ಮಹಾವತಾರ ಬಾಬಾಜಿ ಅವರ ಪ್ರಥಮ ಶಿಷ್ಯರು; ಇಂದು ಲಾಹಿರಿ ಅವರ ಜನ್ಮದಿನ
by Dr.Guruprasad Hawaldar
ಎಲ್ಲ ಭಕ್ತರು ತಮ್ಮ ಗುರುವಿಗೆ ಸಂಪೂರ್ಣವಾಗಿ ಶರಣಾಗುವುದು ಅತ್ಯಗತ್ಯ. ಒಬ್ಬನು ಗುರುವಿಗೆ ಎಷ್ಟು ಗಾಢವಾಗಿ ಶರಣಾಗುವನೋ ಅಷ್ಟು ಹೆಚ್ಚು ತನ್ನ ಗುರುಗಳಿಂದ ಯೋಗದ ಸೂಕ್ಷ್ಮ ತಂತ್ರಗಳನ್ನು ಕಂಡುಕೊಳ್ಳುತ್ತಾನೆ. ಸಮರ್ಪಣೆಯಿಲ್ಲದೆ ಗುರುವಿನಿಂದ ಏನನ್ನೂ ಪಡೆಯಲಾಗುವುದಿಲ್ಲ ಎಂದ ಕ್ರಿಯಾವತಾರಿ, ಯೋಗಾವತಾರ ಶ್ರೀ ಗುರು ಶ್ಯಾಮ್ ಚರಣ ಲಾಹಿರಿ ಮಹಾಶಯರು ಹೇಳಿದ್ದಾರೆ. ಇಂದು ಅವರ ಜನ್ಮದಿನ.
ಶ್ಯಾಮ ಚರಣ ಲಾಹಿರಿಯವರು 1828ನೇ ಸೆಪ್ಟಂಬರ್, 30ರಂದು ಬ್ರಿಟೀಷರ ಆಡಳಿತದಲ್ಲಿದ್ದ ಬಂಗಾಳ ಪ್ರಾಂತ್ಯದ ಗುರ್ನಿ ಗ್ರಾಮದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಶಿವನ ಪರಮಭಕ್ತೆಯಾಗಿದ್ದರು.1846ರಲ್ಲಿ ಅವರ ವಿವಾಹ ಕಾಶಿ ಮೋನಿ ಅವರೊಂದಿಗೆ ನೆರವೇರಿತು. ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳು. ಅವರ ಇಬ್ಬರು ಗಂಡು ಮಕ್ಕಳನ್ನೂ ಸಂತರೆಂದೇ ಪರಿಗಣಿಸಲಾಗಿತ್ತು. ಅವರ ಪತ್ನಿ ಅವರ ಶಿಷ್ಯೆಯಾದರು ಮತ್ತು ಆಕೆಯನ್ನು ಗೌರವಪೂರ್ಣವಾಗಿ ಗುರು-ಮಾ ಎಂದು ಕರೆಯಲಾಗುತ್ತಿತ್ತು.
1861ರಲ್ಲಿ ಹಿಮಾಲಯದ ಬುಡದಲ್ಲಿರುವ ರಾಣೀಖೇತ್‍ಗೆ ಲಾಹಿರಿ ಅವರ ವರ್ಗಾವಣೆಯಾಯಿತು. ಆಗ ಒಂದು ದಿನ ಬೆಟ್ಟವನ್ನು ಹತ್ತುತ್ತಿರುವಾಗ ಯಾರೋ ತಮ್ಮನ್ನು ಕರೆಯುತ್ತಿದ್ದಾರೆ ಎಂದು ಅವರಿಗೆ ಭಾಸವಾಯಿತು. ಬೆಟ್ಟವನ್ನು ಮತ್ತುಷ್ಟು ಏರಿದ ಮೇಲೆ ಲಾಹಿರಿಯವರಿಗೆ ಮಹಾವತಾರ ಬಾಬಾಜಿ ಅವರ ದರ್ಶನವಾಯಿತು.
ಬಾಬಾಜಿ ಅವರು ಲಾಹಿರಿಯವರಿಗೆ ಕ್ರಿಯಾ ಯೋಗದ ದೀಕ್ಷೆಯನ್ನು ನೀಡಿ, ‘ನಿನ್ನ ಉಳಿದ ಜೀವನವನ್ನು ಈ ಕ್ರಿಯಾ ಯೋಗದ ಸಂದೇಶವನ್ನು ಜಗತ್ತಿಗೆ ತಿಳಿಸುವುದಕ್ಕಾಗಿ ಮೀಸಲಿಡು’ ಎಂದು ಆದೇಶಿಸಿದರು.ಲಾಹಿರಿ ಮಹಾಶಯರು ಭಗವದ್ಗೀತೆಯನ್ನು ಅಧ್ಯಯನ ಮಾಡತ್ತಾ ಮತ್ತು ಜನರನ್ನು ಪ್ರೋತ್ಸಾಹಿಸುವ ಆಧ್ಯಾತ್ಮಿಕ ಚರ್ಚೆಯನ್ನು ಮಾಡುತ್ತಿದ್ದರು.
ಅಂದಿನ ಕಾಲಘಟ್ಟದ ಸಮಾಜದಲ್ಲಿ ಧಾರ್ಮಿಕ ಮತ್ತು ವರ್ಗ ವ್ಯತ್ಯಾಸಗಳು ಬಹಳ ಎದ್ದು ಕಾಣುತ್ತಿದ್ದಂತಹ ಸಮಯದಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಎನ್ನದೇ ಸಮಾನವಾಗಿ ಭಾಗವಹಿಸುತ್ತಿದ್ದರು.1886ರಲ್ಲಿ ಅವರು ನಿವೃತ್ತಿಯಾಗುವವರೆಗೂ ಕೌಟುಂಬಿಕ ಜೀವನ ಮತ್ತು ಆಧ್ಯಾತ್ಮಿಕ ಜೀವನ ಎರಡನ್ನೂ ಮುನ್ನಡೆಸಿದರು, ಆಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅವರ ಬಳಿಗೆ ಬರಲು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ , ಒಬ್ಬ ಬ್ರಾಹ್ಮಣನು ಎಲ್ಲಾ ಜಾತಿಗಳ ಜನರೊಂದಿಗೆ ನಿಕಟ ಸಂಬಂಧ ಹೊಂದಿದ್ದು ಅತ್ಯಂತ ಅಸಾಮಾನ್ಯವಾಗಿತ್ತು.
ಅವರ ಬೋಧನೆಯ ಕೇಂದ್ರ ಭಾಗ – ಕ್ರಿಯಾ ಯೋಗ – ಪ್ರಾಣಾಯಾಮ ತಂತ್ರಗಳನ್ನು ಆಧರಿಸಿತ್ತು, ಇದರಲ್ಲಿ ಅವರು ತಮ್ಮ ಧರ್ಮ ಅಥವಾ ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಜನರಿಗೆ ಹೇಳಿಕೊಡುತ್ತಿದ್ದರು. ತನ್ನಲ್ಲಿ ಬಂದವರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ, ಅವರು ಈ ಯೋಗದ ಹೆಚ್ಚು ತೀವ್ರವಾದ ಅಭ್ಯಾಸವನ್ನು ಶಿಫಾರಸು ಮಾಡುತ್ತಿದ್ದರು.
ಯುಕ್ತೇಶ್ವರ ಗಿರಿ, ಪ್ರಣವಾನಂದ, ಕೇಶವಾನಂದ, ಪಂಚಾನನ ಭಟ್ಟಾಚಾರ್ಯ, ಭೂಪೇಂದ್ರನಾಥ್ ಸನ್ಯಾಲ್, ಭಾಸ್ಕರಾನಂದ ಸರಸ್ವತಿ, ಬಾಲಾನಂದ ಬ್ರಹ್ಮಚಾರಿ ಮತ್ತು ಪರಮಹಂಸ ಯೋಗಾನಂದರ ತಂದೆ-ತಾಯಿಗಳು ಅವರ ಪ್ರಮುಖ ಶಿಷ್ಯರು.
‘ಒಬ್ಬರು ಒಂದು ಪ್ರಾಮಾಣಿಕ ಜೀವನವನ್ನು ನಡೆಸುವುದಕ್ಕೆ ದುಡಿಯುತ್ತಿದ್ದು ಪ್ರಾಮಾಣಿಕತೆಯನ್ನು ಅಭ್ಯಸಿಸುತ್ತಿದ್ದಲ್ಲಿ, ದೇವರ ಇವರನ್ನು ಕಾಣುವುದಕ್ಕಾಗಿ ತಮ್ಮ ಬಾಹ್ಯ ಜೀವನವನ್ನು ಗಮನಾರ್ಹ ರೀತಿಯಲ್ಲಿ ಬದಲಾಯಿಸಿಕೊಳ್ಳುವ ಆವಶ್ಯಕತೆಯಿಲ್ಲ’ ಎಂದು ಲಾಹಿರಿಯವರು ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು. ಒಬ್ಬ ಶಿಷ್ಯ ಅವನ ಪ್ರಾಪಂಚಿಕ ಕರ್ತವ್ಯಗಳನ್ನು ನಿರ್ಲಕ್ಷಿಸಿದರೆ ಅವನನ್ನು ಅವರು ಸರಿಪಡಿಸುತ್ತಿದ್ದರು.
“ನೀವು ಯಾರಿಗೂ ಸೇರಿದವರಲ್ಲ ಅಥವಾ ಯಾರೂ ನಿಮಗೆ ಸೇರಿದವರಲ್ಲ ಎಂಬುದನ್ನು ಯಾವಾಗಲೂ ನೆನಪಿಡಿ. ಒಂದು ದಿನ ನೀವು ಈ ಜಗತ್ತಿನಲ್ಲಿ ಎಲ್ಲವನ್ನೂ ತೊರೆಯಬೇಕಾಗುತ್ತದೆ ಎಂಬ ಅಂಶದ ಬಗ್ಗೆ ಯೋಚಿಸಿ – ಆದ್ದರಿಂದ ಈಗ ದೇವರೊಂದಿಗೆ ಪರಿಚಯ ಮಾಡಿಕೊಳ್ಳಿ. ದೇವರ ಗ್ರಹಿಕೆಯ ಬಲೂನಿನಲ್ಲಿ ಪ್ರತಿದಿನ ಹಾರುವ ಮೂಲಕ ಮುಂಬರುವ ಸಾವಿನ ಪ್ರಯಾಣಕ್ಕೆ ಸಿದ್ಧರಾಗಿ. ಭ್ರಮೆಯ ಮೂಲಕ, ನೀವು ಮೂಳೆಗಳು ಮತ್ತು ಮಾಂಸದ ರಾಶಿಯಾಗಿ ನಿಮ್ಮನ್ನು ಅನುಭವಿಸುತ್ತೀರಿ, ಅದು ತೊಂದರೆಯ ಗೂಡು. ನಿರಂತರವಾಗಿ ಧ್ಯಾನ ಮಾಡಿ. ಇದರಿಂದ ನೀವು ಶೀಘ್ರದಲ್ಲೇ ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಿ ಅನಂತ ಸಾರವಾಗಿ ನಿಮ್ಮನ್ನು ನೋಡಬಹುದು. ದೇಹದ ಬಂಧಿಯಾಗಬೇಡಿ; ಕ್ರಿಯೆಯ ರಹಸ್ಯ ಕೀಲಿಯನ್ನು ಬಳಸಿ, ಆತ್ಮದೊಳಗೆ ತಪ್ಪಿಸಿಕೊಳ್ಳಲು ಕಲಿಯಿರಿ. ಲಾಹಿರಿ ಮಹಾಶಯರ ಮಾತುಗಳು ಇವು.
ಲಾಹಿರಿ ಮಹಾಶಯರು ತಮ್ಮ ಜೀವಿತ ಕಾಲದಲ್ಲಿ ಯಾವ ಸಂಸ್ಥೆಯನ್ನೂ ಹುಟ್ಟುಹಾಕಲಿಲ್ಲ. ಅವರು ತಮ್ಮ ಶಿಷ್ಯರಾದ ಸ್ವಾಮಿ ಯುಕ್ತೇಶ್ವರ ಗಿರಿ ಮುಂತಾದವರಿಗೆ; ‘ಈಗ ಯಾವುದೇ ಸಂಸ್ಥೆಯನ್ನು ಕಟ್ಟುವ ಆವಶ್ಯಕತೆಯಿಲ್ಲ. ಇದಕ್ಕಾಗಿ ಈಗಾಗಲೇ ಒಬ್ಬ ಮಹಾನ್ ವ್ಯಕ್ತಿಯನ್ನು ಗುರುತಿಸಲಾಗಿದೆ. ನನ್ನ ಮಹಾ ಸಮಾಧಿಯ ನಂತರದ ದಿನಗಳಲ್ಲಿ ನನ್ನ ಬಗ್ಗೆ ಮತ್ತು ಕ್ರಿಯಾ ಯೋಗದ ಬಗ್ಗೆ ವಿಶ್ವದಾದ್ಯಂತ ತಿಳುವಳಿಕೆ ಉಂಟಾಗುತ್ತದೆ. ಯೋಗದ ಸಂದೇಶ ಸಂಪೂರ್ಣ ವಿಶ್ವವನ್ನು ಆವರಿಸುತ್ತದೆ. ಈ ಸಂದೇಶವನ್ನು ಮುಂದೆ ಕೊಂಡೊಯ್ಯುವುದಕ್ಕಾಗಿ ಒಂದು ಸಂಸ್ಥೆಯ ಉದ್ಭವವಾಗುತ್ತದೆ ಮತ್ತು ಅಲ್ಲಿಯವರೆಗೆ ತಮ್ಮ ಶಿಷ್ಯರಲ್ಲಿ ಯಾರೂ ಕೂಡ ಸಂಸ್ಥೆಯನ್ನು ಕಟ್ಟುವ ಬಗ್ಗೆ ಚಿಂತಿಸಬಾರದು’ ಎಂದು ಹೇಳಿದರು.
ಯುಕ್ತೇಶ್ವರ ಗಿರಿ ಅವರ ಶಿಷ್ಯರಾದ ಪರಮಹಂಸ ಯೋಗಾನಂದರ ಮೂಲಕ ಮತ್ತು ಅವರ ‘ಯೋಗಿಯ ಅತ್ಮಕಥೆ’ಯ ಮೂಲಕ ಲಾಹಿರಿ ಮಹಾಶಯರು ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಸಿದ್ಧರಾದರು.
ಜಗತ್ತಿನಿಂದ ಕಣ್ಮರೆಯಾಗುತ್ತಿರುವ ಕ್ರಿಯಾ ಯೋಗವನ್ನು ಜಗತ್ತಿಗೆ ಮತ್ತೆ ಪರಿಚಯಗೊಳಿಸುವುದಕ್ಕಾಗಿ ಮಹಾವತಾರ ಬಾಬಾಜಿಯವರು ಲಾಹಿರಿಯವರನ್ನು ಆಯ್ಕೆ ಮಾಡಿದರು. ಲಾಹಿರಿ ಮಹಾಶಯರವರು; ‘ಬಾಲಕ ಯೋಗಾನಂದ ಒಬ್ಬ ಯೋಗಿಯಾಗುತ್ತಾನೆ ಮತ್ತು ಒಂದು ಆಧ್ಯಾತ್ಮಿಕ ಸಾಧನದಂತೆ ಹಲವಾರು ಆತ್ಮಗಳನ್ನು ದೇವರ ಸಾಮ್ರಾಜ್ಯಕ್ಕೆ ಕರೆದೊಯ್ಯುತ್ತಾನೆ’ ಎಂದು ಭವಿಷ್ಯ ನುಡಿದಿದ್ದರು. ಅದರಂತೆಯೇ ಪರಮಹಂಸ ಯೋಗಾನಂದರು 1917ರಲ್ಲಿ ಭಾರತದಲ್ಲಿ ‘ಯೋಗ ಸತ್ಸಂಗ ಸೊಸೈಟಿ ಆಫ್ ಇಂಡಿಯಾ’ ಮತ್ತು ನಂತರದಲ್ಲಿ ಅಮೆರಿಕದಲ್ಲಿ ‘ಸೆಲ್ಫ್ ರಿಯಲೈಝೇಷನ್ ಫೆಲೋಶಿಪ್’ಗಳನ್ನು ಸಂಸ್ಥಾಪಿಸಿ ಕ್ರಿಯಾ ಯೋಗದ ಮಹತ್ವವನ್ನು ಪ್ರಪಂಚದಾದ್ಯಂತ ತಿಳಿಸಲಾರಂಭಿಸಿದರು.
ಇದೇ ಸೆಪ್ಟೆಂಬರ್ 26ರಂದು ಲಾಹಿರಿ ಮಹಾಶಯರ ಮಹಾಸಮಾಧಿಯ ದಿವಸವನ್ನು ಮತ್ತು ಸೆಪ್ಟೆಂಬರ್ 30ರಂದು ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ.ಮಹಾಯೋಗಿ ಆ ಗುರುವಿಗೆ ಅನಂತ ಪ್ರಣಾಮಗಳು.
***
Dr.Guruprasad Hawaldar
ಇವರ ವೃತ್ತಿ ಉಪನ್ಯಾಸ. ಪ್ರವೃತ್ತಿ ಬರವಣಿಗೆ. ಇವರ ಬರಹಗಳು ಈಗಾಗಲೇ ನಾಡಿನ ಅನೇಕ ಪತ್ರಿಕೆಗಳು ಮತ್ತು ಪ್ರಮುಖ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾಗಿವೆ.