು.
ಅಂತಿಮವಾಗಿ ಇದೇ ಸೆಪ್ಟೆಂಬರ್ 15ರಂದು ಬೆಟ್ಟದ ತಪ್ಪಲಿನಲ್ಲಿರುವ ಕಲ್ಯಾಣ ಮಂಟಪದ ಬಳಿ ಕೊಳವೆಬಾವಿ ಕೊರೆಸಲಾಗಿದ್ದು, ಸುಮಾರು 3.5ರಿಂದ 4 ಇಂಚು ನೀರು ಸಿಕ್ಕಿದೆ ಎಂದು ಬ್ರಾಹ್ಮಣರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯ ಪ್ರಕಾಶ್ ತಿಳಿಸಿದ್ದಾರೆ.
ಅಲ್ಲದೆ, ಕೊಳವೆಬಾವಿಯಲ್ಲಿ ನೀರು ಸಿಕ್ಕಿದಾಕ್ಷಣ ಈ ಮಾಹಿತಿಯನ್ನು ಮಾಜಿ ಮುಖ್ಯಮಂತ್ರಿಗಳ ಕಚೇರಿಗೆ ಅವರು ತಿಳಿಸಿದ್ದರು. ತಮ್ಮ ಗಮನಕ್ಕೆ ಈ ವಿಷಯ ಬಂದ ಕೂಡಲೇ ಸೂರ್ಯ ಪ್ರಕಾಶ್ ಅವರಿಗೆ ಮೊಬೈಲ್ ಕರೆ ಮಾಡಿದ ಕುಮಾರಸ್ವಾಮಿ ಅವರು, ಕೊಳವೆಬಾವಿಯಲ್ಲಿ ನೀರು ಸಿಕ್ಕಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ತಾವು ಇನ್ನೊಮ್ಮೆ ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ದೈವ ದರ್ಶನ ಪಡೆಯುವುದಾಗಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು ಅವರ ಒತ್ತಾಸೆ, ನೆರವಿನಿಂದ ಕೊಳವೆಬಾವಿ ಕೊರೆಯಲಾಗಿದ್ದು, ಸಮೃದ್ಧವಾದ ನೀರು ಸಿಕ್ಕಿದೆ. ಇನ್ನು ಮುಂದೆ ಇಲ್ಲಿ ನೀರಿನ ಬವಣೆ ನೀಗಲಿದೆ. ಈ ಕಾರ್ಯ ನಮಗೆಲ್ಲರಿಗೂ, ಭಕ್ತರಿಗೆ ಬಹಳ ಸಂತಸ ಉಂಟು ಮಾಡಿದೆ.
ಸೂರ್ಯ ಪ್ರಕಾಶ್, ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ಬ್ರಾಹ್ಮಣರ ಸೇವಾ ಸಂಘ