ಕಾಂಗ್ರೆಸ್ ಪಕ್ಷ ಸೇರಲು ಬಿಜೆಪಿ, ಜೆಡಿಎಸ್ ಮುಖಂಡರ ಹಿಂದೇಟು
ಬೆಂಗಳೂರು: ಉದ್ದಿಮೆ ಹಾಗೂ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ದಾಳಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಮುಂದುವರೆಸಲು ನ್ಯಾಯಾಲಯ ನೀಡಿರುವ ಆದೇಶ ಬಿಜೆಪಿ-ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಅಣಿಯಾಗಿದ್ದವರಿಗೆ ಬ್ರೇಕ್ ಹಾಕಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪ್ರಭಾವಿ ಬಿಜೆಪಿ ನಾಯಕರು ಸೇರಿದಂತೆ 16 ಮುಖಂಡರು ಕಮಲ ಹಾಗೂ ತೆನೆ ಇಳಿಸಿ ಹಸ್ತ ಲಾಘವ ಮಾಡಲು ಮುಂದಾಗಿದ್ದರು.
ಇದಕ್ಕಾಗಿ ಕಾಂಗ್ರೆಸ್ ಕಚೇರಿಯಲ್ಲಿ ಕಳೆದ ಒಂದು ವಾರದಿಂದ ಭಾರೀ ಸಿದ್ಧತೆಯೂ ನಡೆಸಲಾಗಿತ್ತು. ಆದರೆ, ಇವೆರಡೂ ಬೆಳವಣಿಗಗಳ ಕಾರಣದಿಂದ ಕಾಂಗ್ರೆಸ್ ಅಪ್ಪಿಕೋ ಚಳವಳಿಗೆ ತಡೆ ಬಿದ್ದಿದೆ.
ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮ ಮತ್ತು ಅವರ ಪತ್ರಿ ಶ್ರೀನಿವಾಸ್ ಬಿಟ್ಟರೆ ಉಳಿದ ಯಾರೂ ಹಸ್ತಲಾಘವ ಮಾಡಿಲ್ಲ. “ಪೂರ್ಣಿಮಾ ಅವರ ತಂದೆ ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿಸಿದ್ದು ನಾನೇ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಪೂರ್ಣಿಮಾ ಅವರ ಸಮಸಕ್ಷಮದಲ್ಲಿಯೇ ಒಪ್ಪೊಕೊಂಡಿದ್ದೂ ಪೂರ್ಣಿಮಾ ಅವರ ಬೆಂಬಲಿಗರಲ್ಲಿ ಕಿಡಿ ಹೊತ್ತಿಸಿದೆ.
ಸಿದ್ದರಾಮಯ್ಯ ಅವರು ತಮ್ಮ ಖಾಸಾ ಬೆಂಬಲಿಗರ ಹಿತ ಕಾತುತ್ತಾರೆಯೇ ಹೊರತು ಬೇರೆಯವರದ್ದಲ್ಲ ಎನ್ನುವ ಸಂದೇಶ ವ್ಯಾಪಕವಾಗಿ ಹರಡಿದ್ದು, ಕಾಂಗ್ರೆಸ್ ಸೇರಲು ಸಾಲಗುಗಟ್ಟಿದ್ದವರು ಈಗ ಹಿಂದೇಟು ಹಾಕುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮೊಂದಿಗೆ ವಿವಿಧ ಪಕ್ಷಗಳ ೪೦ಕ್ಕೂ ಹೆಚ್ಚು ಮುಖಂಡರು ಸಂಪರ್ಕದಲ್ಲಿದ್ದರು. ಸದ್ಯದಲ್ಲೇ ಅವರು ಬಿಜೆಪಿ-ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಆದರೆ, ಕಳೆದ 15 ದಿನಗಳಲ್ಲಿ ನಡೆದ ರಾಜಕೀಯ ತಿರುವುಗಳು ಮತ್ತು ಕೇಂದ್ರ ಬಿಜೆಪಿಯ ತಂತ್ರಗಾರಿಕೆ ಕಾಂಗ್ರೆಸ್‌ನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ.
ಕಳೆದ ಗುರುವಾರ ನಡೆದ ಪಕ್ಷ ಸೇರ್ಪಡೆ ಸಮಾರಂಭಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಸಮಯ ಮೀಸಲಿಟ್ಟು, ಎಐಸಿಸಿ ಪ್ರಧಾನ ಕಾರ್ಯದರ್ಶಿಗೂ ಆಹ್ವಾನ ನೀಡಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಪೂರ್ಣಿಮಾ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಡಿಕೆಶಿ ಭವಿಷ್ಯದ ಬಗ್ಗೆ ಚಿಂತೆ
ಬಹುತೇಕ ನಾಯಕರನ್ನು ಡಿಸಿಎಂ ಡಿಕೆಶಿಯೇ ಸಂಪರ್ಕ ಮಾಡಿದ್ದರು ಎನ್ನಲಾಗಿದೆ. ಆದರೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟು ಮೂರು ತಿಂಗಳ ಒಳಗಾಗಿ ತನಿಖೆ ಮುಗಿಸಿ ಆರೋಪ ಪಟ್ಟಿ ಸಲ್ಲಿಬೇಕು ಎಂದು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಡಿಕೆಶಿ ಕೊರಳಿಗೆ ಸುತ್ತಿಕೊಂಡರೆ ತಮ್ಮ ಪರಿಸ್ಥಿತಿ ಏನು ಎನ್ನುವ ಚಿಂತೆಯಲ್ಲಿ ಅನ್ಯಪಕ್ಷಗಳ ನಾಯಕರು ಇದ್ದಾರೆ.
ಈಗಾಗಲೇ ಚನ್ನಪಟ್ಟಣ, ರಾಮನಗರ ಸೇರಿದಂತೆ ಹಳೆಯ ಮೈಸೂರು ಭಾಗದಲ್ಲಿ ಡಿಕೆಶಿ ಆಪರೇಷನ್ ಹಸ್ತ ಮಾಡಿದ್ದಾರೆ. ಡಿಕೆಶಿಯನ್ನು ನಂಬಿಕೊಂಡು ಕಾಂಗ್ರೆಸ್ ಸೇರಿದ್ದವರ ಪರಿಸ್ಥಿತಿ ಅಡಕತ್ತರಿಯಲ್ಲಿದೆ. ಏಕೆಂದರೆ, ಅವರನ್ನು ಸಿದ್ದರಾಮಯ್ಯ ಬಣ ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿಲ್ಲ. ಕೈ ಪಕ್ಷದಲ್ಲಿಯೇ ಹಲವಾರು ಬಣಗಳು ಸೃಷ್ಟಿ ಆಗಿದ್ದು, ಅಲ್ಲಿಗೆ ವಲಸೆ ಹೋಗಿರುವವರ ಸ್ಥಿತಿ ಎಲ್ಲೂ ಸಲ್ಲದ ಹಾಗೆ ಆಗಿದೆ. ಈ ಹಿನ್ನೆಲೆ ಹೊಸದಾಗಿ ಹಸ್ತಲಾಘವಕ್ಕೆ ಉತ್ಸುಕರಾಗಿದ್ದವರು ಸದ್ಯಕ್ಕೆ ಸೈಲಂಟ್ ಆಗಿದ್ದಾರೆ.