ಇಂದು ಅಬ್ದುಲ್ ಕಲಾಂ ಅವರ 92ನೇ ಜನ್ಮದಿನ
by Dr.Guruprasad Hawaldar
ಭಾರತ ಕಂಡ ಶ್ರೇಷ್ಠ ವಿಜ್ಞಾನಿ ಡಾ.ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ (ಎಪಿಜೆ ಅಬ್ದುಲ್ ಕಲಾಂ) ರವರ 92ನೇ ಜನ್ಮದಿನ ಇಂದು.
ಏರೋಸ್ಪೇಸ್ ವಿಜ್ಞಾನಿ, ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಕಲಾಂ ರವರು ಅಕ್ಟೋಬರ್ 15, 1931ರಲ್ಲಿ ತಮಿಳುನಾಡಿನ ರಾಮೇಶ್ವರದಲ್ಲಿ ಹುಟ್ಟಿದರು.
ಮದ್ರಾಸಿನ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಅವರು ಏರೋಸ್ಪೇಸ್ ಎಂಜಿನಿಯರಿಂಗ್ (Aerospace Engineering) ಪದವಿಯನ್ನು ಪಡೆದರು.
ಸ್ವದೇಶಿ ನಿರ್ಮಿತ ಕ್ಷಿಪಣಿ ಅಗ್ನಿ ಮತ್ತು ಪೃಥ್ವಿಗಳ ಅಭಿವೃದ್ಧಿ ಮತ್ತು ಕಾರ್ಯನಿರ್ವಹಣೆಯಿಂದ ಭಾರತದ ಕ್ಷಿಪಣಿ ಮನುಷ್ಯ ಎಂಬ ಬಿರುದು ಪಡೆದಿದ್ದು ಮಾತ್ರವಲ್ಲದೇ, ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಲವು ವಿಷಯಗಳಲ್ಲಿ ಕಲಾಂ ಅವರ ಕೊಡುಗೆ ನೀಡಿದ್ದಾರೆ.
ಭಾರತದ ಮೊದಲ ಉಪಗ್ರಹ ಉಡಾವಣೆ ವಾಹಕ (ಎಸ್ಎಲ್ ವಿ) ಅಭಿವೃದ್ಧಿ
ಅದು 1980ರ ದಶಕ, ಆಗ ದೇಶ ಸ್ವದೇಶಿ ನಿರ್ಮಿತ ಉಪಗ್ರಹ ಉಡಾವಣೆ ವಾಹಕವನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಡಾ ಕಲಾಂ ಅವರು ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾಗ 10 ವರ್ಷಕ್ಕೂ ಹೆಚ್ಚು ಕಾಲ ಸ್ವದೇಶಿ ನಿರ್ಮಿತ ಸ್ಯಾಟಲೈಟ್ ಉಡಾವಣೆ ವಾಹಕದ ಯೋಜನೆ ಮೇಲೆ ಸತತವಾಗಿ ನಿರ್ದೇಶಕರಾಗಿ ಕಠಿಣ ಕೆಲಸ ಮಾಡಿದ್ದರು. ಇದರ ಫಲವೇ 1980ರ ಜುಲೈನಲ್ಲಿ ಭಾರತದ ಎಸ್ಎಲ್ವಿ-3 ಯಶಸ್ವಿಯಾಗಿ ರೋಹಿಣಿ ಸ್ಯಾಟಲೈಟ್ನ್ನು ಭೂ ಕಕ್ಷೆಗೆ ಸೇರಿಸಿ ಅಂತರಿಕ್ಷ ಕ್ಲಬ್ನಲ್ಲಿ ಭಾರತ ಸದಸ್ಯ ರಾಷ್ಟ್ರವಾಗುವಂತೆ ಮಾಡಿದರು.

ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿ
ಎಸ್ಎಲ್ವಿ ಸ್ಯಾಟಲೈಟ್ನ ಯಶಸ್ವಿ ಉಡಾವಣೆ ನಂತರ ಭಾರತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿತು. ನಂತರ ಕೈಗೂಡಿದ್ದೇ ಡೆವಿಲ್ ಮತ್ತು ವೇಲಿಯಂಟ್ ಯೋಜನೆಗಳು.
ಈ ಯೋಜನೆಗಳಡಿ ಕಲಾಂ ಅವರು ಇತರ ವಿಜ್ಞಾನಿಗಳ ಸಹಕಾರದೊಂದಿಗೆ ಅಗ್ನಿ ಇಂಟರ್ ಮೀಡಿಯೆಟ್ ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಪೃಥ್ವಿ ಮೇಲ್ಮೈಯಿಂದ ಮೇಲ್ಮೈ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದರು.
ಭಾರತದ ಮೊದಲ ಸ್ವದೇಶಿ ಹೋವರ್ಕ್ರಾಫ್ಟ್
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದಲ್ಲಿನ ಯುವ ವಿಜ್ಞಾನಿಯಾಗಿದ್ದ ಕಲಾಂ ಅವರಿಗೆ ದೇಶದ ರಕ್ಷಣೆಗಾಗಿ ಹೋವರ್ಕ್ರಾಫ್ಟ್ ಅನ್ನು ನಿರ್ಮಿಸುವ ಹಾಗೂ ಅಭಿವೃದ್ಧಿಪಡಿಸುವ ಮೊದಲ ಪ್ರಾಜೆಕ್ಟ್ ಅನ್ನು ನಿಯೋಜಿಸಲಾಯಿತು. ಕಲಾಂ ಹಾಗೂ ಅವರ ತಂಡ ಅವಿರತವಾಗಿ ಪರಿಶ್ರಮಿಸಿ ಭಾರತದ ಮೊದಲ ಸ್ವದೇಶಿ ಹೋವರ್ಕ್ರಾಫ್ಟ್ ನಂದಿಯನ್ನು ನಿರ್ಮಿಸಿದರು. ಶಿವನ ವಾಹನ ನಂದಿ ಎಂಬ ಹಿನ್ನಲೆಯಲ್ಲಿ ಹೋವರ್ಕ್ರಾಫ್ಟ್ ಗೆ ʼನಂದಿʼ ಹೆಸರನ್ನು ಇಡಲಾಯಿತು.
INCOSPAR ಸಮಿತಿ
ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರ ಅಡಿಯಲ್ಲಿ ಕಾರ್ಯನಿರ್ವಹಿಸುವ, ಬಾಹ್ಯಾಕಾಶಕ್ಕಾಗಿ ಕಾರ್ಯನಿರ್ವಹಿಸುವ ಭಾರತೀಯ ರಾಷ್ಟ್ರೀಯ ಸಮಿತಿಯ INCOSPAR ಭಾಗವಾಗಿದ್ದರು ಕಲಾಂ. ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಪರಮಾಣು ಶಕ್ತಿ ವಿಭಾಗದ ಜವಬ್ದಾರಿಗಳನ್ನು ಸಮಿತಿ ವಹಿಸಿತ್ತು.
ಮಿಸೈಲ್ ಮ್ಯಾನ್
1982 ರಲ್ಲಿ ಅಬ್ದುಲ್ ಕಲಾಂ ಅವರು DRDO ಅನ್ನು ಪುನಾ ಸೇರಿಕೊಂಡರು. ಸಂಯೋಜಿತ ಮಾರ್ಗದರ್ಶಿ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದರು. ಈ ಮಿಸೈಲ್ ಯೋಜನೆಯಿಂದಾಗಿ ಅವರನ್ನು ‘ಮಿಸೈಲ್ ಮ್ಯಾನ್’ ಎಂದೇ ಕರೆಯಲಾಯಿತು.1992 ರಲ್ಲಿ, ಕಲಾಂ ಅವರನ್ನು ವೈಜ್ಞಾನಿಕ ಸಲಹೆಗಾರರಾಗಿ ನೇಮಿಸಲಾಯಿತು. ಕ್ಯಾಬಿನೆಟ್ ಮಂತ್ರಿಯ ದರ್ಜೆಯೊಂದಿಗೆ 1999 ರಲ್ಲಿ ಅವರನ್ನು ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಲಾಯಿತು. ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಕಲಾಂ ಕಾರ್ಯನಿರ್ವಹಿಸಿದ್ದಾರೆ ಹಾಗೂ ಪೋಖ್ರನ್ – II ನ್ಯೂಕ್ಲಿಯರ್ ಟೆಸ್ಟ್‌ಗಳ ಪ್ರಧಾನ ಪ್ರಾಜೆಕ್ಟ್ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಪೋಖ್ರನ್‌ನಲ್ಲಿ ನ್ಯೂಕ್ಲಿಯರ್ ಪರೀಕ್ಷೆಗಳು
ಜುಲೈ 1992 ರಿಂದ ಡಿಸೆಂಬರ್ 1999 ರವರೆಗೆ DRDO ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕಲಾಂ ಪೋಖ್ರನ್ – II ನ್ಯೂಕ್ಲಿಯರ್ ಟೆಸ್ಟ್‌ಗಳ ಯೋಜನೆಯಲ್ಲಿ ಪ್ರಮುಖ ರುವಾರಿಯಾಗಿದ್ದರು. ಅಂದಿನ ಪ್ರಧಾನಮಂತ್ರಿಗಳ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿದ್ದ ಡಾ ಕಲಾಂ ಅವರು; ಪೋಖ್ರನ್ -2 ಪರಮಾಣು ಪರೀಕ್ಷೆಯ ನೇತೃತ್ವ ವಹಿಸಿದ್ದರು. ಅಂದಿನ ಅತ್ಯುತ್ತಮ ಪರಮಾಣು ವಿಜ್ಞಾನಿ ಎಂದು ಗುರುತಿಸಿಕೊಂಡಿದ್ದರು. 1992ರ ಜುಲೈಯಿಂದ 1999ರವರೆಗೆ ಕಲಾಂ ನೇತೃತ್ವದಲ್ಲಿ ದೇಶದಲ್ಲಿ ಹಲವು ಪರಮಾಣು ಪರೀಕ್ಷೆಗಳು ನಡೆದವು.
ಅಂತೆಯೇ ಅವರನ್ನು ದೇಶದ ಅತ್ಯುತ್ತಮ ಪರಮಾಣು ವಿಜ್ಞಾನಿ ಎಂದು ಉಲ್ಲೇಖಿಸಲಾಯಿತು. ಅವರ ಮೇಲ್ವಿಚಾರಣೆಯಲ್ಲಿ ನಡೆಸಿದ ಪರಮಾಣು ಪರೀಕ್ಷೆಯಿಂದ ಭಾರತವು ಪರಮಾಣ – ಶಸ್ತ್ರಸಜ್ಜಿತ ದೇಶ ಎಂದು ಕರೆಯಿಸಿಕೊಂಡಿತು.

ಆರೋಗ್ಯ ಸೇವೆ
ಸೋಮರಾಜು ಎಂಬ ಹೃದ್ರೋಗ ತಜ್ಞರ ಜೊತೆ ಕೆಲಸ ಮಾಡಿಕೊಂಡು ಕಡಿಮೆ ವೆಚ್ಚದ ಕೊರೋನರಿ ಸ್ಟಂಟ್ ಕಲಾಂ-ರಾಜು ಸ್ಟಂಟ್ನ್ನು ಅಭಿವೃದ್ಧಿಪಡಿಸಿದರು. ಇದರಿಂದ ಆರೋಗ್ಯ ಸೇವೆ ಎಲ್ಲರಿಗೂ ಸಿಗುವಂತಾಯಿತು. 2012ರಲ್ಲಿ ಕಲಾಂ ಮತ್ತು ವೈದ್ಯ ಡಾ ಸೋಮರಾಜು ಅವರು ದೇಶದ ಗ್ರಾಮೀಣ ಭಾಗದ ಜನರಿಗಾಗಿ ಉತ್ತಮ ಆರೋಗ್ಯ ಸೇವೆ ನೀಡಲು ಟ್ಯಾಬ್ಲೆಟ್ ಕಂಪ್ಯೂಟರ್ ಅಭಿವೃದ್ಧಿಪಡಿಸಿದರು. ಇದನ್ನು ಕಲಾಂ-ರಾಜು ಟ್ಯಾಬ್ಲೆಟ್ ಎಂದು ಕರೆಯಲಾಯಿತು.
ವಿಜ್ಞಾನ ಮತ್ತು ರಾಜಕೀಯದಲ್ಲಿ ಕೂಡ ಗುರುತಿಸಿಕೊಂಡಿದ್ದ ಅಪ್ಪಟ ಸ್ವದೇಶಾಭಿಮಾನಿ ಎನ್ನುವುದಕ್ಕೆ ಸ್ವದೇಶಿ ತಂತ್ರಜ್ಞಾನದ ಮೂಲಕವೇ ಭಾರತದ ಮೊಟ್ಟಮೊದಲ ಪರಮಾಣು ಬಾಂಬ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನಿದರ್ಶನ. ಅಮೆರಿಕದ ಹದ್ದಿನಗಣ್ಣು ತಪ್ಪಿಸಿ ಪೋಖ್ರನ್ ನಲ್ಲಿ ಪರಮಾಣು ಬಾಂಬ್ ಯಶಸ್ವಿ ಸ್ಫೋಟ ನಡೆಸಿದ್ದರ ಹಿಂದೆ ಕಲಾಂ ಅವರ ಅದ್ಭುತ ಬುದ್ಧಿಮತ್ತೆ ಹಾಗೂ ಕೌಶಲ ಅಡಗಿತ್ತು ಎಂಬುದನ್ನು ಮರೆಯುವಂತಿಲ್ಲ.
ವಾಜಪೇಯಿ ಸರ್ಕಾರದ ಹೆಮ್ಮೆಯ ಸಾಧನೆ ಅದೆಂದು ಬಿಂಬಿತವಾದರೂ ಅದರ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾದದ್ದು ಕಲಾಂರಿಗೆ. ಆದರೆ ಅವರೆಂದೂ ಅದು ತನ್ನ ಸಾಧನೆ ಎಂದು ಎದೆ ತಟ್ಟಿಕೊಳ್ಳಲಿಲ್ಲ. It is a team work ಎನ್ನುವ ಮನಸ್ಥಿತಿ ಅವರದು.
ಭಾರತ ಸಶಕ್ತ, ಸದೃಢ ದೇಶವಾಗಿ ಹೊಮ್ಮಬೇಕಾದರೆ, ಸ್ವಾವಲಂಬಿಯಾಗಿ ತಲೆಯೆತ್ತಬೇಕಾದರೆ, ಅದು ತನ್ನದೇ ಪರಮಾಣು ಬಾಂಬ್ ಹೊಂದಿರಬೇಕು ಎಂಬುದಷ್ಟೇ ಕಲಾಂ ಅವರ ಕನಸಾಗಿತ್ತು. ತಾವು ಸಂಶೋಧಿಸಿ ತಯಾರಿಸಿದ ಕ್ಷಿಪಣಿಗಳಿಗೆ ಅವರಿಟ್ಟ ಹೆಸರುಗಳು ಆಕಾಶ್, ಅಗ್ನಿ, ಪೃಥ್ವಿ, ತ್ರಿಶೂಲ್, ಬ್ರಹ್ಮೋಸ್, ಪ್ರಹಾರ್, ಅಮೋಘ, ಸಾಗರಿಕಾ ಇತ್ಯಾದಿ. ಈ ದೇಶದ ಸಂಸ್ಕೃತಿ, ಪರಂಪರೆ ಯಾವುದೆಂಬುದರ ಸ್ಪಷ್ಟ ಅರಿವು ಅವರಿಗಿತ್ತು. ಕುರಾನ್ ಬಗ್ಗೆ ಇದ್ದಷ್ಟೇ ಶ್ರದ್ಧೆ ಭಗವದ್ಗೀತೆ, ರಾಮಾಯಣದ ಬಗ್ಗೆಯೂ ಅವರಲ್ಲಿ ಇತ್ತು.
1981 ರಲ್ಲಿ ಕಲಾಂ ಅವರಿಗೆ ಗೌರವ ಪದ್ಮಭೂಷಣ ಗೌರವನ್ನು ಹಾಗೂ 1990ರಲ್ಲಿ ಪದ್ಮವಿಭೂಷಣ ಪುರಸ್ಕಾರಕ್ಕೆ ಕಲಾಂ ಭಾಜನರಾದರು. ಅವರ ವಿಜ್ಞಾನ ಹಾಗೂ ರಾಜಕೀಯದಲ್ಲಿನ ಕೈಂಕರ್ಯಗಳನ್ನು ಗೌರವಿಸಿ 1997ರಲ್ಲಿ ಭಾರತರತ್ನ ನೀಡಲಾಯಿತು. ಒಬ್ಬ ವಿಜ್ಞಾನಿಯಾಗಿ ಹಾಗೂ ರಾಷ್ಟ್ರಪತಿಯಾಗಿ ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ.
ಅವರೊಬ್ಬ ಶ್ರೇಷ್ಠ ವಿಜ್ಞಾನಿ, ಶ್ರೇಷ್ಠ ರಾಷ್ಟ್ರಪತಿ ಎಂಬ ಕಾರಣಕ್ಕೆ 30ಕ್ಕೂ ಹೆಚ್ಚು ದೇಶ-ವಿದೇಶಗಳ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪದವಿಗಳು ಅವರನ್ನರಸಿ ಬಂದಿದ್ದವು. 2007 ರಲ್ಲಿ ಅವರನ್ನು ಇಂಗ್ಲೆಂಡ್ ನ ರಾಯಲ್ ಸೊಸೈಟಿ ಕಿಂಗ್ ಚಾರ್ಲ್ಸ್ II ಪದಕದಿಂದ ಗೌರವಿಸಿದರು. 2008ರಲ್ಲಿ ಬ್ರಿಟನ್ನಿನ ವಾಲ್ವರ್ಹ್ಯಾಂಪ್ಟನ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಆಫ್ ಸೈನ್ಸ್ ಪದವಿಯನ್ನು ನೀಡಿತು. ಯುಎಸ್ಎ ಯ ASME ಸಂಸ್ಥೆಯ ಹೂವರ್ ಮೆಡಲ್ ಅನ್ನು ಪಡೆದುಕೊಂಡರು ಹಾಗೂ ಸಿಂಗಾಪುರದ ನನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಆಫ್ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡರು.
ನನ್ನ ಜೀವನ ನಾನು ವಿದ್ಯಾರ್ಥಿಗಳ ಜತೆಗೆ ಇರುವಾಗಲೇ ಕೊನೆಯಾಗಬೇಕು. ಎಂದು ಹೇಳಿದ್ದ ಕಲಾಂ ಅವರು ಜುಲೈ 27ರಂದು 2015ರಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಶಿಲ್ಲಾಂಗ್ ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ಸಮಯದಲ್ಲೇ ಕಲಾಂ ಅವರು ಹೃದಯಸ್ತಂಭನದಿಂದ ಕುಸಿದು ನಿಧನರಾದರು. ಅವರೊಬ್ಬ ಸಾಮಾನ್ಯ ವ್ಯಕ್ತಿಯಂತೆಯೇ ಸರಳವಾಗಿ ಬಾಳಿ ಬದುಕಿದರು.
**
Dr.Guruprasad Hawaldar
ಇವರ ವೃತ್ತಿ ಉಪನ್ಯಾಸ. ಪ್ರವೃತ್ತಿ ಬರವಣಿಗೆ. ಇವರ ಬರಹಗಳು ಈಗಾಗಲೇ ನಾಡಿನ ಅನೇಕ ಪತ್ರಿಕೆಗಳು ಮತ್ತು ಪ್ರಮುಖ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾಗಿವೆ.