ಮುನಿಸ್ವಾಮಿ vs ಎಸ್.ಎನ್.ನಾರಾಯಣಸ್ವಾಮಿ ಗಲಾಟೆಯಲ್ಲಿ ಖಾಕಿಗಳ ಅಬ್ಬರ
ಜನತಾದರ್ಶನದಲ್ಲಿ ತೋಳೇರಿಸಿ ನಿಂತ ಶಾಸಕ-ಸಂಸದ; ಕೋಲಾರದಲ್ಲಿ ವಿಲಕ್ಷಣ ಘಟನೆ, ಭೂಗಳ್ಳ ಎಂದಿದ್ದಕ್ಕೆ ಸಿದ್ದಾದ ಎಸ್ಸೆನ್
ಕೋಲಾರ: ಜಿಲ್ಲಾ ಕೇಂದ್ರದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಂಸದರು ಹಾಗೂ ಶಾಸಕರು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಪ್ರಸಂಗ ಇಂದಿಲ್ಲಿ ನಡೆದಿದೆ.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಜನತಾದರ್ಶನದಲ್ಲಿ ಈ ಘಟನೆ ನಡೆಯಿತು.
ಭೂಗಳ್ಳರನ್ನು ಪಕ್ಕದಲ್ಲಿ ಕೂರಿಸಿಕೊಂಡು ಜನತಾದರ್ಶನ ನಡೆಸಿದರೆ ಉಪಯೋಗ ಏನು ಎಂದು ಸಂಸದ ಮುನಿಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಮಾತನ್ನು ತಮ್ಮನ್ನು ಉದ್ದೇಶಿಸಿಯೇ ಹೇಳಿದ್ದು ಎಂದು ಸಚಿವರ ಪಕ್ಕದಲ್ಲಿಯೇ ಕೂತಿದ್ದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶಗೊಂಡರು.
ಒಬ್ಬ ಶಾಸಕನ ಬಗ್ಗೆ ಏನ್ ಮಾತಾಡ್ತಿದ್ದೀಯಾ? ಎಂದು ಶಾಸಕ ನಾರಾಯಣಸ್ವಾಮಿ ಕೂಗಿದರೆ, ಇದ್ದಿದ್ದನ್ನೇ ಹೇಳಿದ್ದೇನೆ ಎಂದು ಹೇಳಿದರು ಸಂಸದ ಮುನಿಸ್ವಾಮಿ. ಇಬ್ಬರು ಕೈಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಸಚಿವ ಭೈರತಿ ಸುರೇಶ್ ಶಾಸಕರ ಪರ ನಿಂತರು. ಅಲ್ಲಿಗೆ ಮತ್ತಷ್ಟು ಕೆರಳಿದ ಸಂಸದರು, ಶಾಸಕರ ಮೇಲೆ ಏರಿ ಬರಲು ಯತ್ನಿಸಿದರು. ಆಗ ಪೊಲೀಸರು ಸಕಾಲಕ್ಕೆ ಮಧ್ಯಪ್ರವೇಶ ಮಾಡಿ ಸಂಸದರನ್ನು ರಂಗಮಂದಿರದ ಹೊರಗೆ ಕರೆದು ಹೋದರು.
ಸಭೆಯಿಂದ ಸಂಸದರನ್ನು ಹೊರದಬ್ಬಿದ ಎಸ್ ಪಿ!!
