ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ರೂ. 10 ಲಕ್ಷಕ್ಕೆ ಹೆಚ್ಚಳ; ರಾಜ್ಯೋತ್ಸವ ಕೊಡುಗೆ
ಬೆಂಗಳೂರು: ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೆ ಎಸ್ ಆರ್ ಟಿ ಸಿ ಯ ನೌಕರರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಮೊತ್ತವನ್ನು 3 ಲಕ್ಷದಿಂದ 10 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಕೆ ಎಸ್ ಆರ್ ಟಿ ಸಿ ಯಲ್ಲಿ ಸೇವೆಯಲ್ಲಿರುವಾಗ ಸಿಬ್ಬಂದಿ ಖಾಸಗಿ ಅಥವಾ ಕರ್ತವ್ಯನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆಯಡಿ ಒಂದು ಕೋಟಿ ರೂ. ಮೊತ್ತದ ಆರ್ಥಿಕ ಪರಿಹಾರ ಒದಗಿಸುತ್ತಿದೆ.
ಇಲ್ಲಿಯವರೆಗೆ 7 ಪ್ರಕರಣಗಳಲ್ಲಿ ಅಪಘಾತದಿಂದ ಮರಣ ಹೊಂದಿದ ನೌಕರರ ಅವಲಂಬಿತರಿಗೆ ತಲಾ ಒಂದು ಕೋಟಿ ರೂ.ನೀಡಲಾಗಿದೆ ಎಂದು ಕೆಎಸ್ಆರ್ ಟಿಸಿ ಪ್ರಕಟಣೆ ತಿಳಿಸಿದೆ.
ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ, ಅಂದರೆ; ಕ್ಯಾನ್ಸರ್, ಸ್ಟ್ರೋಕ್, ಹೃದಯಾಘಾತ, ಕಿಡ್ನಿ ವೈಫಲ್ಯ ಸೇರಿ ಇತರೆ ಕಾಯಿಲೆಗಳಿಂದ ಪ್ರತಿ ವರ್ಷ 100 ನೌಕರರು ಮರಣ ಹೊಂದುತ್ತಿದ್ದಾರೆ.
ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ
ಈ ರೀತಿ ತಮ್ಮ ಸೇವಾವಧಿಯಲ್ಲಿ ಮರಣ ಹೊಂದುತ್ತಿರುವ ನೌಕರರ ಕುಟುಂಬದವರು ಅನುಭವಿಸುವ ಕಷ್ಟಗಳನ್ನು ಗಮನಿಸಿ ನಿಗಮದಿಂದ ಅವರಿಗೆ ನೆರವಾಗಲು 3 ಲಕ್ಷ ರೂ. ನೀಡುತ್ತಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸದುದ್ದೇಶದಿಂದ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದಲೂ ಸಹ ಬೇಡಿಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರವನ್ನು3 ಲಕ್ಷ ರೂ.ದಿಂದ 10 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಮೃತರ ಅವಲಂಬಿತರಿಗೆ 7 ಲಕ್ಷ ರೂ.ಗಳ ಹೆಚ್ಚುವರಿ ಪರಿಹಾರದ ಮೊತ್ತ ಲಭ್ಯವಾಗುತ್ತದೆ.
ಕಾರ್ಮಿಕರ ಜೀವ ಅಮೂಲ್ಯವಾದದ್ದು, ಜೀವಕ್ಕೆ ಯಾವುದೇ ರೀತಿಯಿಂದಲೂ ಬೆಲೆ ಕಟ್ಟಲಾಗುವುದಿಲ್ಲ. ಆದರೆ ನೌಕರರು ಮರಣ ಹೊಂದಿದ್ದಾಗ ಅವರ ಅವಲಂಬಿತರಿಗೆ ಆದಷ್ಟೂ ಆರ್ಥಿಕವಾಗಿ ಸಹಾಯ ಮಾಡುವುದು ನಿಗಮದ ಸದುದ್ದೇಶವಾಗಿದೆ.
ಕೆ ಎಸ್ ಆರ್ ಟಿ ಸಿ
ಈ ಯೋಜನೆಗೆ ನೌಕರರ ಮಾಸಿಕ ವಂತಿಕೆಯನ್ನು ಪ್ರಸ್ತುತ 100 ರೂ.ನಿಂದ 200 ರೂ.ಗಳಿಗೆ ಹಾಗೂ ನಿಗಮದ ವತಿಯಿಂದ ಪ್ರತಿ ನೌಕರರ ಪರವಾಗಿ ನೀಡಲಾಗುತ್ತಿರುವ 50 ರೂ.ಗಳ ವಂತಿಗೆಯನ್ನು 100 ರೂ.ಗಳಿಗೆ ಪರಿಷ್ಕರಿಸಲಾಗಿದೆ. ಪರಿಷ್ಕೃತ ಆದೇಶವು ದಿನಾಂಕ: 01.11.2023ರಿಂದ ಜಾರಿಗೆ ಬರಲಿದೆ. ಈ ದಿನಾಂಕದ ನಂತರದಲ್ಲಿ ಉಂಟಾಗುವ ಮರಣ ಪ್ರಕರಣಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.