ಬೆಂಗಳೂರಿಗೆ ವೇಣುಗೋಪಾಲ್ ಧಾವಿಸಿಬಂದ ಕಾರಣ ಬಯಲು; ಡ್ಯಾಮೇಜ್ ಕಂಟ್ರೋಲ್ ಗೆ ಹರಸಾಹಸ
ಬೆಂಗಳೂರು: ಕರ್ನಾಟಕ ವಿಧಾನಸಭೆ ಫಲಿತಾಂಶದಿಂದ ನಾಗಾಲೋಟದಲ್ಲಿ ಇದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಕೊಂಚ ಬ್ರೇಕ್ ಬಿದ್ದಿದೆ.
ಅದಕ್ಕೆ ಕಾರಣಗಳು ಎರಡು: ಒಂದು; ಜೆಡಿಎಸ್ – ಬಿಜೆಪಿ ಮೈತ್ರಿ. ಎರಡನೆಯದ್ದು ಕರ್ನಾಟಕದಲ್ಲಿ ನಡೆದ ಸರಣಿ ಆದಾಯ ತೆರಿಗೆ ದಾಳಿ.
ಸರಕಾರಿ ಗುತ್ತಿಗೆದಾರರು ಹಾಗೂ ಬ್ರೋಕರುಗಳ ಮೇಲೆ ನಡೆದ ಸರಣಿ ಆದಾಯ ತೆರಿಗೆ ಇಲಾಖೆ ದಾಳಿಯಿಂದ ಕಾಂಗ್ರೆಸ್ ಹೈಕಮಾಂಡ್ ಬೆಚ್ಚಿ ಬಿದ್ದಿದೆ. ಆದರೆ, ಈ ದಾಳಿಯ ಪರಿಣಾಮಗಳು ದೀರ್ಘಕಾಲದ್ದು ಆಗಿರುತ್ತವೆ ಎಂದು ದೆಹಲಿಯ ಉನ್ನತ ರಾಜಕೀಯ ಮೂಲಗಳು ಹೇಳುತ್ತವೆ.
ರಾಜ್ಯದಲ್ಲಿ ತೆರಿಗೆ ದಾಳಿ ಆರಂಭವಾದ ಮೊದಲ ದಿನದ ಮಧ್ಯಾಹ್ನದ ಹೊತ್ತಿಗೆ ಕಾಂಗ್ರೆಸ್ ಬೇವರಲಾರಂಭಿಸಿತ್ತು ಎನ್ನುವ ಮಾಹಿತಿಯ ಜತೆ ಜತೆಗೆ, ರಾಜ್ಯದಲ್ಲಿ ಆದಾಯ ತೆರಿಗೆ ದಾಳಿ ಮುಗಿದು ಆ ಇಲಾಖೆಯಿಂದ ಅಧಿಕೃತ ಪ್ರಕಟಣೆ ಹೊರಬೀಳುವ ಮುನ್ನವೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿಗೆ ಧಾವಿಸಿದ್ದರು. ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ಹೈ ವೋಲ್ಟೇಜ್ ಮಾತುಕತೆ ನಡೆಸಿರುವ ಬಗ್ಗೆ ಈಗ ಬೆಂಗಳೂರಿನಿಂದ ದೆಹಲಿಯವರೆಗೆ ಚರ್ಚೆ ಆಗುತ್ತಿರುವ ಅಂಶ.
ವೇಣುಗೋಪಾಲ್ ಅವರು ನಗರಕ್ಕೆ ಬರುತ್ತಿದ್ದಂತೆಯೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗೂಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಆದರೆ, ಅಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ನಡೆಯಿತು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲವಾದರೂ ಆದಾಯ ತೆರಿಗೆ ದಾಳಿಯ ಬಗ್ಗೆಯೇ ಸಮಾಲೋಚನೆ ನಡೆದಿದೆ ಎನ್ನುವುದರಲ್ಲಿ ಅನುಮಾನ ಇಲ್ಲ ಎಂದು ಮತ್ತೊಂದು ಮೂಲ ಹೇಳುತ್ತದೆ.
ಈ ಮಾತುಕತೆ ಸಂದರ್ಭದಲ್ಲೇ ಆದಾಯ ತೆರಿಗೆ ಇಲಾಖೆ ಮಧ್ಯಂತರ ವರದಿಯೊಂದನ್ನು ಬಿಡುಗಡೆ ಮಾಡಿ 94 ಕೋಟಿ ರೂ. ನಗದು ಸೇರಿದಂತೆ 102 ಕೋಟಿ ರೂ. ಕಪ್ಪು ಹಣ ವಶಪಡಿಸಿಕೊಂಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ನಾಗಾಲೋಟದಲ್ಲಿ ಮುನ್ನುಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಈ ದಾಳಿ ನಡೆದಿರುವುದು ಸಂಘಟನೆಗೆ ಹಿನ್ನಡೆಯಾಗಿದೆ.
ಚುನಾವಣಾ ಸಿದ್ಧತೆಯಲ್ಲಿ ಇಂತಹ ದಾಳಿ ಹಲವು ವಿಷಯಾಂತರಕ್ಕೆ ತಿರುಗಿ ಪಕ್ಷ ಮತ್ತು ಒಕ್ಕೂಟದ ಮೇಲೆ ಭಾರೀ ಹಿನ್ನಡೆಯಾಗಲಿದೆ ಎಂಬ ಉದ್ದೇಶದಿಂದ ವರಿಷ್ಠರ ಸೂಚನೆಯಂತೆ ವೇಣುಗೋಪಾಲ್ ನಗರಕ್ಕೆ ದಿಡೀರನೆ ಆಗಮಿಸಿದ್ದಾರೆ.
ದಾಳಿಯಿಂದ ಪಕ್ಷದ ಮೇಲಾಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡುವುದು ಮತ್ತು ಕರ್ನಾಟಕದ ಪ್ರತಿಪಕ್ಷವಾಗಿರುವ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಪ್ರತಿ ಅಸ್ತ್ರಗಳನ್ನು ಪ್ರಯೋಗ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ವೇಣುಗೋಪಾಲ್ ಹಾಗೂ ಖರ್ಗೆ ಅವರು, ಕೆಪಿಸಿಸಿ ಅಧ್ಯಕ್ಷರಿಗೆ ಕೆಲವು ಕಿವಿ ಮಾತುಗಳನ್ನು ಹೇಳಿದ್ದಾರೆ ಎಂದು ಹೇಳಲಾಗಿದೆ.ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಹಾಗೂ ತೆಲಂಗಾಣ ವಿಧಾನಸಭಾ ವಿಧಾನಸಭಾ ಚುನಾವಣೆ ಕುರಿತಂತೆ ಈ ಮೂವರು ನಾಯಕರು ಮಾತುಕತೆ ನಡೆಸಿದ್ದಾರೆ. ಆದರೆ, ಹೆಚ್ಚಿನ ವಿವರ ತಿಳಿದಿಲ್ಲ.
ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, “ನಾನು ಹೇಡಿ ಅಲ್ಲ, ಹೆದರಿ ಎಲ್ಲಿಯೂ ಓಡಿ ಹೋಗಲ್ಲ. ಮಾಜಿ ಮುಖ್ಯಮಂತ್ರಿ, ನಕಲಿ ಸ್ವಾಮಿ ಬ್ಲಾಕ್ ಮೇಲ್, ಲೂಟಿ ರವಿ ಎಲ್ಲರಿಗೂ ತಕ್ಕ ಉತ್ತರ ಕೊಡುತ್ತೇನೆ. ಅವರದೆಲ್ಲ ಬಿಚ್ಚಿಡುತ್ತೇನೆ” ಎಂದರು.
ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ. ನ್ಯಾಯಾಲಯದ ವಿಚಾರಣೆ, ನೆಲದ ಕಾನೂನನ್ನು ನಾನು ಗೌರವಿಸುತ್ತೇನೆ”. “ಯಾರಿಗೆ ಏನು ಉತ್ತರ ನೀಡಬೇಕೋ ನೀಡುತ್ತೇನೆ. ಅವರಿಗೆ ಐಟಿ ಇಲಾಖೆ ಪ್ರಕ್ರಿಯೆ ಗೊತ್ತಿಲ್ಲ. ಅವರು ಏಜೆಂಟರಂತೆ ಮಾತನಾಡುತ್ತಿದ್ದಾರೆ. ಅವರಂತೆ ನಾನು ಮಾತನಾಡುವುದಿಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಅವರಂತೆ ಮಾತನಾಡಲು ಸಾಧ್ಯವಿಲ್ಲ. ನ್ಯಾಯಾಲಯದ ವಿಚಾರದಲ್ಲಿ ಆ ರೀತಿ ಮಾತನಾಡಿದರೆ ತಪ್ಪಾಗುತ್ತದೆ. ಅವರಿಗೆ ಉತ್ತರ ನೀಡಲು ಮುಹೂರ್ತ ಫಿಕ್ಸ್ ಮಾಡುತ್ತೇನೆ” ಎಂದು ತಿಳಿಸಿದರು.
ಪ್ರತಿಪಕ್ಷದವರ ಆರೋಪಕ್ಕೆ ಹೈವೋಲ್ಟೇಜೂ ಕೊಡ್ತಿನಿ, ಲೋವೋಲ್ಟೇಜೂ ಕೊಡ್ತಿನಿ, ನಕಲಿಗೂ ಕೊಡುವೆ, ಲೂಟಿಗೂ ಕೊಡುವೆ, ಸ್ವಲ್ಪ ತಾಳ್ಮೆಯಿಂದ ಕಾಯಿರಿ.”ಬಿಜೆಪಿಯವರು ಪ್ರತಿಭಟನೆ ಮಾಡಬೇಕು, ಪ್ರತಿಭಟನೆ ಮಾಡಿದರೆ ಜನರಿಗೆ ಅವರ ಎಲ್ಲಾ ತರಹದ ಲೂಟಿ ಬಗ್ಗೆ ಗೊತ್ತಾಗುತ್ತದೆ, ಎಲ್ಲವನ್ನೂ ಬಿಚ್ಚಿಡುತ್ತೇವೆ” ಎಂದೂ ಹೇಳಿದರು.
ವೇಣುಗೋಪಾಲ್ ಅವರ ಆಗಮನ ಹಾಗೂ ಪಕ್ಷದ ನಾಯಕರ ಸಭೆ ಕುರಿತು ಕೇಳಿದಾಗ, “ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ನಾನು ಪಕ್ಷದ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಲೋಕಸಭಾ ಕ್ಷೇತ್ರಗಳಿಗೆ ಹೋಗಿ ವರದಿ ನೀಡುವಂತೆ ಮಂತ್ರಿಗಳಿಗೆ ಜವಾಬ್ದಾರಿ ನೀಡಿದ್ದೆವು. ಈ ಪ್ರಕ್ರಿಯೆ ತಡವಾಗುತ್ತಿರುವುದರಿಂದ ಅದನ್ನು ತ್ವರಿತವಾಗಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
https://youtu.be/84j4rlxQ4l4?si=ZnDFWByuVx4xHgXZ
ನಿಗಮ-ಮಂಡಳಿಗಳಲ್ಲಿ ಶಾಸಕರಿಗೆ ಮಾತ್ರ ಸ್ಥಾನವೇ? ಕಾರ್ಯಕರ್ತರಿಗೂ ಸ್ಥಾನ ಸಿಗುತ್ತದೆಯೋ ಎಂದು ಕೇಳಿದಾಗ, “ಶಾಸಕರು ಹಾಗೂ ಕಾರ್ಯಕರ್ತರು ಇಬ್ಬರಿಗೂ ನೀಡಬೇಕು. ಪಕ್ಷ ಎಂದರೆ ಎಲ್ಲರೂ ಸೇರುತ್ತಾರೆ. ಎಲ್ಲರಿಗೂ ಸ್ಥಾನಮಾನ ನೀಡಬೇಕು. ಈ ವಿಚಾರವಾಗಿ ನಾನು ಹಾಗೂ ಮುಖ್ಯಮಂತ್ರಿಗಳು ಒಂದೆರಡು ದಿನದಲ್ಲಿ ಚರ್ಚೆ ಮಾಡುತ್ತೇವೆ” ಎಂದರು.