ಸಿಎಂ, ಡಿಸಿಎಂ, ಹೆಚ್.ಡಿ.ಕುಮಾರಸ್ವಾಮಿ ಸೇರಿ ಅನೇಕ ಗಣ್ಯರ ಕಂಬನಿ
ಬೆಂಗಳೂರು: ಮೂಲತಃ ಕೋಲಾರ ಜಿಲ್ಲೆಯವರು ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದ ಹೆಸರಾಂತ ಹಿರಿಯ ಪತ್ರಕರ್ತ ಕೆ.ಎಸ್.ಸಚ್ಚಿದಾನಂದ ಮೂರ್ತಿ ಅವರು ಇನ್ನಿಲ್ಲ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಸ್ನೇಹಲೋಕದಲ್ಲಿ ಸಚ್ಚಿ ಎಂದೇ ಹೆಸರಾಗಿದ್ದರು.
ಅನಾರೋಗ್ಯದಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
ಸಚ್ಚಿ ಅವರು ಕೆಲ ದಿನಗಳ ಹಿಂದೆಯಷ್ಟೇ ಶ್ವಾಸಕೋಶ ಕಸಿ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೂ ಅವರ ಆರೋಗ್ಯ ಸುಧಾರಣೆ ಕಂಡಿರಲಿಲ್ಲ. ಕೆಲವು ದಿನಗಳಿಂದ ಅವರು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೇಲೆಯೇ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಆಗಲಿದ್ದಾರೆ.
ಸಚ್ಚಿದಾನಂದ ಮೂರ್ತಿ ಅವರು ಮಲೆಯಾಳಂ ಮನೋರಮಾ ಮತ್ತು ದಿ ವೀಕ್‌ನ ರೆಸಿಡೆಂಟ್ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಅವರು, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಪ್ರೆಸ್ ಕೌನ್ಸಿಲ್ ಸದಸ್ಯರಾಗಿಯೂ ಸಚ್ಚಿದಾನಂದ ಮೂರ್ತಿ ಅವರು ಸೇವೆ ಸಲ್ಲಿಸಿದ್ದರು.
ಸಚ್ಚಿ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕೋಲಾರ – ಬೇತಮಂಗಲ ರಸ್ತೆಯಲ್ಲಿರುವ ಶಿಳ್ಳೆಗೆರೆ ಅವರ ಹುಟ್ಟೂರು.
ಅವರು ಪತ್ನಿ ಚಂದ್ರಿಕಾ, ಪುತ್ರರಾದ ನಿತಿನ್, ರೋಹನ್ ಹಾಗೂ ಅಸಂಖ್ಯಾತ ಪತ್ರಕರ್ತ ಗೆಳೆಯರು, ಹಿತೈಷಿಗಳನ್ನು ಅವರು ಅಗಲಿದ್ದಾರೆ. ಮಕ್ಕಳಿಬ್ಬರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದು, ಅವರು ಈಗಾಗಲೇ ಬೆಂಗಳೂರಿಗೆ ಬಂದಿದ್ದಾರೆ.
ರಾಷ್ಟ್ರೀಯ ಮಾಧ್ಯಮ ವಲಯದಲ್ಲಿ ಬಹಳಷ್ಟು ಪ್ರಭಾವಿ ಆಗಿದ್ದ ಅವರು; ಪ್ರಧಾನಿ, ಕೇಂದ್ರ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು, ಉನ್ನತ ಅಧಿಕಾರಿಗಳನ್ನು ಸುಲಭವಾಗಿ ಭೇಟಿ ಆಗುತ್ತಿದ್ದರು. ಅಲ್ಲದೆ ಅವರನ್ನು STRONG MAN OF THE WEEK ಎಂದು ಕರೆಯಲಾಗುತ್ತಿತ್ತು. ಸುಮಾರು 40 ವರ್ಷಗಳ ಕಾಲ ಅವರು ಮಾಧ್ಯಮದಲ್ಲಿ ಸೇವೆ ಸಲ್ಲಿಸಿ ನಿರ್ಗಮಿಸಿದ್ದಾರೆ. ದಿ ವೀಕ್ ಒಂದರಲ್ಲಿಯೇ ಅವರು 32 ವರ್ಷ ಕೆಲಸ ಮಾಡಿದ್ದರು. ಅದಕ್ಕೂ ಮುನ್ನ ಅವರು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಕೆಲಸ ಮಾಡಿದ್ದರು.
ಆಸ್ಪತ್ರೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದರು
ಸಚ್ಚಿ ಅವರು ಬಹಳಷ್ಟು ಜೀವನ ಪ್ರೀತಿಯುಳ್ಳವರಾಗಿದ್ದರು. ಅವರ ಗೆಳೆಯರ ಬಳಗ ದೊಡ್ಡದು. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಅವರು, ಕಳೆದ ಆಗಸ್ಟ್ 30ರಂದು ಜಯನಗರ ಅಪೋಲೋ ಆಸ್ಪತ್ರೆಯಲ್ಲಿ ತಮ್ಮ ಜನ್ಮದಿನ ಆಚರಣೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಶ್ವಾಸಕೋಶ ಕಸಿ ಚಿಕಿತ್ಸೆಗೆ ಒಳಗಾಗಿದ್ದರು.
ತಮ್ಮ ವೃತ್ತಿ ಜೀವನದಲ್ಲಿ ಅಸಂಖ್ಯಾತ ತರುಣ ಪತ್ರಕರ್ತರನ್ನು ಮುನ್ನೆಲೆಗೆ ತಂದ ಅವರು, ಪತ್ರಿಕೋದ್ಯಮದ ಪರಿಪೂರ್ಣ ರೂಪವಾಗಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲ ಗೆಳೆಯರು ಅನೇಕರು ಹೇಳುತ್ತಾರೆ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಸಿಕೆನ್ಯೂಸ್ ನೌ ಪ್ರಾರ್ಥನೆ ಮಾಡುತ್ತದೆ.
ದೇವೇಗೌಡರು, ಸಿದ್ದರಾಮಯ್ಯ, ಡಿಕೆಶಿ, ಹೆಚ್ಡಿಕೆ ಸಂತಾಪ
ಸಚ್ಚಿ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಸಿಎಂ ಸಿದ್ದರಾಮಯ್ಯ , ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ. ಶಿವಕುಮಾರ್ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.
ಹಿರಿಯ ಪತ್ರಕರ್ತರು, ಪ್ರತಿಭಾನ್ವಿತರು ಆಗಿದ್ದ ಶ್ರೀ ಕೆ. ಎಸ್.ಸಚ್ಚಿದಾನಂದ ಮೂರ್ತಿ (ಸಚ್ಚಿ) ಅವರು ವಿಧಿವಶರಾದ ಸುದ್ದಿ ತಿಳಿದು ತೀವ್ರ ನೋವುಂಟಾಯಿತು. ಸಚ್ಚಿದಾನಂದ ಮೂರ್ತಿ ಅವರು ಮಲೆಯಾಳಂ ಮನೋರಮಾ ಮತ್ತು ದಿ ವೀಕ್ ವಾರಪತ್ರಿಕೆಯ ಸ್ಥಾನಿಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿ, ಪ್ರೆಸ್ ಕೌನ್ಸಿಲ್ ಸದಸ್ಯರಾಗಿಯೂ ದುಡಿದಿದ್ದರು.ಅವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಕಂಬನಿ ಮಿಡಿದಿದ್ದಾರೆ.
ಹಿರಿಯ ಪತ್ರಕರ್ತ, ‘ಮಲಯಾಳ ಮನೋರಮಾ’ ಮತ್ತು ‘ದಿ ವೀಕ್’ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.
ನನಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು.
ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದ ಮೂರ್ತಿಯವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
ಸೂಕ್ಷ್ಮ, ಸಂವೇದನಾಶೀಲ ಹಾಗೂ ಜನಪರ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಹೆಸರಾಗಿದ್ದ ಹಿರಿಯ ಪತ್ರಕರ್ತ ಶ್ರೀ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ನಿಧನದ ವಾರ್ತೆ ತಿಳಿದು ಬಹಳ ನೋವಾಯಿತು.
‘ಮಲೆಯಾಳ ಮನೋರಮಾ’ ಹಾಗೂ ‘ದಿ ವೀಕ್’ ಪತ್ರಿಕೆಗಳ ಸ್ಥಾನಿಕ ಸಂಪಾದಕರಾಗಿದ್ದ ಅವರ ಅಂಕಣ ಬರಹಗಳನ್ನು ನಾನು ಸಾಕಷ್ಟು ಓದಿದ್ದೇನೆ.
ಸಚ್ಚಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಹಿರಿಯ ಪತ್ರಕರ್ತರಾದ ಸಚ್ಚಿದಾನಂದ ಮೂರ್ತಿ ಅವರ ಸಾವಿನ ಸುದ್ದಿ ಕೇಳಿ ಹೃದಯ ಭಾರವಾಗಿದೆ. ಮಲಯಾಳಂ ಮನೋರಮಾ, ದಿ ವೀಕ್ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಸಚ್ಚಿದಾನಂದಮೂರ್ತಿ ಅವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ.
ಅಗಲಿದ ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.