•ಹೈಕಮಾಂಡ್ ಗ್ರೀನ್ ಸಿಗ್ನಲ್ ನಂತರ ಕಾಂಗ್ರೆಸ್ ರಣೋತ್ಸಾಹ
•ಅಧಿಕಾರ ಹಂಚಿಕೆ ತಿಕ್ಕಾಟದ ನಡುವೆಯೂ ಪರಪಕ್ಷಗಳ ಶಾಸಕರ ಬೇಟೆ
•ಬಿಜೆಪಿಯ 8 ಶಾಸಕರು ನವೆಂಬರ್ 10ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಂಭವ
