ಮೂರು ಬಾರಿ ಗಿರಿಧಾಮದಲ್ಲಿ ತಂಗಿದ್ದರು ಮಹಾತ್ಮ ಗಾಂಧೀಜಿ
Gandhi Jayanti Special
by G.S. Bharath Gudibande
ಚಿಕ್ಕಬಳ್ಳಾಪುರ: ಇಂದು ರಾಷ್ಟ್ರಪಿತ ಮಾಹಾತ್ಮ ಗಾಂಧೀಜಿ ಅವರ ಜಯಂತಿ. ತಮ್ಮ ಜೀವಿತಾವಧಿಯಲ್ಲಿ ಗಾಂಧೀಜಿ ಅವರು ದೇಶದ ಉದ್ದಗಲಕ್ಕೂ ಅನೇಕ ಪ್ರದೇಶಗಳಿಗೆ, ತಾಣಗಳಿಗೆ ಭೇಟಿ ನೀಡಿದ್ದರು. ಅವರು ಭೇಟಿ ನೀಡಿದ್ದರು ಎನ್ನುವ ಕಾರಣಕ್ಕೆ ಆ ಸ್ಥಳಗಳು ಪ್ರಖ್ಯಾತವಾಗಿವೆ. ಆದರೆ, ಅವರಿಗೆ ಇಷ್ಟದ ತಾಣಗಳು ಕೆಲವು ಇವೆ. ಅವುಗಳಲ್ಲಿ ಜಿಲ್ಲೆಯ ನಂದಿ ಗಿರಿಧಾಮವೂ ಒಂದಾಗಿದೆ.
ನಿಜ, ನಂದಿ ಗಿರಿಧಾಮವು ಮಹಾತ್ಮ ಗಾಂಧಿ ಅವರಿಗೆ ಬಹಳ ಇಷ್ಟದ ಗಿರಿಧಾಮವಾಗಿತ್ತು. ಅವರ ಆರೋಗ್ಯ ರಕ್ಷಣೆಯಲ್ಲಿ ಗಿರಿಧಾಮದ ಪಾತ್ರ ಬಹಳಷ್ಟು ಪ್ರಮುಖ. ಅವರ ಜಯಂತಿ ಹೊತ್ತಿನಲ್ಲಿ ಅದನ್ನೊಮ್ಮೆ ಸ್ಮರಿಸೋಣ.
ಚಿಕ್ಕಬಳ್ಳಾಪುರ ಜಿಲ್ಲೆಗೆ ಎರಡು ಭಾರಿ ಭೇಟಿ ನೀಡಿದ್ದ ಗಾಂಧೀಜಿ ಅವರು ನಂದಿಬೆಟ್ಟದಲ್ಲಿಯೇ ತಂಗಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದಅವರು ಕೆಲ ತಿಂಗಳ ಕಾಲ ನಂದಿಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದರು. ಅವರಿಗೆ ಗಿರಿಧಾಮದ ಪ್ರಾಕೃತಿಕ ಸಿರಿ ಬಹಳ ಇಷ್ಟವಾಗಿತ್ತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿದ್ದ ಡ್ಯಾಂ ವಿಕ್ಷಿಸಲು ರಾಜ್ಯಕ್ಕೆ 1924ರಲ್ಲಿ ಪ್ರಥಮ ಬಾರಿಗೆ ಗಾಂಧೀಜಿ ಅವರು ಆಗಮಿಸಿದ್ದರು. ಆಗ ಅವರು ಮೊದಲ ಬಾರಿಗೆ ನಂದಿಬೆಟ್ಟದಲ್ಲಿ ರಾತ್ರಿ ವೇಳೆ ತಂಗಿದ್ದು, ಮರುದಿನ ಮೈಸೂರು ಕಡೆಗೆ ಪ್ರಯಾಣ ಬೆಳೆಸಿದ್ದರು.
ಗಾಂಧಿ ಅವರು ದೇಶ ಪರ್ಯಟನೆ ಆರಂಭಿಸಿದ ವೇಳೆಯಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ಗಾಂಧೀಜಿ ಅವರು ನಂದಿಬೆಟ್ಟವನ್ನು ಮೆಟ್ಟಿಲ ಮೂಲಕವೇ ಹತ್ತಿದ್ದರು. 1775 ಮಟ್ಟಿಲುಗಳನ್ನು ಅವರು ಹತ್ತಿ ಗಿರಿಧಾಮ ತಲುಪಿದ್ದರು.
ಖಾದಿಗೆ ಶಕ್ತಿ ತುಂಬಲು ಬಂದಿದ್ದರು
2ನೇ ಬಾರಿಗೆ ಖಾದಿಗೆ ಪ್ರೋತ್ಸಾಹ ನೀಡುವ ಹಾಗೂ ಪ್ರತೀ ಮನೆಯಲ್ಲಿಯೂ ಚರಕ ಸ್ಥಾಪಿಸುವ ಉದ್ದೇಶದಿಂದ ದೇಶದ ಉದ್ದಗಲಕ್ಕೂ ಪ್ರವಾಸ ಕೈಗೊಂಡಿದ್ದ ಗಾಂಧೀಜಿ ಅವರು, ಜಿಲ್ಲೆಗೆ ಆಗಮಿಸಿ ನಂದಿಬೆಟ್ಟದಲ್ಲಿಯೇ ವಾಸ್ತವ್ಯ ಹೂಡಿದ್ದರು. ಆಗ ಗಾಂಧೀಜಿ ಅವರನ್ನು ಕಾಣಲು ಅಕ್ಕಪಕ್ಕದ ಗ್ರಾಮಗಳ ಜನರು, ಮಕ್ಕಳು ಬೆಟ್ಟಕ್ಕೆ ಬಂದಿದ್ದರು. ಮಕ್ಕಳನ್ನು ಕಂಡು ಬಾಪೂಜಿ ಬಹಳ ಖುಷಿಪಟ್ಟಿದ್ದರಲ್ಲದೆ, ಆ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು. ಮಕ್ಕಳಿಂದ ಹಾಡು ಕೇಳಿ ಸಂಭ್ರಮಿಸಿದ್ದರು.
ಮೂರನೇ ಬಾರಿ ಭೇಟಿ; ದೀರ್ಘಕಾಲ ವಾಸ್ತವ್ಯ
ಅಹಿಂಸೆ ಮಾರ್ಗದಲ್ಲಿ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಮಹಾತ್ಮಗಾಂಧಿ ಅವರು 1936ರಲ್ಲಿಅನಾರೋಗ್ಯಕ್ಕೀಡಾಗಿದ್ದರು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಗಾಂಧೀಜಿ ಅವರಿಗೆ ಕೆಲ ಸಮಯ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಹೀಗಾಗಿ ಆ ವರ್ಷ ಮೇ 10ರಂದು ಅಂದಿನ ಮದರಾಸ್ (ಇಂದಿನ ಚೆನ್ನೈ) ನಿಂದ ಗಿರಿಧಾಮಕ್ಕೆ ಆಗಮಿಸಿದ್ದರು. ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಅಲ್ಲಿ ವಿಶ್ರಾಂತಿ ಪಡೆದಿದ್ದರು. ಅವರ ನೆನಪಿಗಾಗಿ ನಂದಿಬೆಟ್ಟದಲ್ಲಿ ʼಗಾಂಧಿ ಭವನʼ ನಿರ್ಮಿಸಲಾಗಿದೆ. ಅಂದು ಬೆಟ್ಟಕ್ಕೆ ರಸ್ತೆ ಇಲ್ಲದ ಕಾರಣದಿಂದ ಕಾಲ್ನಡಿಗೆ ಮೂಲಕವೇ ನಂದಿಬೆಟ್ಟ ಏರಿದ್ದ ಗಾಂಧೀಜಿ ಅವರಿಗೆ ‘ನಂದಿ’ ಎಂಬ ಹೆಸರು ಕೂಡ ತುಂಬ ಆಕರ್ಷಕವಾಗಿ ಕಂಡಿತ್ತಂತೆ.
ಗಾಂಧೀಜಿ ಅವರನ್ನು ಸ್ವಾಗತಿಸಲು ಬ್ರಿಟೀಷ್ ಕಮಿಷನರ್‌ಗಳು ನಂದಿಬೆಟ್ಟದ ಕೆಳಗಿನ ಸುಲ್ತಾನ್‌ಪೇಟೆ ಬಳಿ ಕಾಯುತ್ತಿದ್ದರೆ; ಗಾಂಧೀಜಿ ಅವರು ಕುಡುವತಿ ಮೂಲಕ ಕಾಲ್ನಡಿಗೆಯಲ್ಲಿಯೇ ನಂದಿಬೆಟ್ಟವನ್ನು ಹತ್ತಿದ್ದರು.
ತಮ್ಮ ಜೀವಿತಾವಧಿಯಲ್ಲಿ ಸಾಬರಮತಿ ಅಶ್ರಮ ಬಿಟ್ಟರೆ ಅವರು ಅತಿ ಹೆಚ್ಚು ಇಷ್ಟಪಡುತ್ತಿದ್ದ ತಾಣವೆಂದರೆ ನಂದಿಬೆಟ್ಟ. ಅಲ್ಲದೆ; ಆಶ್ರಮವನ್ನು ಹೊರತುಪಡಿಸಿ ಹೆಚ್ಚು ಸಮಯ ಅವರು ತಂಗಿದ್ದು ನಂದಿಗಿರಿಧಾಮದಲ್ಲಿಯೇ. 1927 ಮತ್ತು 1931ರಲ್ಲಿ ಮೂರು ಸಲ ನಂದಿಬೆಟ್ಟಕ್ಕೆ ಆಗಮಿಸಿದ್ದರು ಗಾಂಧೀಜಿಯವರು. ಅವರು ಇಲ್ಲಿ ಒಟ್ಟು 66 ದಿನ ಉಳಿದುಕೊಂಡಿದ್ದರು.
