ಸಂಕಟ ತೋಡಿಕೊಂಡ ಸರಕಾರದ ಮುಖ್ಯ ಸಚೇತಕ
ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಲು ಗಾಡ್‌ಫಾದರ್ ಹಾಗೂ ನಕ್ಷತ್ರ ಸರಿ ಇರಬೇಕು ಎಂದು ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಇಂದಿಲ್ಲಿ ಅಳಲು ತೋಡಿಕೊಂಡಿದ್ದಾರೆ.
ಎರಡೂವರೆ ವರ್ಷ ಆಡಳಿತಾವಧಿ ಮುಗಿದ ನಂತರ ತಮಗೆ ಮಂತ್ರಿ ಸ್ಥಾನ ದೊರಕಿಸಿಕೊಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ. 30 ತಿಂಗಳ ಆಡಳಿತ ಪೂರ್ಣಗೊಂಡ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಆಗುತ್ತದೋ ಅಥವಾ ಮಂತ್ರಿ ಮಂಡಲ ಪುನಾರಚನೆ ಆಗುತ್ತದೋ ನನಗೆ ತಿಳಿಯದು ಎಂದಿದ್ದಾರೆ ಅವರು.
ಜಾತಿ ನೋಡಬೇಡಿ. ಪಕ್ಷದ ಹಿರಿಯನಾದ ನನ್ನನ್ನು ಮಂತ್ರಿ ಮಾಡಿ ಎಂದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ಸಿಂಗ್ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೂರ್ಣವಾಗಿ ಬದಲಾವಣೆ ಆಗಲಿದೆ ಎಂಬ ವಿಚಾರ ತಿಳಿದಿಲ್ಲ. ಅದೃಷ್ಟ ಇದ್ದವರು ಮಂತ್ರಿಯಾಗುತ್ತಾರೆ. ದುರಾದೃಷ್ಟ ಉಳ್ಳವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಿಂತುಕೊಳ್ಳುತ್ತಾರ ಎಂದು ಹೇಳಿದರು.
ನಮ್ಮದು ಕೂಡ ರಾಜಕೀಯ ಹಿನ್ನೆಲೆಯ ಕುಟುಂಬ. ಆದರೆ, ಸರಿಯಾದ ಗಾಡ್‌ಫಾದರ್‌ಗಳು ಇಲ್ಲ. ಇನ್ನೂ ನಕ್ಷತ್ರ ಸರಿಪಡಿಸಿಕೊಳ್ಳಲು ಪೂಜೆ, ಪುನಸ್ಕಾರ ಮಾಡುತ್ತಿದ್ದೇನೆ. ಮಂತ್ರಿಯಾಗಲೂ ಅದನ್ನೂ ಮಾಡುತ್ತಿದ್ದೇನೆ. ಮಂತ್ರಿ ಮಾಡಲು ಹಿರಿಯರು, ಕಿರಿಯರು ಎಂಬುದನ್ನು ನೋಡಬಾರದು. ಪಕ್ಷದ ನಿಷ್ಠೆಯುಳ್ಳವರಿಗೆ ಅವಕಾಶ ನೀಡಬೇಕು. ನಾನು ಕೂಡ ಹಿರಿಯ ಶಾಸಕನಾಗಿದ್ದು, ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದೇನೆ. ಮಂತ್ರಿ ಮಾಡಿದರೂ ಪಕ್ಷದಲ್ಲಿ ಇರುತ್ತೇನೆ. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೂ ಪಕ್ಷದಲ್ಲೇ ಇರುವೆ. ನಾನು ಪಕ್ಷದ ನಿಷ್ಠಾವಂತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಅವರು ಹೇಳಿದರು.