ಈ ವೇಳೆ ಸಂಸದರನ್ನು ಪೊಲೀಸರು ಹೊರಗೆ ಕಳಿಸಲು ಪ್ರಯತ್ನಿಸಿದರು. ಆದರೆ, ಅವರೊಂದಿಗೆ ವಾಗ್ವಾದಕ್ಕಿಳಿದ ಅವರನ್ನು ಸಾಮಾನ್ಯರನ್ನು ಎತ್ತಿ ಹೊರಗೆ ಹಾಕುವಂತೆ ಪೊಲೀಸರು ಸಮಸದರನ್ನು ಹೊರದಬ್ಬಿದರು. ಅಲ್ಲದೆ, ಸಂಸದರ ವಿರುದ್ಧ ಪೊಲೀಸರು ಏರು ದನಿಯಲ್ಲಿ ಕೂಗಾಡಿದರು. ಈ ಸಂದರ್ಭದಲ್ಲಿ ಎಸ್ ನಾರಾಯಣ ಅವರಂತೂ ಸಂಸದರ ವಿರುದ್ಧ ಏರುದನಿಯಲ್ಲಿ ಕೂಗಾಡಿದರಲ್ಲದೆ, ಅವರ ಕುತ್ತಿಗೆಪಟ್ಟಿಗೆ ಕೈಹಾಕಿ ಹೊರದಬ್ಬಿದರು!
ಎಸ್.ಎನ್ ನಾರಾಯಣಸ್ವಾಮಿ ಹೇಳಿದ್ದೇನು?
ಭೂಗಳ್ಳ ಅಂತ ಸಂಸದರು ಯಾರಿಗೆ ಕರೆದಿದ್ದಾರೆ? ಸಂಸದ ಮುನಿಸ್ವಾಮಿ ಒಬ್ಬ ಸೈಕೋ. ನಾಲ್ಕು ವರ್ಷಗಳಿಂದ ಪ್ರೆಸ್ʼಮೀಟ್ ಹಾಗೂ ಸಾರ್ವಜನಿಕವಾಗಿ ಹೇಳಿಕೊಂಡು ತಿರುಗುತ್ತಿದ್ದಾನೆ. ನಿನ್ನ ಅಪ್ಪನಿಗೆ ಹುಟ್ಟಿದ್ರೆ ಸಾಭೀತು ಮಾಡು ಎಂದು ಹೇಳಿದ್ದೇನೆ. ಸಿಎಂ ಪ್ರಿನ್ಸಿಪಲ್ ಸೆಕ್ರೆಟರಿ ಆಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಬಳಸಿಕೊಂಡು ತಹಶೀಲ್ದಾರ್ ದಯಾನಂದ್ ಗೆ ಹಾಕಿಕೊಂಡು ಬಂದಿದ್ದ. ನನ್ನ ವಿರುದ್ಧ ಏನೂ ಮಾಡಿದ್ರು ಸಾಭೀತು ಮಾಡಲು ಆಗಲಿಲ್ಲ. ನಾನು ಯಾವುದೇ ಸರಕಾರಿ ಜಮೀನು ಕಬಳಿಕೆ ಮಾಡಿಲ್ಲ. ಬಡಾವಣೆಯನ್ನೂ ನಿರ್ಮಾಣ ಮಾಡಿಲ್ಲ.
ಮುನಿಸ್ವಾಮಿಗೆ ಭ್ರಷ್ಟ ಎನ್ನುವ ಪದದ ಅರ್ಥ ಗೊತ್ತಿದಿಯಾ? 15 ಕ್ರಿಮಿನಲ್ ಕೇಸ್ ನನ್ನ ಮೇಲೆ ಇದೆ ಅಂತ ಹೇಳ್ತಿದ್ದಾನೆ. ನನ್ನ ಮೇಲೆ ಯಾವುದೇ ಪೊಲೀಸ್ ಠಾಣೆಯಲ್ಲಿ ಒಂದೇ ಒಂದು ಕ್ರಿಮಿನಲ್ ಕೇಸ್ ಇಲ್ಲ. ವಿನಾಕಾರಣ ಮತನಾಡೋದು ಬಿಜೆಪಿ ಸಂಸ್ಕೃತಿ? ನನ್ನ ಬಗ್ಗೆ ಮಾತನಾಡಿದರೆ ಪರಿಣಾಮ ನೆಟ್ಟಗೆ ಇರೋದಿಲ್ಲ. ಮುಂದಿನ ಚುನಾವಣೆಯಲ್ಲಿ ಠೇವಣಿ ಇಲ್ಲದೆ ಸೋಲ್ತಿಯಾ ನೀನು. ಸಚಿವರ ಅಕ್ಕಪಕ್ಕ ಕುಳಿತಿರುವ ಭೂಗಳ್ಳರು ಅಂತ ಹೇಳಿದ್ದೀಯಾ. ಹಾಗಾದರೆ ನಾನು, ಕೋಲಾರ ಶಾಸಕ ಇಬ್ಬರು ಭೂಗಳ್ಳರಾ? ಪ್ರಚಾರ ಗಿಟ್ಟಿಸಿಕೊಳ್ಳೋದಕ್ಕೆ ನನ್ನ ವಿರುದ್ಧ ಮಾತನಾಡಬೇಡ. ನಾನು ಯಾವುದೇ ಕೆರೆಯಲ್ಲಿ ಒಂದು ಗುಂಟೆ ಒತ್ತುವರಿ ಮಾಡಿದ್ದರೆ ಸಾಭೀತು ಮಾಡು. ಸಾಭೀತು ಮಾಡಿದರೆ ನಿನ್ನ ಮನೆಯ ಕೆಲಸಗಾರನಾಗಿ ಇರ್ತೀನಿ. ಇಲ್ಲಾ ಅಂದ್ರೆ ನಮ್ಮ ಮನೆಯಲ್ಲಿ ವಾಚ್ ಮ್ಯಾನ್ ಕೆಲಸ ಇದೆ, ಬಂದು ಸೇರಿಕೋ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಸಂಸದರಿಗೆ ಸವಾಲು ಹಾಲಿದರು.
ಸಂಸದ ಮುನಿಸ್ವಾಮಿ ಹೇಳಿದ್ದು
ಇಂದಿನ ಜನತಾ ದರ್ಶನ ಕಾರ್ಯಕ್ರಮ ಕಾಂಗ್ರೆಸ್ ಪ್ರೇರಿತ. ಅದು ಕಾಂಗ್ರೆಸ್ ದರ್ಶನವಾಗಿತ್ತು. ಜನಪ್ರತಿನಿಧಿಗಳು ಒಳ್ಳೆಯವರಾಗಿ ಭೂ ಕಬಳಿಕೆ ಮಾಡದೆ ಅಧಿಕಾರಿಗಳ ಮೇಲೆ ಬೆದರಿಕೆ ಹಾಕದೆ ಇರಬೇಕು. ಕಾರ್ಯಕ್ರಮದಲ್ಲಿ ಜನರಿಗಿಂತ ಅಧಿಕಾರಿಗಳೇ ಹೆಚ್ಚು ಇದ್ದರು. ಒಬ್ಬರ ಸಮಸ್ಯೆಯೂ ಇಲ್ಲಿ ಪರಿಹಾರ ಆಗಲಿಲ್ಲ. ಶ್ರೀನಿವಾಸಪುರ ತಾಲೂಕಿನಲ್ಲಿ ರೈತರ ಬೆಳೆ ನಾಶವಾಗಿದೆ. ಏಕಾಏಕಿ ಅರಣ್ಯ ಇಲಾಖೆಯವರು ತೆರವು ಮಾಡಿರೋದು ಖಂಡನೀಯ. ನಮ್ಮಂತ ಶಾಸಕರು, ಸಂಸದರು ಮಾಡಿರುವ ಒತ್ತುವರಿ ತೆರವು ಮಾಡಬೇಕು. ಭೂಗಳ್ಳರನ್ನು ಅಕ್ಕಪಕ್ಕ ಕೂರಿಸಿಕೊಂಡು ಸಭೆ ಮಾಡೋದು ಸರಿ ಅಲ್ಲ ಅಂತ ಉಸ್ತುವಾರಿ ಮಂತ್ರಿಗಳಿಗೆ ಹೇಳಿದೆ. ನಾನು ಯಾರ ಹೆಸರು ಹೇಳದೆ ಮಂತ್ರಿಗಳ ಬಳಿ ಹೇಳಿದ್ದೇನೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲ್ಯಾಕೆ ಮುಟ್ಟಿ ನೋಡಿಕೊಳ್ಳಬೇಕು.
ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮೇಲೆ ಐದಾರು ಕೇಸುಗಳಿವೆ. ಡಿ.ಕೆ.ರವಿ ಸಾವಿನ ಹಿಂದೆ ಎಸ್.ಎನ್ ನಾರಾಯಣಸ್ವಾಮಿ ಕೈವಾಡ ಇದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಗಾಲ್ಫ್ʼನಲ್ಲಿ 50 ಎಕರೆ ಮಾಡಿಕೊಂಡಿದ್ದಾಗ ಡಿ.ಕೆ.ರವಿ ತೆರವು ಮಾಡಿ ಫೆನ್ಸಿಂಗ್ ಹಾಕಿಸಿದ್ದರು. ಕೋರ್ಟ್ ನಲ್ಲಿ ತಡೆ ತರಲು ಹೋಗಿದ್ದರು. ಅದು ಸಹ ತೆರವು ಆಗಿದೆ. ಇವರ ಮಾಡಿರುವ ಎಸ್.ಎನ್ ಸಿಟಿ ಲೇಔಟ್ ನಲ್ಲಿ ಎರಡು ಮೂರು ಕೆರೆ ಒತ್ತುವರಿ ಆಗಿದೆ.
ಲೇಔಟ್ ಮುಂದಿರುವ ಜಾಗ ಸರಕಾರಿ ಗುಂಡುತೋಪು ಅಂತಿದೆ. 30 ಗುಂಟೆ ಒತ್ತುವರಿ ಆಗಿದೆ. ಇವತ್ತು ವೇದಿಕೆಯಲ್ಲಿ ಏಕಾಏಕಿ ಅವಾಚ್ಯವಾಗಿ ನಿಂದಿಸಿ ನನ್ನ ಮೇಲೆ ನಾರಾಯಣಸ್ವಾಮಿ ಬಂದ. ಭೂ ಕಬಳಿಕೆ ಕೇಸುಗಳು ಎಸ್.ಎನ್.ನಾರಾಯಣಸ್ವಾಮಿ ಮೇಲಿವೆ. ಕಳ್ಳರ ಬಳಿ ಹೋಗಿ ನ್ಯಾಯ ಕೇಳೋದಕ್ಕೆ ಆಗುತ್ತಾ? ಅವಾಚ್ಯ ಶಬ್ದಗಳಿಂದ ಬೈದಿರುವ ಅವರ ಮನಸ್ಥಿತಿ ಏನೂ ಅಂತ ಎಲ್ಲರಿಗೂ ಗೊತ್ತಿದೆ. ಎಸ್.ಎನ್ ನಾರಾಯಣಸ್ವಾಮಿ ಅವರ ತಾಯಿ ಹೆಸರಿನಲ್ಲಿ 4 ಎಕರೆ ಕಲ್ಲುಬಂಡೆ ಅಂತ ಮಂಜೂರು ಮಾಡಲಾಗಿದೆ. 50 ಎಕರೆ ಸರಕಾರಿ ಜಮೀನು ಮಾಡಿಕೊಂಡಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಕೊಂಡು ನೋಡ್ಕೊತಾರೆ. ಇವತ್ತಿನಿಂದ ಇದರ ವಿರುದ್ಧ ನಾವು ಹೋರಾಟ ಆರಂಭ ಮಾಡುತ್ತೇವೆ. ನಾರಾಯಣಸ್ವಾಮಿ ಮೇಲೆ FIR ಆಗಿದ ಬಳಿಕ ನಮ್ಮ ಮನೆಯ ವಾಚ್ ಮ್ಯಾನ್ ಕೆಲಸ ಮಾಡಬೇಕಿತ್ತು. ಬೇಲಿನೇ ಎದ್ದು ಹೊಲ ಮೇಯ್ದಾಗ ಏನು ಮಾಡೋಕೆ ಆಗುತ್ತೆ? ಎಸ್.ಎನ್.ನಾರಾಯಣಸ್ವಾಮಿ ಅವರ ಒತ್ತುವರಿ ತೆರವು ಮಾಡಲಿ ಎಂದು ಸಂಸದರು ಒತ್ತಾಯಿಸಿದರು.
Comments 2