ಅಧಿಕಾರಕ್ಕೆ ಮೊದಲು ಅದೇ ಮಾತು; ಅಧಿಕಾರಕ್ಕೆ ಬಂದ ಮೇಲೂ ಅದೇ ಮಾತು
ಮೈಸೂರು: ಮೇಕೆದಾಟು ಯೋಜನೆಯಿಂದ ಕರ್ನಾಟಕ-ತಮಿಳುನಾಡು ನಡುವಿನ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬಹುದಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿದ್ದರಾಮಯ್ಯ ಮಾತನಾಡಿದರು.
ವಿಪರ್ಯಾಸ ಎಂದರೆ ಕಾಂಗ್ರೆಸ್ ಅಧಿಕಾರಕ್ಕೆ ಮೊದಲು ಅದೇ ಮಾತು; ಅಧಿಕಾರಕ್ಕೆ ಬಂದ ಮೇಲೂ ಅದೇ ಮಾತು ಹೇಳುತ್ತಿದೆ. ಮೇಕೆದಾಟು ವಿಷಯದಲ್ಲಿ ಒಂದು ಕಲ್ಲು ಅಲ್ಲಾಡಿಲ್ಲ ಎನ್ನುವುದು ಗಮನಾರ್ಹ.
ಮೇಕೆದಾಟು ಡ್ಯಾಂ ನಿರ್ಮಿಸಿದರೆ 67 ಟಿಎಂಸಿ ನೀರು ಸಂಗ್ರಹಿಸಬಹುದು. ಮಳೆ ಕೊರತೆ ಸಂದರ್ಭದಲ್ಲಿ ಉಭಯ ರಾಜ್ಯಗಳು ಆ ನೀರನ್ನು ಬಳಸಬಹುದು ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯಲ್ಲಿ ನೀವು ವಾಸ್ತವ್ಯ ಮಾಡುತ್ತಿದ್ದೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತೆ ಅನ್ನೋ ವಿಚಾರ ಸುಳ್ಳು ಎಂದು ಹೇಳಿದರು.ನಾನು ಗಟ್ಟಿಯಾಗಿದ್ದೇನೆ,ಗಟ್ಟಿಯಾಗೇ ಇರುತ್ತೇನೆ. ನೀವು ನನ್ನನ್ನು ವೀಕ್ ಮಾಡಲು ಯತ್ನಿಸುತ್ತೀರಾ, ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತೆ ಅನ್ನೊ ಅಪವಾದ ಇಲ್ಲ ಎಂದು ತಿಳಿಸಿದರು.
ಬಿಜೆಪಿಯಿಂದ ಚಡ್ಡಿ ಚಳವಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದು ಬಿಜೆಪಿಯವರನ್ನ ನಾವೂ ಮೊದಲಿನಿಂದಲೂ ಚಡ್ಡಿಗಳು ಎಂದೇ ಕರೆಯುತ್ತಿದ್ದೇವೆ. ಈಗ ಅವ್ರು ಚಡ್ಡಿ ಚಳವಳಿ ಮಾಡುತ್ತಿದ್ದಾರೆ ಮಾಡಲಿ ಬಿಡಿ ಎಂದು ಹೇಳಿದರುರಾಜ್ಯ ಕಾಂಗ್ರೆಸ್ ಡಿಎಂಕೆ ಬಿ ಟೀಮ್ ಎಂಬ ಹೆಚ್ ಡಿ ಕೆ ಆರೋಪ ಕುರಿತು ಮಾತನಾಡಿದ ಸಿದ್ದು ಎಐಡಿಎಂಕೆ ಬಿಜೆಪಿ ಜೊತೆ ಇತ್ತಲ್ಲ ಆಗ ಅದು ಯಾವ ಟೀಮ್ ಎಂದು ಮಾಧ್ಯಮದವರನ್ನೇ ಮರು ಪ್ರಶ್ನಿಸಿದರು.
ಕಾವೇರಿ ನೀರು ಪ್ರಸ್ತುತ ವರದಿಗಾಗಿ ಕೇಂದ್ರದ ತಂಡ ಆಗಮಿಸಬೇಕು ಪಿಎಂ ಮಧ್ಯಸ್ಥಿಕೆ ವಹಿಸಬೇಕು, ಇದನ್ನ ನಾನು ಎರಡು ಬಾರಿ ಕೇಂದ್ರಕ್ಕೆ ಕೇಳಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ದೇವೇಗೌಡರು ಕೂಡ ಈಗ ಪತ್ರ ಬರೆದು ಕೇಳಿದ್ದಾರೆ. ಈಗಲಾದರೂ ಕೇಂದ್ರದಿಂದ ತಂಡ ಬರಲಿ.ಕೇಂದ್ರದ ತಂಡ ಏಕೆ ಬರುತ್ತಿಲ್ಲ ಎಂಬುದನ್ನ ಬಿಜೆಪಿಯವರು ಹೇಳಲಿ, ಹಾದಿ ಬೀದಿಯಲ್ಲಿ ಹೋರಾಟ ಮಾಡುವ ಬದಲು ಕೇಂದ್ರದಿಂದ ತಜ್ಞರ ತಂಡ ಕರೆಸಲಿ ಎಂದು ಸಿಎಂ ಒತ್ತಾಯಿಸಿದರು.
ದೇಶದಲ್ಲಿ ಬಿಜೆಪಿ ವಿರುದ್ಧದ ಶಕ್ತಿಗಳು ಒಂದಾಗುತ್ತಿವೆ,ಬಿಜೆಪಿ ಕಳೆದ 9 ವರ್ಷದ ಅವಧಿಯಲ್ಲಿ ನುಡಿದಂತೆ ನಡೆಯಲಿಲ್ಲ, ಭಾವನಾತ್ಮಕ ವಿಚಾರ ಇಟ್ಟುಕೊಂಡು ಸಮಾಜ ಒಡೆಯುವ ಕೆಲಸ ಮಾಡಿದೆ ಎಂದು ಸಿಎಂ ಇದೇ ವೇಳೆ ದೂರಿದರು.
ಕರ್ನಾಟಕ ಜನರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ, ಕಾವೇರಿ ವಿಚಾರದಲ್ಲಿ ನಾವು ವಿಫಲವಾಗಿದ್ದೇವೆ ಎಂಬುದು ಸರಿಯಲ್ಲ ಎಂದು ತಿಳಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ. ಪ್ರತಿಭಟನೆ ಮಾಡುವುದಕ್ಕೆ ನಾವು ಅಡ್ಡಿಪಡಿಸುವುದಿಲ್ಲ,ಆದರೆ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದು ಹೇಳಿದರು.
ಕಾವೇರಿ ನದಿ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತೀವೆ. ಜನರ ಹಿತಕ್ಕಾಗಿ ವಿಪಕ್ಷಗಳು ಹೋರಾಟ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.ನಾವು ಸಂಕಷ್ಟ ಸೂತ್ರಕ್ಕೆ ಒತ್ತಾಯ ಮಾಡಿದ್ದೇವೆ, ಬರಗಾಲ ಪರಿಸ್ಥಿತಿಯಲ್ಲಿ ಮಾತುಕತೆ ಮೂಲಕ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂಬುದು ನಮ್ಮ ಸರ್ಕಾರದ ನಿಲುವಾಗಿದೆ ಎಂದು ತಿಳಿಸಿದರು.