ಗೃಹಜ್ಯೋತಿ ಗಾಳಿಯಲ್ಲಿ ದೀಪದಂತೆ ಆರಿ ಹೋಗಿದೆ!
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ಸಿನಿಂದ ಕಮಿಷನ್ ಕುಂಭಮೇಳ ಎಂದ BRS
ತೆಲಂಗಾಣದಲ್ಲಿ ಕಾಂಗ್ರೆಸ್ಸಿಗೆ ಮುಳುವಾಗಲಿದೆಯಾ ಕರ್ನಾಟಕ ಮಾದರಿ?; ಪ್ರಚಾರಕ್ಕೆ ಕೆಪಿಸಿಸಿ ಲೀಡರುಗಳೇ ಬೇಡವೆನ್ನುತ್ತಿರುವ ನಾಯಕರು
ಹೈದರಾಬಾದ್: ಕರ್ನಾಟಕದ ಮಾದರಿಯಿಂದ ಬೀಗುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ನೆರೆಯ ತೆಲಂಗಾಣದಲ್ಲಿ ಈ ಮಾದರಿಯೇ ತಿರುಗುಬಾಣವಾಗುವ ಸಾಧ್ಯತೆ ನಿಶ್ಚಳವಾಗಿದೆ.
ಇದಕ್ಕೆ 3 ಪ್ರಮುಖ ಅಂಶಗಳನ್ನು ಗುರುತಿಸಲಾಗಿದ್ದು, ಈ ಅಂಶಗಳ ಬಗ್ಗೆ ತೆಲಂಗಾಣ ಚುನಾವಣಾ ರಾಜಕೀಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
1.ಕರ್ನಾಟಕದಲ್ಲಿ ಗ್ಯಾರಂಟಿಗಳ ಅಸಮರ್ಪಕ ಜಾರಿ
2.ಇತ್ತೀಚೆಗೆ ನಡೆದ ಆದಾಯ ತೆರಿಗೆ ದಾಳಿ
3.ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟ ಕರ್ನಾಟಕ ಹೈಕೋರ್ಟ್
ಈ 3 ಅಂಶಗಳನ್ನು ಇಟ್ಟುಕೊಂಡೇ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ನೇತೃತ್ವದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (BRS), ಕಾಂಗ್ರೆಸ್ ವಿರುದ್ಧ ಬಿರುಸಿನ ಪ್ರಚಾರ ನಡೆಸುತ್ತಿದೆ.
ಕರ್ನಾಟಕದಲ್ಲಿ ಚುನಾವಣೆ ತಂತ್ರಗಾರಿಕೆ ಮಾಡಿದ್ದ ತಂಡಗಳನ್ನೇ ತೆಲಂಗಾಣಕ್ಕೂ ಕಳಿಸಿದ್ದ ಕಾಂಗ್ರೆಸ್, ಇದೀಗ ಗ್ಯಾರಂಟಿಗಳ ಹೆಸರೇಳದ ಸಂಕಷ್ಟಕ್ಕೆ ಸಿಲುಕಿ ಚಡಪಡಿಸುತ್ತಿದೆ.
ಅಷ್ಟೇ ಅಲ್ಲ, ಪ್ರಚಾರಕ್ಕೆ ಕರ್ನಾಟಕದ ನಾಯಕರನ್ನು ಸಾಲು ಸಾಲಾಗಿ ಕರೆತರುತ್ತಿದ್ದ ತೆಲಂಗಾಣ ಕಾಂಗ್ರೆಸ್ ಪಕ್ಷಕ್ಕೆ ಅದೇ ದೊಡ್ಡ ಫಜೀತಿಯಾಗಿ ಪರಿಣಮಿಸಿದೆ. ಕೆಲ ಹಿರಿಯ ನಾಯಕರಂತೂ ಪ್ರಚಾರಕ್ಕೆ ಕರ್ನಾಟಕದ ನಾಯಕರು ಬೇಡ ಎಂದು ಸಲಹೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಲೇವಡಿಯ ಸರಕಾದ ಗೃಹಜ್ಯೋತಿ!!
ಕರ್ನಾಟಕದಲ್ಲಿ ಪ್ರತಿ ಮನೆಗೆ 200 ಯುನಿಟ್ ಫ್ರೀ ಎಂದು ಘೋಷಿಸಿದ್ದ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬಂದ ಮೇಲೆ ಷರತ್ತುಬದ್ಧ ಗೃಹಜ್ಯೋತಿ ಸೌಲಭ್ಯ ಕೊಟ್ಟು, ಸರಾಸರಿ ಲೆಕ್ಕದಲ್ಲಿ 200 ಯುನಿಟ್ ಗೂ ಹೆಚ್ಚು ವಿದ್ಯುತ್ ಬಳಕೆ ಮಾಡುವ ಕುಟುಂಬಗಳಿಗೆ ತಲಾ ಯುನಿಟ್ ಗೆ 7 ರೂ. ದರದ ವ್ಯಾಪ್ತಿಗೆ ತಂದಿರುವ ವಿಷಯವನ್ನೇ BRS ಪಕ್ಷ ಒತ್ತು ಕೊಟ್ಟು ಪ್ರಚಾರ ಮಾಡುತ್ತಿದೆ.
ನಾಕು ಪ್ರೀ, ನೀಕು ಫ್ರೀ.. (ನಂಗೂ ಫ್ರೀ, ನಿಂಗೂ ಫ್ರೀ) ಎನ್ನುವ ಸಿದ್ಧರಾಮಯ್ಯ ಅವರ ಹಳೆಯ ಡೈಲಾಗ್ ತೆಲಂಗಾಣದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗುತ್ತಿದೆ.
ಜತೆಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಸಮಸ್ಯೆ ಹಿಂದೆಂದೂ ಕಾಣದಷ್ಟು ಬಿಗಡಾಯಿಸಿದ್ದು, ರಾಜ್ಯದಲ್ಲಿ ಜಾರಿಯಲ್ಲಿರುವ ಅಘೋಷಿತ ಲೋಡ್ ಶೆಡ್ಡಿಂಗ್ ಬಗ್ಗೆ BRS ಲೇವಡಿ ಮಾಡುತ್ತಿದೆ.
ರೈತರಿಗೆ ದಿನ್ಕಕೆ 5 ಗಂಟೆ ವಿದ್ಯುತ್ ಒದಗಿಸುತ್ತಿರುವುದನ್ನೇ ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಿರುವ ಕರ್ನಾಟಕದ ಕೈ ಪಕ್ಷಕ್ಕೆ ಟಾಂಗ್ ಕೊಟ್ಟಿರುವ BRS; ಇಡೀ ದಿನ, ಅಂದರೆ 24 ಗಂಟೆಯೂ ರೈತರಿಗೆ ತಾನು ಕೊಡುತ್ತಿರುವ ಉಚಿತ ವಿದ್ಯುತ್ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸುತ್ತಿದೆ.
“ಕೃಷಿಗೆ 5 ಗಂಟೆ ಮಾತ್ರ ವಿದ್ಯುತ್ ಕೊಡುವ ಕಾಂಗ್ರೆಸ್ ಪಕ್ಷ ಬೇಕಾ? ಇಡೀ 24 ಗಂಟೆ ಉಚಿತ ವಿದ್ಯುತ್ ಪೂರೈಕೆ ಮಾಡುವ ಪಾರ್ಟಿ ಬೇಕಾ?” ಎಂದು ಜನರನ್ನು ಕೇಳುತ್ತಿದೆ.
ಅಲ್ಲದೆ; ಕರ್ನಾಟಕದಲ್ಲಿ ಸರಕಾರದ ವಿದ್ಯುತ್ ಖರೀದಿ ಬಗ್ಗೆ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಪಕ್ಷಗಳು ಮಾಡುತ್ತಿರುವ ಆರೋಪಗಳ ಬಗ್ಗೆಯೂ BRS ದೊಡ್ಡ ದನಿಯಲ್ಲಿ ಮಾತನಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಉತ್ತರ ನೀಡುವುದು ಕಷ್ಟವಾಗಿದೆ. ಪ್ರಚಾರಕ್ಕೆ ಕರ್ನಾಟಕದ ನಾಯಕರು ಬೇಡವೇ ಬೇಡ ಎನ್ನುವ ಸ್ಥಿತಿಗೆ ಬಂದು ತಲುಪಿದೆ.
BRS ಗೆ ಬೆಲ್ಲವಾದ ಡಿಕೆಶಿ ಹೇಳಿಕೆ
ಕಳೆದ ಹಲವು ದಿನಗಳಿಂದ ತೆಲಂಗಾಣದಲ್ಲಿ ಆ ರಾಜ್ಯದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಜತೆ ಅನೇಕ ಪ್ರದೇಶಗಳಲ್ಲಿ ಪ್ರಚಾರ ನಡೆಸಿರುವ ಕರ್ನಾಟಕದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು; ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ದಿನಕ್ಕೆ 5 ತಾಸು ವಿದ್ಯುತ್ ಪೂರೈಸಲಾಗುವುದು ಎಂಬ ಹೇಳಿಕೆ ಸ್ವತಃ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಕೊಡುವ ಸಾಧ್ಯತೆ ಇದೆ.
ಆ ರಾಜ್ಯದ ಹಲವಾರು ನಾಯಕರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕರ್ನಾಟಕದ ಮಾದರಿ ನಮ್ಮ ಮನೆ ಮುಳುಗಿಸಬಹುದು ಎಂದು ಕಳವಳಗೊಂಡಿದ್ದಾರೆ. ಈ ಹೇಳಿಕೆ BRS ಪಕ್ಷಕ್ಕೆ ಬೆಲ್ಲದಂತೆ ಸಿಕ್ಕಿದೆ.
ಕಳೆದ 10 ವರ್ಷಗಳಿಂದ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕೆಸಿಆರ್, ಈಗಾಗಲೇ ನೀರಾವರಿ, ಕೃಷಿ ಹಾಗೂ ವಿದ್ಯುತ್ ಗೆ ಸಂಬಂಧಪಟ್ಟ ಬಹುತೇಕ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಅವರು ಜಾರಿ ಮಾಡಿರುವ ರೈತಬಂಧು ಯೋಜನೆಯನ್ನು ಅವರ ವಿರೋಧಿಗಳೂ ಮೆಚ್ಚುತ್ತಾರೆ.
ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಬಿಜೆಪಿ, ಎಲ್ಲಿ ಜೆಡಿಎಸ್ ಜತೆ ಸಖ್ಯ ಬೆಳೆಸಿ ತನಗೆ ಎಲ್ಲಿ ಹೊಡೆತ ಕೊಡುತ್ತದೋ ಎಂಬ ಕಾರಣಕ್ಕೆ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿ, ಉಚಿತ ಕಾರ್ಯಕ್ರಮಗಳ ಮೂಲಕ ದಡ ಸೇರಿತ್ತು. ಆದರೆ; ಇಂತಹ ಉಚಿತ ಕಾರ್ಯಕ್ರಮಗಳಿಗೆ ತೆಲಂಗಾಣದಲ್ಲಿ ಜನ ಮಾರುಹೋಗುವ ಸಾಧ್ಯತೆ ಅತಿ ಕಡಿಮೆ ಎಂದು ಖ್ಯಾತ ಚುನಾವಣಾ ತಂತ್ರಗಾರರೊಬ್ಬರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ಡಿಕೆಶಿ ಅವರು ಕೊಟ್ಟ 5 ಗಂಟೆಗಳ ವಿದ್ಯುತ್ ಪೂರೈಕೆಯ ಹೇಳಿಕೆ ತೆಲಂಗಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದೆ. ಪ್ರತಿ ಪ್ರಚಾರ ಸಭೆಯಲ್ಲೂ ಈ ಹೇಳಿಕೆಯನ್ನೇ ಪದೇಪದೆ ಹೇಳುತ್ತಿರುವ ಕೆಸಿಆರ್; 5 ತಾಸು ವಿದ್ಯುತ್ ಕೊಡುವ ಕಾಂಗ್ರೆಸ್ ಬೇಕೋ? ಇಲ್ಲವೇ 24 ಗಂಟೆ ಉಚಿತ ವಿದ್ಯುತ್ ಪೂರೈಸುವ BRS ಬೇಕೋ? ಎಂದು ಕೇಳುತ್ತಿದ್ದಾರೆ.
ಗ್ಯಾರಂಟಿಗಳ ಅಸಮರ್ಪಕ ಜಾರಿ, BRS ಗೆ ವರ
ಗೃಹಜ್ಯೋತಿಯ ಜತೆಗೆ ಕರ್ನಾಟಕದಲ್ಲಿ ಜಾರಿ ಮಾಡಲಾಗಿರುವ ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿ ಗ್ಯಾರಂಟಿಗಳ ವೈಫಲ್ಯವನ್ನು BRS ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದೆ.
ಇನ್ನೊಂದೆಡೆ; ಕರ್ನಾಟಕದಲ್ಲಿ ನಡೆದ ಆದಾಯ ತೆರಿಗೆ ದಾಳಿ ತೆಲಂಗಾಣ ಚುನಾವಣೆಯಲ್ಲಿ ಹಾಟ್ ಟಾಪಿಕ್ ಆಗಿದೆ. ತೆಲಂಗಾಣದಲ್ಲಿ ಮತದಾರರಿಗೆ ಹಂಚಲು ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಸರಕಾರಿ ಗುತ್ತಿಗೆದಾರರು, ಆಭರಣ ವ್ಯಾಪಾರಿಗಳು, ಅಧಿಕಾರಿಗಳಿಂದ ಹಣ ವಸೂಲಿ ಮಾಡಿ ಸಾಗಿಸಲು ಹೊಂಚು ಹಾಕಿತ್ತು ಎಂದು ಬಿಆರ್ ಎಸ್ ನಾಯಕರು ಪ್ರತಿ ಸಭೆಯಲ್ಲೂ ಹೇಳುತ್ತಿದ್ದಾರೆ.
ಅಲ್ಲದೆ; ತೆಲಂಗಾಣದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ಡಿ.ಕೆ.ಶಿವಕುಮಾರ್ ಅವರನ್ನೇ ಬಿಆರ್ ಎಸ್ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಕೆಸಿಆರ್ ಪಾಲಿಗೆ ಅವರೇ ಬಿಗ್ ಟಾರ್ಗೆಟ್ ಆಗಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅವರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕರ್ನಾಟಕದ ಹೈಕೋರ್ಟ್ ಆದೇಶ ನೀಡಿದೆ. ತನಿಖೆಗೆ ಮೂರು ತಿಂಗಳು ಗಡುವು ವಿಧಿಸಿ ಆದೇಶಿಸಿದೆ. ಇಂಥಹ ವ್ಯಕ್ತಿ ತೆಲಂಗಾಣಕ್ಕೆ ಬಂದು ಪ್ರಚಾರ ನಡೆಸುತ್ತಿರುವುದು ಇನ್ನೊಂದು ಲೂಟಿಕೋರ ಸರಕಾರವನ್ನು ಅಧಿಕಾರಕ್ಕೆ ತರುವುದಕ್ಕಾಗಿಯೇ ಎಂದು ಕೆ.ಚಂದ್ರಶೇಖರ್ ರಾವ್ ಹೇಳುತ್ತಿದ್ದಾರೆ.
ಡಿಕೆಶಿಯೇ BRS ಬಿಗ್ ಟಾರ್ಗೆಟ್
ರೈತರಿಗೆ 24 ಗಂಟೆಗಳ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಅದು ವ್ಯರ್ಥ ಎನ್ನುತ್ತಿದ್ದಾರೆ. ಕೇವಲ 3 ಗಂಟೆ ಫ್ರೀ ವಿದ್ಯುತ್ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ. ಇನ್ನು, ರೈತಬಂಧು ಯೋಜನೆಯೂ ಹೊರೆ ಎನ್ನುತ್ತಿದ್ದಾರೆ. ರೈತರಿಗೆ 3 ಗಂಟೆ ವಿದ್ಯುತ್ ಸಾಕಾ? ಅಥವಾ ದಿನಪೂರ್ತಿ ಉಚಿತ ವಿದ್ಯುತ್ ಕೊಡುವ ಪಕ್ಷ ಬೇಕಾ?
ಕೆ.ಚಂದ್ರಶೇಖರ್ ರಾವ್
ಡಿಕೆಶಿ ವಿರುದ್ಧ ಸರಣೆ ಟೀಕೆ & ಟ್ವೀಟ್
ಇನ್ನು, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ BRS ಪಕ್ಷದ ಭಾರೀ ಪ್ರಮಾಣದಲ್ಲಿ ಟೀಕಾಪ್ರಹಾರ ನಡೆಸುತ್ತಿದೆ. ಅದರ ಒಂದು ಸ್ಯಾಂಪಲ್ ಇಲ್ಲಿದೆ;
“ಡಿಕೆ ಸರ್…
ಕರ್ನಾಟಕದ ದುಸ್ಥಿತಿ ನೋಡಿದ ತೆಲಂಗಾಣ ಜನತೆಗೆ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ಕತ್ತಲಾಗಲಿದೆ ಎಂದು ಅರ್ಥವಾಯಿತು. ದೇಶದಲ್ಲಿ ಎಲ್ಲಿಯೂ ಇಲ್ಲದ ರೀತಿಯಲ್ಲಿ ರೈತರಿಗೆ 24 ಗಂಟೆ ಉಚಿತ ವಿದ್ಯುತ್ ನೀಡುತ್ತಿರುವ ತೆಲಂಗಾಣಕ್ಕೆ ಬಂದು ಕರ್ನಾಟಕದಲ್ಲಿ 5 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದು ನಿಮ್ಮ ಅಸಮರ್ಥತೆಯನ್ನು ತೋರಿಸುತ್ತದೆ.
ನಿಮ್ಮ ವೈಫಲ್ಯಗಳನ್ನು ನೋಡಲು ಕರ್ನಾಟಕದವರೆಗೂ ಹೋಗಬೇಕಾಗಿಲ್ಲ. ನಿಮ್ಮ ಕೈಗೆ ಸಿಕ್ಕ ರೈತರು ಇಲ್ಲಿಗೆ ಬಂದು ನಿಮ್ಮಿಂದ ಆಗಿರುವ ಅನ್ಯಾಯವನ್ನು ವಿವರಿಸುತ್ತಿದ್ದಾರೆ. ತೆಲಂಗಾಣ ರೈತರಿಗೆ ಕಾಂಗ್ರೆಸ್ ನಿಂದ ಅಪಾಯದ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಒಂದೆಡೆ ಕರ್ನಾಟಕದ ಜನತೆ ಕ್ಯಾರೇ ಎನ್ನದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೆಲಂಗಾಣದಲ್ಲಿ ಮತ ಬೇಟೆ ನಡೆಸಿದ್ದೀರಾ?
ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಉಲ್ಲಂಘಿಸಿದ್ದನ್ನು ಕರ್ನಾಟಕದ ಜನತೆ ಕ್ಷಮಿಸುವುದಿಲ್ಲ. ತೆಲಂಗಾಣದ ಜನರು ನಂಬುವುದಿಲ್ಲ. ಚುನಾವಣಾ ಪ್ರಚಾರದಲ್ಲಿ ಐದು ಭರವಸೆಗಳನ್ನು ಅಂಗೈಯಲ್ಲಿ ತೋರಿಸಲಾಗಿದೆ. ತೀರಾ ಅಧಿಕಾರಕ್ಕೇರಿದ ನಂತರ ಸವಾಲಿನ ಕೊರತೆಯಿಂದ ಜನರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ.
ನಿಮ್ಮ ಗೃಹಜ್ಯೋತಿ ಯೋಜನೆ ಗಾಳಿಯಲ್ಲಿ ದೀಪದಂತೆ ಆರಿ ಹೋಗಿದೆ. ಎಲ್ಲೆಲ್ಲೂ ಕರೆಂಟ್ ಕಟ್ ಆಗಿ ಕರ್ನಾಟಕ ಕತ್ತಲ ಸಾಮ್ರಾಜ್ಯವಾಗಿ ಮಾರ್ಪಟ್ಟಿದೆ. ಐದು ಗಂಟೆಯಾದರೂ ವಿದ್ಯುತ್ ಇಲ್ಲ ಅಥವಾ ರೈತರಿಲ್ಲ. ವಾಣಿಜ್ಯೋದ್ಯಮಗಳೂ ಸಂಕಷ್ಟದಲ್ಲಿವೆ.
ನಿಮ್ಮ ಅನ್ನಭಾಗ್ಯ ಯೋಜನೆ ಸಂಪೂರ್ಣ ಹದಗೆಟ್ಟಿದೆ. ಕನಿಷ್ಠ ಪಡಿತರ ಅಕ್ಕಿ ಕೊಡಲು ಸಾಧ್ಯವಾಗದ ನಿಮ್ಮ ಕಾಂಗ್ರೆಸ್ ಸರಕಾರ ಅಣ್ಣನೋ ರಾಮಚಂದ್ರನೋ ತಪ್ಪುಗಳಿಂದ ಅಲ್ಲಿನ ಜನ ತತ್ತರಿಸುತ್ತಿದ್ದಾರೆ. ಪಡಿತರ ಮೇಲೂ ಸಣ್ಣ ಅಕ್ಕಿ ಕೊಡುವ ನಮ್ಮ ಸಂಕಲ್ಪಕ್ಕೂ ವ್ಯತ್ಯಾಸವಿದೆ. ತೆಲಂಗಾಣ ಸಮಾಜ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದೆ.
ಮಹಿಳೆಯರಿಗೆ ಉಚಿತ ಪ್ರಯಾಣದ ನೆಪದಲ್ಲಿ ಇಡೀ ಕರ್ನಾಟಕ ಆರ್ ಟಿಸಿಯನ್ನು ದಿವಾಳಿ ಮಾಡುವ ನೀತಿ ಜನರಿಗಷ್ಟೇ ಅಲ್ಲ ಅಲ್ಲಿನ ಉದ್ಯೋಗಿಗಳಿಗೂ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಉಪಕೇಂದ್ರಗಳಲ್ಲಿ ಮೊಸಳೆಯೊಂದಿಗೆ ಪ್ರತಿಭಟನೆ..ವಿದ್ಯುತ್ ಗಾಗಿ ರೈತರು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವುದು ಕಾಂಗ್ರೆಸ್ ನ ಘೋರ ಆಡಳಿತ ವೈಫಲ್ಯಕ್ಕೆ ಜೀವಂತ ಸಾಕ್ಷಿ.
ಮಹಿಳೆಯರ ಖಾತೆಗೆ ಹಣ ಹಾಕುವ ನಿಮ್ಮ ಗೃಹ ಲಕ್ಷ್ಮಿ ಭರವಸೆಗೂ ಗ್ರಹಣ ಹಿಡಿದಿದೆ. ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಜಮಾ ಮಾಡುವುದಾಗಿ ಪ್ರಧಾನಿ ನೀಡಿದ ಭರವಸೆಯಂತೆ ನಿಮ್ಮ ಭರವಸೆಯೂ ನೀರು ಪಾಲಾಗಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಕಮಿಷನ್ ಗಳ ಕುಂಭಮೇಳಕ್ಕೆ ತೆರೆ ಎಳೆದ ಕಾಂಗ್ರೆಸ್ ನ ಭ್ರಷ್ಟಾಚಾರದಿಂದ ತೆಲಂಗಾಣ ಸಮಾಜ ರೋಸಿಹೋಗಿದೆ.
ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಬಿಕ್ಕಟ್ಟು ತೆರೆದಿರುವ ಕಾಂಗ್ರೆಸ್ ಅನ್ನು ನಂಬಿ ಮೋಸಹೋಗಲು ನಮ್ಮ ಜನ ಸಿದ್ಧರಿಲ್ಲ. ಯಾಕೆಂದರೆ.. ಇದು ತೆಲಂಗಾಣದ ನಾಡು.. ಅರಿವಿಗೆ ಅಡ್ಡಿ.“
ಈ ಟ್ವೀಟನ್ನು BRS ಕನ್ನಡ ಮತ್ತು ತೆಲುಗಿನಲ್ಲಿ ಮಾಡಿದೆ. ಅಲ್ಲದೆ, ಆ ಪಕ್ಷದ ನಾಯಕರಾದ ಕೆಸಿಆರ್, ಕೆಟಿಆರ್, ಹರೀಶ್ ರಾವ್ ಸೇರಿದಂತೆ ಅನೇಕರು ಕರ್ನಾಟಕ ಕಾಂಗ್ರೆಸ್ ಕಡೆಗೇ ತಮ್ಮ ಬಾಣಗಳನ್ನು ಪ್ರಯೋಗಿಸುತ್ತಿದ್ದಾರೆ. ಅದರಲ್ಲೂ ಡಿ.ಕೆ.ಶಿವಕುಮಾರ್ ಅವರೇ ಗುರಿ ಆಗುತ್ತಿದ್ದಾರೆ.
ತೆಲಂಗಾಣ ಚುನಾವಣೆಗೆ ಕರ್ನಾಟಕದಿಂದ 1500 ಕೋಟಿ ಕಮೀಷನ್ ಹಣ; ಬಿಆರ್‌ಎಸ್ ಆರೋಪ
Comments 1