ಮನೆ ಮನೆಗೂ ತೆರಳಿ ಸಮಸ್ಯೆ ನಿವಾರಿಸುವಂತೆ ಆದೇಶ
ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಹಣದ ಡಿಬಿಟಿ ಸೇರಿದಂತೆ ಅನ್ನಭಾಗ್ಯದ ಹಣ ಪಾವತಿ ಬಗ್ಗೆ ಉಂಟಾಗಿರುವ ವ್ಯತ್ಯಯದ ಬಗ್ಗೆ ಜನರಲ್ಲಿ ಆಕ್ರೋಶ ಮಡುಗಟ್ಟುವ ಮುನ್ನವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎಚ್ಚೆತ್ತುಕೊಂಡಿದ್ದಾರೆ.
ಕರ್ನಾಟಕ ಸರಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತ್ವರಿಗತಿಯಲ್ಲಿ ಹಣ ಸಂದಾಯ ಮಾಡಬೇಕು ಹಾಗೂ ತಾಂತ್ರಿಕ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳ ಖಾತೆಗೆ ಶೀಘ್ರ ಹಣ ಸಂದಾಯವಾಗುವಂತೆ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಸಚಿವರು ತಾಕೀತು ಮಾಡಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ಮನೆ ಮನೆಗೂ ತೆರಳಿ ಸಮಸ್ಯೆ ಬಗೆಹರಿಸಿ
ಇಲಾಖೆಯ ಉಪ ನಿದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇ-ಗವರ್ನೆನ್ಸ್ ಇಲಾಖೆಯ ಸಹಕಾರದೊಂದಿಗೆ ಆಗಿರುವ ಕೆಲವೊಂದು ತಾಂತ್ರಿಕ ನೂನ್ಯತೆಗಳನ್ನು ಪರಿಪಡಿಸಬೇಕು. ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ನೋಂದಣಿಯಲ್ಲಿ ಆಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದರು.
ಹಂತಹಂತವಾಗಿ ಸಂದಾಯ
ಆಗಸ್ಟ್ ತಿಂಗಳಿನಲ್ಲಿ ಶೇ.88ರಷ್ಟು ಮಂದಿಗೆ ಹಣ ಸಂದಾಯವಾಗಿದ್ದು, ಸೆಪ್ಟೆಂಬರ್ ತಿಂಗಳ ಹಣ ಹಂತ ಹಂತವಾಗಿ ಸಂದಾಯವಾಗುತ್ತಿದೆ. ಅಕ್ಟೋಬರ್ ತಿಂಗಳ ಹಣ ಶೇಕಡ 100ರಷ್ಟು ಫಲಾನುಭವಿಗಳಿಗೆ ಸಂದಾಯವಾಗುವಂತೆ ಮಾಡಬೇಕು ಎಂದು ಸಚಿವರು ಹೇಳಿದರು.
ಈ ವೇಳೆ ಇಲಾಖೆ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ನಿರ್ದೇಶಕಿ ಎಂ.ಎಸ್.ಅರ್ಚನಾ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್. ವಿಶ್ವನಾಥ್ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.