ಬೆಳಗಾವಿ ಬೇಯುತ್ತಿದೆ ಕೈ ಪಕ್ಷ; ಬೆಂಗಳೂರು ನಾಯಕರದ್ದು ಒಂದು ದಾರಿ, ಬೆಳಗಾವಿಯವರದ್ದು ಇನೊಂದು ದಾರಿ!
ಬೆಂಗಳೂರು / ಬೆಳಗಾವಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ಶೀತಲ ಸಮರ ತಾರಕಕ್ಕೇರಿದೆ.
ಕಾರ್ಯಕ್ರಮ ನಿಮಿತ್ತ ಬೆಳಗಾವಿಗೆ ತೆರಳಿದ್ದ ಶಿವಕುಮಾರ್ ಅವರು ನಡೆಸಿದ ಸಭೆಗಳಿಂದ ಸತೀಶ್ ಜಾರಕಿಹೊಳಿ ಸೇರಿದಂತೆ ಆ ಭಾಗದ ಬಹುತೇಕ ಪಕ್ಷದ ಶಾಸಕರು ಮತ್ತು ಮುಖಂಡರು ದೂರ ಉಳಿದಿದ್ದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಒಡೆದ ಮನೆ ಆಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಆಗಿದೆ.
ಬುಧವಾರದ ಡಿಕೆಶಿ ಸಭೆಗೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಶಾಸಕ ಮಹೇಂದ್ರ ಕೆ.ತಮ್ಮಣ್ಣನವರ್ ಹಾಜರಾಗಿರುವುದನ್ನು ಬಿಟ್ಟರೆ ಉಳಿದವರ‍್ಯಾರು ಸಭೆ ಕಡೆಗೆ ಮುಖ ಹಾಕಿರಲಿಲ್ಲ. ಕಳೆದ ಒಂದು ವಾರದಿಂದ ಎರಡು ಗುಂಪುಗಳ ನಡುವೆ ಮುಸುಕಿನ ಗುದ್ದಾಟ ಜೋರಾಗಿ ಸತೀಶ್ ಬಲ ಪ್ರದರ್ಶನಕ್ಕೂ ಮುಂದಾಗಿದ್ದರು.
ಅಷ್ಟೇ ಅಲ್ಲ, ತಮಗೆ ತಕ್ಷಣವೇ ಉಪ ಮುಖ್ಯಮಂತ್ರಿ ಸ್ಥಾನ, ಬೆಳಗಾವಿ ಆಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಹಿಡಿತ ಮೇಲುಗೈ ಸಾಧಿಸಬೇಕು ಎಂದು ಸತೀಶ್ ಅವರು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ವರಿಷ್ಠರ ಮಧ್ಯ ಪ್ರವೇಶನದಿಂದ ಬಲ ಪ್ರದರ್ಶನವನ್ನು ಹಿಂತೆಗೆದುಕೊಂಡಿದ್ದ ಜಾರಕಿಹೊಳಿ, ತಮ್ಮ ಬೇಡಿಕೆ ಹಾಗೂ ಒತ್ತಾಯದಿಂದ ಹಿಂದೆ ಸರಿದಿರಲಿಲ್ಲ. ಇದರ ನಡುವೆ ಬೆಳಗಾವಿಗೆ ತೆರಳಿದ್ದ ಶಿವಕುಮಾರ್‌ಗೆ ಮುಂಬಯಿ ಕರ್ನಾಟಕ ಭಾಗದಲ್ಲಿ ನಮ್ಮದೇ ಪ್ರಾಬಲ್ಯ ಎಂಬುದನ್ನು ಸಾಬೀತು ಪಡಿಸುವಲ್ಲಿ ಸತೀಶ್ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.
