ಸಂಕ್ರಾಂತಿಗೆ ಸರಕಾರ ಹೋಗುತ್ತದೆ ಎಂದ ಸಿ.ಪಿ.ಯೋಗೇಶ್ವರ್; ಶಾಸಕರ ಮೇಲೆ ನಿಗಾ ಇಟ್ಟಿದೆಯಾ ಕೈ ಪಕ್ಷ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಇರುತ್ತಾ? ಹೋಗುತ್ತಾ? ಆಡಳಿತ ಪಕ್ಷವನ್ನೇ ಕಾಡುತ್ತಿರುವ ಯಕ್ಷ ಪ್ರಶ್ನೆ ಇದು.
“ನನ್ನ ಸರಕಾರವನ್ನು ಹದಿನಾಲ್ಕು ತಿಂಗಳಲ್ಲಿಯೇ ತೆಗೆದ ರೀತಿಯಲ್ಲಿಯೇ ಈ ಸರಕಾರವೂ ಮುಳುಗಿ ಹೋಗುತ್ತದೆ” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದ ಬೆನ್ನಲ್ಲೇ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೂಡ ಸಂಕ್ರಾಂತಿ ಹೊತ್ತಿಗೆ ಈ ಸರಕಾರ ಹೋಗುತ್ತದೆ ಎಂದು ಹೇಳಿರುವುದು ಸ್ವತಃ ಆಡಳಿತ ಪಕ್ಷದಲ್ಲಿಯೇ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.
ಸಂಕ್ರಾಂತಿ ವೇಳೆಗೆ ಸೂರ್ಯ ಪಥ ಬದಲಿಸುವ ರೀತಿಯಲ್ಲಿ ರಾಜ್ಯದಲ್ಲಿಯೂ ರಾಜಕೀಯ ಪಥ ಬದಲಾವಣೆ ಆಗುತ್ತದೆ. ಸಂಕ್ರಾಂತಿ ಹಬ್ಬದ ಬಳಿಕ ಕಾಂಗ್ರೆಸ್ ಸರಕಾರ ಇರುವುದು ಅನುಮಾನ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಪ್ರಸಕ್ತ ರಾಜಕೀಯ ಬೆಳವಣಿಗೆ, ಕಾಂಗ್ರೆಸ್ ನಾಯಕರ ನಡೆಯೇ ಇದಕ್ಕೆ ಕಾರಣ. 2023 ಮುಗಿದ ಬಳಿಕ ರಾಜಕೀಯ ಬದಲಾವಣೆ ನಿರೀಕ್ಷೆ ಇದೆ. ಕಾಂಗ್ರೆಸ್ಸಿನ ಅಸಮಾಧಾನಿತ ಶಾಸಕರು ವಿಮುಖವಾಗಿ ಯೋಚನೆ ಮಾಡುತ್ತಿದ್ದಾರೆ. ಕೆಲ ಕಾಂಗ್ರೆಸ್ ಶಾಸಕರು ವೈಯಕ್ತಿಕವಾಗಿ ನನ್ನ ಜೊತೆ ಮಾತನಾಡಿದ್ದಾರೆ. ಈ ಸರಕಾರದಲ್ಲಿ ಶಾಸಕರು ಡಮ್ಮಿಗಳಾಗಿದ್ದಾರೆ. ಅವರಿಗೆ ಶಾಸಕರ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಸರಕಾರವು ಐದು ಗ್ಯಾರಂಟಿಗಳನ್ನು ಕೊಟ್ಟಿದೆ. ಹಾಗಾಗಿ ಅನುದಾನ ಕೊಡಲು ದುಡ್ಡಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಸರಕಾರದಲ್ಲಿ ದುಡ್ಡಿಲ್ಲ. ಕಾಂಗ್ರೆಸ್ ಶಾಸಕರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ರಾಜಕೀಯ ಭವಿಷ್ಯದ ಆತಂಕ ಇದೆ. ಹಾಗಾಗಿ ಇದರ ಪರಿಣಾಮವನ್ನು ಸಂಕ್ರಾಂತಿ ವೇಳೆಗೆ ಎಲ್ಲರೂ ನೋಡುತ್ತೀರಾ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ನಾವು ಯಾವುದೇ ರೀತಿಯ ಆಪರೇಷನ್ ಮಾಡುತ್ತಿಲ್ಲ. ನಮ್ಮ ಸಂಪರ್ಕದಲ್ಲಿ ಯಾರೂ ಇಲ್ಲ. ಡಿಕೆಶಿ ರೀತಿ ಆಪರೇಷನ್ ಹಸ್ತದ ಕೆಲಸವನ್ನೂ ನಾವು ಮಾಡಲ್ಲ.
