ಸದ್ಯಕ್ಕೆ ನಾನೇ ಸಿಎಂ, ಐದು ವರ್ಷ ಸಿಎಂ ಆಗಿ ನಾನೇ ಮುಂದುವರಿಯುತ್ತೇನೆ ಎಂದ ಸಿದ್ದು; ಹೈಕಮಾಂಡ್ ಎಚ್ಚರಿಕೆಗೆ ಸ್ವತಃ ಮುಖ್ಯಮಂತ್ರಿಯಿಂದಲೇ ಎಳ್ಳುನೀರು
ಬೆಂಗಳೂರು: ಶತಾಯಗತಾಯ ಸಿಎಂ ಆಗಲೇಬೇಕು ಎಂದು ಹೊರಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಕ್ ಕೊಟ್ಟಿರುವ ಸಿದ್ದರಾಮಯ್ಯ ಅವರು; ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಗುಡುಗಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡುತ್ತಿದ್ದಂತೆಯೇ ಡಿಕೆಶಿ ಪಾಳೆಯ ಬೆಚ್ಚಿಬಿದ್ದಿದೆ. ಹೇಗಾದರೂ ಮಾಡಿ ಆಪರೇಷನ್ ಹಸ್ತ ಮಾಡಿ ಸಿಎಂ ಆಗಲೇಬೇಕು ಎಂದು ಪಣ ತೊಟ್ಟಿದ್ದ ಡಿಸಿಎಂ ಆಘಾತಕ್ಕೆ ಒಳಗಾಗಿದ್ದು, ಅವರ ಹಿಂಬಾಲಕರು ದಿಗ್ಭ್ರಮೆಗೊಂಡಿದ್ದಾರೆ.
ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಯಾರು ಮಾತನಾಡುವಂತಿಲ್ಲ. ನಿಮ್ಮ ನಿಮ್ಮ ಬೆಂಬಲಿಗರಿಗೆ ನೀವೇ ತಾಕೀತು ಮಾಡಿ ಎಂದು ಹೈಕಮಾಂಡ್ ಕಟ್ಟಪ್ಪಣೆ ಮಾಡಿದ ಮರುದಿನವೇ ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಸಿಎಂ ಎಂದು ಗುಡುಗಿದ್ದಾರೆ.
ಅಲ್ಲಿಗೆ, ನಿನ್ನೆಯ ದಿನ ಪಂಚತಾರಾ ಹೋಟೆಲಿನಲ್ಲಿ ಗೌಪ್ಯ ಸಭೆ ನಡೆಸಿ ಶಿಸ್ತಿನ ಪಾಠ ಮಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಂದೀಪ್ ಸುರ್ಜೆಕಾಲ ಅವರ ಕಟ್ಟಪ್ಪಣೆಯನ್ನು ಸ್ವತಃ ಸಿಎಂ ಅವರೇ ಕಾಲ ಕಸದಂತೆ ಪಕ್ಕಕ್ಕೆ ತೂರಿದ್ದಾರೆ.
ಹೈಕಮಾಂಡ್ ಎಚ್ಚರಿಕೆ ನಡುವೆಯೂ ಸಿದ್ದರಾಮಯ್ಯ ಅವರ ಇಂಥ ಹೇಳಿಕೆ ನೀಡಿದ್ದೇಕೆ? ಇದರಲ್ಲಿಯೂ ದಿಲ್ಲಿ ಕುಳಗಳ ಕೈವಾಡ ಇದೆಯಾ? ಎನ್ನುವ ಅನುಮಾನ ಡಿಕೆಶಿ ಬಣವನ್ನು ಕಾಡುತ್ತಿದೆ.ಸಿಎಂ ಕೊಟ್ಟಿರುವ ಹೇಳಿಕೆ ಕಾಂಗ್ರೆಸ್ ನಲ್ಲಿ ತೀವ್ರ ತಳಮಳ ಉಂಟು ಮಾಡಿದೆ.
ಸಿದ್ದರಾಮಯ್ಯ ಅವರ ಪಾಳೆಯದಲ್ಲಿ ಯುದ್ಧ ಗೆದ್ದ ಸಂಭ್ರಮ ಇದ್ದರೆ, ಡಿ.ಕೆ.ಶಿವಕುಮಾರ್ ಅವರ ಗುಂಪಿನಲ್ಲಿ ಮುಂದೇನು? ಎನ್ನುವ ಗಾಢ ಚಿಂತೆ ಶುರುವಾಗಿದೆ. ಸಿಎಂ ವಿರುದ್ಧ ಹೈಕಮಾಂಡ್ ಗೆ ದೂರು ನೀಡುವುದಾ? ಅಥವಾ ರಾಜಕೀಯವಾಗಿ ಬೇರೆ ಹೆಜ್ಜೆ ಇಡುವುದಾ? ಎನ್ನುವ ಚರ್ಚೆ ಶುರುವಾಗಿದೆ ಎಂದು ಉನ್ನತ ಮೂಲವೊಂದು ತಿಳಿಸಿದೆ.
ಇನ್ನೊಂದೆಡೆ, ಅಧಿಕಾರ ಕೈ ಚೆಲ್ಲುವ ಪ್ರಶ್ನೆಯೇ ಇಲ್ಲ ಎಂದು ಡಿಕೆಶಿ ಗುಂಪು ಗುಟುರು ಹಾಕುತ್ತಿದೆ. ನ್ಯಾಯಯುತವಾಗಿ ಡಿಕೆಶಿ ಅವರಿಗೆ ಸಿಗಬೇಕಿದ್ದ ಅಧಿಕಾರವನ್ನು ಸಿದ್ದರಾಮಯ್ಯ ಹೈಜಾಕ್ ಮಾಡಿದ್ದಾರೆ ಎಂದು ಆ ಬಣ ಭುಸುಗುಡುತ್ತಿದೆ.
ಅಧಿಕಾರ ಹಂಚಿಕೆ ವಿಚಾರಕ್ಕೆ ತೆರೆಯೇ?
ಸಿದ್ದರಾಮಯ್ಯ ಅವರ ಹೇಳಿಕೆ ಎರಡೂವರೆ ವರ್ಷದ ಬಳಿಕ ಅಧಿಕಾರ ಹಂಚಿಕೆ ವಿಚಾರಕ್ಕೆ ತೆರೆ ಎಳೆದಂತೆಯೇ ಆಗಿದೆಯಾ? ಎನ್ನುವ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ಶುರುವಾಗಿದೆ. ಅಥವಾ, ಡಿಕೆಶಿ ಅವರಿಗೆ ಸರಕಾರ ನಡೆಸುವಷ್ಟು ವ್ಯವಧಾನ, ತಾಳ್ಮೆ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಹನೆ ಇಲ್ಲವೆಂಬ ಕಾರಣ ಮುಂದೊಡ್ಡಿ ಕಾಂಗ್ರೆಸ್ ವರಿಷ್ಠ ನಾಯಕರೇ ಸಿದ್ದರಾಮಯ್ಯ ಅವರಿಗೆ ಪೂರ್ಣ ಅವಧಿಯ ಅಧಿಕಾರ ನೀಡಲು ಒಪ್ಪಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದೆ.
ಸದ್ಯಕ್ಕೆ ಕೈ ಪಾಳೆಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕೂಲಂಕಶವಾಗಿ ಗಮನಿಸಿದರೆ ಇದೇ ನಿಜ ಎನ್ನುವಂತೆ ಕಾಣುತ್ತಿದೆ.ಹೈಕಮಾಂಡ್ ನಲ್ಲಿಯೇ ಬಣ ರಾಜಕೀಯಹೈಕಮಾಂಡ್ ನಲ್ಲಿಯೇ ಕರ್ನಾಟಕಕ್ಕೆ ಸಂಬಂಧಿಸಿ ಬಣ ರಾಜಕೀಯ ನಡೆಯುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ.
ಪ್ರಧಾನ ಕಾರ್ಯದರ್ಶಿಗಳ ಪೈಕಿ ಯಾರ ಒಲವು ಯಾರ ಕಡೆಗಿದೆ ಎನ್ನುವುದು, ಗಾಂಧಿ ಕುಟುಂಬದಲ್ಲಿ ಸಿದ್ದರಾಮಯ್ಯ ಪರ ಯಾರು? ಡಿಕೆಶಿ ಪರ ಯಾರು? ಎನ್ನುವ ಸ್ಪಷ್ಟ ಮಾಹಿತಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಇದ್ದೇ ಇದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಇದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಅವರ ವಿರೋಧಿ ನಿಲುವು ಹೊಂದಿದ್ದರೂ ಅವರ ಮಾತಿಗೆ ಗಾಂಧಿ ಮನೆಯಲ್ಲಿ ಕಿಮ್ಮತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ ಎನ್ನುವ ವರದಿಗಳು ಸತ್ಯಕ್ಕೆ ಹತ್ತಿರವಾಗಿವೆ.
ಹೆಚ್ಚುವರಿ ಡಿಸಿಎಂ ಸೃಷ್ಟಿ ಉದ್ದೇಶ
ಸಿದ್ದರಾಮಯ್ಯ ಅವರು ಅಳೆದುಸುರಿದು ತಮ್ಮ ವಿರೋಧಿಗಳಿಗೆ ವಿಜಯನಗರದಲ್ಲಿ ತಿರುಗೇಟು ಕೊಟ್ಟಿದ್ದಾರೆ. ಅಧಿಕಾರ ಹಂಚಿಕೆಯ ಬಗ್ಗೆ ಡಿಕೆಶಿ ಬಣದಲ್ಲಿ ಶಾಸಕರು ಬಹಿರಂಗವಾಗಿಯೇ ಮಾತನಾಡುತ್ತಿರುವುದು ಅವರಿಗೆ ಇರಿಸುಮುರಿಸು ಉಂಟು ಮಾಡಿದೆ.
ಮೊದಲ ಸಲ ವಿಧಾನಸಭೆ ಪ್ರವೇಶ ಮಾಡಿರುವ ಮಂಡ್ಯ ಶಾಸಕ ರಮೇಶ್ ಗಣಿಗ, ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಅವರು ಎರಡೂವರೆ ವರ್ಷದ ನಂತರ ಡಿಕೆಶಿ ಸಿಎಂ ಆಗುತ್ತಾರೆ, ಅವರ ಬೆಂಬಲಿಗ ಶಾಸಕರೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದ್ದರು. ಇದು ಸಿದ್ದರಾಮಯ್ಯ ಪಾಳೆಯವನ್ನು ಕೆರಳಿಸಿತ್ತು.
ಈ ತರುಣ ಶಾಸಕರ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಬೆಂಬಲಿಗ ಸಚಿವರು, ಶಾಸಕರು ಸಿಎಂ ಕುರ್ಚಿ ಖಾಲಿ ಇಲ್ಲ. ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ತಿರುಗೇಟು ಕೊಟ್ಟಿದ್ದರು. ಇದು ಎರಡೂ ಬಣಗಳ ನಡುವೆ ನಡುವೆ ಮಾತಿನ ಯುದ್ಧಕ್ಕೆ ಕಾರಣ ಆಗಿತ್ತು. ಒಂದು ಹಂತದಲ್ಲಿ ಸಿಟ್ಟಾದ ಡಿ.ಕೆ.ಶಿವಕುಮಾರ್ ಅವರು, ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಗುಡುಗಿದ್ದರು.
ಡಿಸಿಎಂ ಹುದ್ದೆಗಳ ರಾಜಕೀಯ
ಬಹಳ ದಿನಗಳ ಹಿಂದೆಯೇ ಸಹಕಾರ ಸಚಿವ, ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಸಚಿವ ಕೆ.ಎನ್.ರಾಜಣ್ಣ ಇನ್ನೂ ಡಿಸಿಎಂ ಹುದ್ದೆಗಳನ್ನು ಸೃಷ್ಟಿ ಮಾಡಬೇಕು. ಜಾತಿಗೊಬ್ಬರಿಗೆ ಆ ಹುದ್ದೆ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಆಗಲೂ ಸಿಎಂ, ಡಿಸಿಎಂ ಬಣಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಷ್ಟಾದರೂ ಸಿದ್ದರಾಮಯ್ಯ ಅವರು, ಸುಮ್ಮನೆ ಇರುವಂತೆ ರಾಜಣ್ಣ ಅವರಿಗೆ ತಾಕೀತು ಮಾಡಲಿಲ್ಲ, ಬದಲಿಗೆ ಡಿಸಿಎಂ ಹುದ್ದೆಗಳನ್ನು ಸೃಷ್ಟಿ ಮಾಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದುಬಿಟ್ಟರು.ಈ ಮಾತು ಕೂಡ ಡಿಕೆಶಿ ಬಣವನ್ನು ಕೆರಳಿಸಿತ್ತು.
ಇನ್ನೊಂದೆಡೆ, ಸತೀಶ್ ಜಾರಕಿಹೊಳಿ ಅವರ ಬಂಡಾಯದ ಬಗ್ಗೆ ಸಿದ್ದರಾಮಯ್ಯ ಬಣ ಮುಗುಮ್ಮಾಗಿ ಇದ್ದರೆ, ಡಿಕೆಶಿ ಬಣ ಕೊತ ಕೊತನೆ ಕುದಿಯುತ್ತಿದೆ.
ಆಪರೇಷನ್ ಕಮಲ ಇಲ್ಲ, ಸರಕಾರ ಸುಭದ್ರತಮ್ಮ ನಾಯಕತ್ವದಲ್ಲಿ ಸರಕಾರ ಸುಭದ್ರವಾಗಿರುತ್ತದೆ. ರಾಜ್ಯದಲ್ಲಿ 5 ವರ್ಷ ನಮ್ಮ ಸರಕಾರ ಸುಭದ್ರವಾಗಿರುತ್ತದೆ. ಬಿಜೆಪಿಯವರಿಗೆ ಅಧಿಕಾರ ಇಲ್ಲದೆ ಇರಲು ಆಗುವುದಿಲ್ಲ. ಅವರ ಆಪರೇಷನ್ ಕಮಲ ಈ ಬಾರಿ ನಡೆಯುವುದಿಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
Comments 1