ಶಿವಕುಮಾರ್ ಅವರು ಮಾತ್ರ ಪಕ್ಷದಲ್ಲಿ ಮತ್ತು ಸರಕಾರದಲ್ಲಿ ಎಲ್ಲವೂ ಸರಿಯಾಗಿದೆ ಎಂಬಂತೆ ತೋರ್ಪಡಿಸುವ ಪ್ರಯತ್ನ ಮಾಡಿದ್ದಲ್ಲದೆ, ತಾವು ತೆರಳಿದ್ದ ಕಾರ್ಯಕ್ರಮ ಮತ್ತು ಸಭೆಗಳನ್ನು ಮುಗಿಸಿದ್ದಾರೆ. ಸಭೆಗೂ ಮುನ್ನ ಮಾತನಾಡಿದ ಶಿವಕುಮಾರ್, “ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. 136 ಶಾಸಕರೂ ನಮ್ಮವರೇ. ನಮ್ಮಲ್ಲಿ ಬಿರುಕಿದೆ ಎಂದು ಹೇಳುವ ಬಿಜೆಪಿ ನಾಯಕರು ಒಮ್ಮೆ ಹಿಂದೆ ಜೆ.ಎಚ್.ಪಟೇಲರು ಮಾಡಿದ್ದ ಭಾಷಣ ಕೇಳಿಸಿಕೊಳ್ಳಲಿ” ಎಂದು ತಿಳಿಸಿದ್ದಾರೆ.
ಬೆಳಗಾವಿಯ ಶಾಸಕರು, ಸಚಿವರು ನಿಮ್ಮನ್ನು ಸ್ವಾಗತಿಸಲು ಬರಲಿಲ್ಲ, ಸತೀಶ್ ಜಾರಕಿಹೊಳಿ ಅವರಿಗೂ ನಿಮಗೂ ಮುನಿಸಿದೆಯೇ ಎನ್ನುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ನಿನ್ನೆ, ಮೊನ್ನೆ ಸತೀಶ್ ಅವರು ಮತ್ತು ನಾನು ಜತೆಯಲ್ಲಿಯೇ ಕುಳಿತು ಮಾತನಾಡಿದ್ದೇವೆ. ನಾನು ಬಂದಿರುವುದು ಖಾಸಗಿ ಕಾರ್ಯಕ್ರಮಕ್ಕೆ. ಲಕ್ಷ್ಮಿ ಹೆಬ್ಬಾಳಕರ್ ಅವರು ನಾಮಕರಣ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿ ಇದ್ದಾರೆ. ಕೌಜಲಗಿ ಅವರಿಗೆ ಆರೋಗ್ಯ ಸರಿಯಿಲ್ಲ. ದಿಢೀರ್ ಎಂದು ನಿನ್ನೆ ರಾತ್ರಿ ಈ ಕಾರ್ಯಕ್ರಮ ನಿಗದಿಯಾದ ಕಾರಣಕ್ಕೆ ಬಂದಿದ್ದೇನೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಕೆಲಸಗಳು ಇರುತ್ತವೆ” ಎಂದು ತೇಪೆ ಹಚ್ಚುವ ಕೆಲಸ ಮಾಡಿದರು.
ಸತೀಶ್ ಜಾರಕಿಹೊಳಿ ನಮ್ಮ ನಡುವೆ ಯಾವುದೇ ಬಿರುಕಿಲ್ಲ. ನನ್ನನ್ನು ಸ್ವಾಗತಿಸಲು ಬರಲಿಲ್ಲ, ಅದು ಇದು, ಎಂದು ನೀವೇ ಏನೇನೋ ಹೇಳುತ್ತೀರಿ?. ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಡಿಕೆಶಿ ಹೇಳಿರುವುದು ಎಲ್ಲರ ಹುಬ್ಬೇರಿಸಿದೆ.
“ನಮ್ಮಲ್ಲಿ ಯಾರ ಬಗ್ಗೆಯೂ ಮುನಿಸಿಲ್ಲ. ಎಲ್ಲಾ ಶಾಸಕರು ನಮ್ಮವರೇ. ನಿಮಗೂ ಹಾಗೂ ಬಿಜೆಪಿಯವರಿಗೆ ಒಂದು ಸುದ್ದಿ ಬೇಕು, ಅದಕ್ಕೆ ಹೀಗೆಲ್ಲಾ ಹೇಳುತ್ತೀರಿ”. ಸತೀಶ್ ಅವರು ಶಾಸಕರ ಜೊತೆ ಪ್ರವಾಸ ಮಾಡುವ ವಿಚಾರವಾಗಿ ನಾವಿಬ್ಬರೂ ಚರ್ಚಿಸಿದೆವು” ಎಂದರು.
ಬೆಳಗಾವಿಯಿಂದಲೇ ಕಾಂಗ್ರೆಸ್ ಬಂಡಾಯ ಆರಂಭ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದು ಕೇಳಿದಾಗ “ಜೆ.ಎಚ್.ಪಟೇಲರ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಆದಾಗ ಅವರು ಒಂದು ಭಾಷಣ ಮಾಡಿದ್ದರು. ಹೋರಿ ಮತ್ತು ನಾಯಿ ಕತೆ. ಅದನ್ನು ನೀವು ಕೇಳಿದ್ದೀರಾ? ಅದನ್ನು ಬಿಜೆಪಿಯವರಿಗೆ ಕೇಳಿಸಿಕೊಳ್ಳಲು ಹೇಳಿ” ಎಂದು ತಿರುಗೇಟು ನೀಡಿದ್ದಾರೆ ಡಿಕೆಶಿ.
“ಹುಕ್ಕೇರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಲು, ಈ ಭಾಗದ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲು ಹಾಗೂ ಮುಖ್ಯವಾಗಿ ಹುಕ್ಕೇರಿ ಮಠದ ಕಾರ್ಯಕ್ರಮಕ್ಕೆ ಬಂದಿದ್ದೇನೆ” ಎಂದು ಹೇಳಿದರು.
“ಬಿಜೆಪಿ ಮತ್ತು ಜನತಾದಳದವರು ಹತಾಶೆಯ ಅಂತಿಮ ಸ್ಥಿತಿ ತಲುಪಿದ್ದಾರೆ. ಅವರಿಗೆ ಡಾಕ್ಟರ್‌ಗಳೇ ಮೇಜರ್ ಆಪರೇಶನ್ ಮಾಡಬೇಕು” ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ತಂಡವೊಂದು ಸರ್ಕಾರ ಬೀಳಿಸಲು ನಿರಂತರವಾಗಿ ಪ್ರಯತ್ನ ನಡೆಸುತ್ತಿರುವುದು ನನಗೆ ತಿಳಿದಿದೆ. ಯಾವ ಶಾಸಕರನ್ನು, ಯಾರು ಯಾವಾಗ ಭೇಟಿ ಮಾಡಿದರು, ಮಾಡುತ್ತಿದ್ದಾರೆ ಎಂದು ಸಂಬಂಧಪಟ್ಟವರೇ ನನಗೆ ಮತ್ತು ಮುಖ್ಯಮಂತ್ರಿಗೆ ಮಾಹಿತಿ ನೀಡುತ್ತಿದ್ದಾರೆ.
“ಬಿಜೆಪಿಯವರು ಏನು ಆಫರ್ ಕೊಡುತ್ತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ. ನಮ್ಮ ಬಳಿ ಪ್ರತಿಯೊಂದು ಮಾಹಿತಿ ಇದೆ. ಯಾರನ್ನೆಲ್ಲ ಭೇಟಿಯಾಗಿದ್ದಾರೆ ಎಂಬುದನ್ನು ಅಧಿವೇಶನದಲ್ಲಿ ಹೇಳಿಸುತ್ತೇನೆ” ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಗಾದಿಗೆ ಪಟ್ಟು; ಬೆಳಗಾವಿ ಬೇಗುದಿಯಿಂದ ಕಾಂಗ್ರೆಸ್ ತಲ್ಲಣ