ಸಿ.ಪಿ.ಯೋಗೇಶ್ವರ್
ಸದ್ಯ ನನಗಿರುವ ಮಾಹಿತಿ ಪ್ರಕಾರ ಹೇಳಿದ್ದೇನೆ. ಖಾಸಗಿಯಾಗಿ ಸಿಕ್ಕಾಗ ಕೆಲವರು ನೋವನ್ನು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರೇ ಸರಕಾರದ ವಿರುದ್ಧ ತಿರುಗಿಬೀಳುತ್ತಾರೆ ಎಂದು ಯೋಗೇಶ್ವರ್ ಅವರು ಹೇಳಿರುವುದು ಕಾಂಗ್ರೆಸ್ ಕಳವಳಕ್ಕೆ ಕಾರಣವಾಗಿದೆ.
ಶಾಸಕರ ಮೇಲೆ ನಿಗಾ
ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ನಡೆಯ ಬಗ್ಗೆ ಕಳವಳಗೊಂಡಿರುವ ಕಾಂಗ್ರೆಸ್, ಇದೀಗ ಶಾಸಕರ ಮೇಲೆ ತೀವ್ರ ನಿಗಾ ಇರಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಖಾಸಗಿ ಸುದ್ದಿವಾಹಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ನನ್ನ ಸರಕಾರವನ್ನು ಹದಿನಾಲ್ಕು ತಿಂಗಳಲ್ಲಿಯೇ ತೆಗೆದ ರೀತಿಯಲ್ಲಿಯೇ ಈ ಸರಕಾರವೂ ಮುಳುಗಿ ಹೋಗುತ್ತದೆ” ಎಂದು ಬಾಂಬ್ ಸಿಡಿಸಿದ್ದರು. ಅದಕ್ಕೆ ಪೂರಕವಾಗಿ ಯೋಗೇಶ್ವರ್ ಅವರು ಸಂಕ್ರಾಂತಿ ಡೆಡ್ ಲೈನ್ ನೀಡಿದ್ದಾರೆ.
ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲಿಯೇ ಶಾಸಕರ ತೀವ್ರ ಅಸಮಾಧಾನಕ್ಕೆ ತುತ್ತಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದು ಅತೃಪ್ತ ಶಾಸಕರನ್ನು ಸಮಾಧಾನಪಡಿಸುವ ಕೆಲಸ ಮಾಡಿದ್ದರು. ದೆಹಲಿಯಲ್ಲಿಯೂ ಈ ನಿಟ್ಟಿನಲ್ಲಿ ತುರುಸಿನ ಸಭೆಗಳು ನಡೆದಿದ್ದವು. ಈಗ ವಿರೋಧ ಪಕ್ಷಗಳ ನಾಯಕರ ನಡೆಗಳು ಆಡಳಿತ ಪಕ್ಷಕ್ಕೆ ನಡುಕ ಹುಟ್ಟಿಸಿದೆ.
ಮುಖ್ಯಮಂತ್ರಿಯನ್ನು ಮಾಡುವುದು ಗೊತ್ತು, ಇಳಿಸುವುದೂ ಗೊತ್ತು ಎಂದಿದ್ದರು ಬಿ.ಕೆ.ಹರಿಪ್ರಸಾದ್. ಸ್ವತಃ ಮುಖ್ಯಮಂತ್ರಿಗೆ ಸಡ್ಡು ಹೊಡೆದು ಹಿಂದುಳಿದ ಜಾತಿಗಳ ಸಮಾವೇಶ ನಡೆಸಿದ್ದರು ಅವರು. ಅದಕ್ಕೂ ಮೊದಲು ಹಿರಿಯ ಶಾಸಕ ಅನುದಾನ ವಿಷಯದಲ್ಲಿ ಅತೃಪ್ತಿ ವ್ಯಕ್ತಪಡಿಸಿ ನೇರ ಮುಖ್ಯಮಂತ್ರಿಗೇ ಪತ್ರ ಬರೆದಿದ್ದರು. ಮತ್ತೊಂದೆಡೆ, ಮುಖ್ಯಮಂತ್ರಿ ಪುತ್ರ ಯತೀಂದ್ರ ವಿರುದ್ಧ ರಾಹುಲ್ ಗಾಂಧಿ ಅವರ ತನಕ ದೂರುಗಳು ಹೋಗಿದ್ದವು. ಅಲ್ಲದೆ; ತಮ್ಮ ಕೆಲಸಗಳು ಆಗುತ್ತಿಲ್ಲ ಎನ್ನುವುದು ಆಡಳಿತ ಪಕ್ಷ ಶಾಸಕರ ಗುಸುಗುಸು ಜೋರು ದನಿಯಲ್ಲಿ ಕೇಳಿಸುವ ಹಂತ ತಲುಪಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ನಲ್ಲಿ ತಳಮಳ ಹೆಚ್ಚುತ್ತಲೇ ಇದೆ.