ಅಸ್ಥಿ ವಿಸರ್ಜನೆ
1948ರ ಜ.30ರಂದು ಗಾಂಧೀಜಿ ಅವರ ನಿಧನದ ನಂತರ ಅವರ ಚಿತಾಭಸ್ಮವನ್ನು ಅ೦ದಿನ ಕೋಲಾರ ಜಿಲ್ಲೆಯ ಅಂತರಗಂಗೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಅಮೃತ ಸರೋವರದಲ್ಲಿ ಅಂದಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಅಪೇಕ್ಷೆಯಂತೆ 1948ರ ಫೆ.2ರಂದು ಜಿಲ್ಲೆಗೆ ತರಿಸಿಕೊಂಡು ವಿಜರ್ಸನೆ ಮಾಡಲಾಯಿತು.
ಮಹಾತ್ಮ ಗಾಂಧಿಜೀ ಅವರ ಮಕ್ಕಳು ಸಹ ಮತ್ತೊಮ್ಮೆ 1950ರ ಜೂ.20ರಂದು ರಾಜ್ಯ ಸಚಿವೆಯಾಗಿದ್ದ ಯಶೋಧರ ದಾಸಪ್ಪ ಅವರೊಂದಿಗೆ ನಂಧಿ ಗಿರಿಧಾಮಕ್ಕೆ ಭೇಟಿ ನೀಡಿದ್ದರು.
ಯಾರೆಲ್ಲಾ ಭೇಟಿ ನೀಡಿದ್ದಾರೆ
ನಂದಿಗಿರಿಧಾಮಕ್ಕೆ ಭೇಟಿ ನೀಡಿದ ಪ್ರಖ್ಯಾತರ ದೊಡ್ಡ ಪಟ್ಟಿಯೇ ಇದೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಬೆಂಗಳೂರಿನಲ್ಲಿ ಸಾರ್ಕ್ ಶೃಂಗಸಭೆ ನಡೆದಿತ್ತು. ಆಗ ಸಾರ್ಕ್ ರಾಷ್ಟ್ರಗಳ ಪ್ರಮುಖರೆಲ್ಲರೂ ನಂದಿಬೆಟ್ಟಕ್ಕೆ ಬಂದು, ಇಲ್ಲಿನ ಆಹ್ಲಾದಕರ ವಾತಾವರಣಕ್ಕೆ ಮನಸೋತಿದ್ದರು.
ಎಲಿಜಬೆತ್ ರಾಣಿ ತಮ್ಮ ಪತಿಯೊಂದಿಗೆ ನಂದಿಬೆಟ್ಟಕ್ಕೆ ಭೇಟಿ ನೀಡಿದ ಹೆಗ್ಗಳಿಕೆ ಸಹ ಇದೆ. ಗಿರಿಧಾಮದ ಬುಡದಲ್ಲಿರುವ ಮುದ್ದೇನಹಳ್ಳಿಯವರಾದ ಸರ್.ಎಂ.ವಿಶ್ವೇಶ್ವರಯ್ಯನವರು ನಡೆದೇ ಬೆಟ್ಟಕ್ಕೆ ಹೋಗುತ್ತಿದ್ದರು. ಇನ್ನು, ನೆಹರು, ವಿಜಯಲಕ್ಷ್ಮಿ ಪಂಡಿತ್, ಇಂದಿರಾ ಗಾಂಧಿ, ಎಸ್.ರಾಧಾಕೃಷ್ಣನ್, ವಲ್ಲಭ ಬಾಯಿ ಪಟೇಲ್, ಸರ್ ಸಿ.ವಿ.ರಾಮನ್, ರಾಜಗೋಪಾಲಾಚಾರಿ ಮುಂತಾದ ಗಣ್ಯರು ನಂದಿಬೆಟ್ಟಕ್ಕೆ ಭೇಟಿ ನೀಡಿ ಇಲ್ಲಿನ ಸೌಂದರ್ಯಕ್ಕೆ ಮನ ಸೋತಿದ್ದರು.
ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ಸ್ವಾತಂತ್ರ್ಯ ಹೋರಾಟದ ಒತ್ತಡದಲ್ಲಿಯೂ ಅವರ ಆರೋಗ್ಯ ಕಾಪಾಡಿಕೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮಕ್ಕೆ ಆಗಮಿಸಿ ವಿಶ್ರಾಂತಿ ಪಡೆದಿರುವುದು ನಮಗೆ ಹೆಮ್ಮೆಯ ವಿಷಯ. ಅವರ ಭೇಟಿ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ ಎನ್ನುವುದು ಬಹಳ ಗಮನಾರ್ಹ.
-ವಿ.ಲಕ್ಷ್ಮೀನಾರಾಯಣ, ನಿವೃತ್ತ ಯೋಧರು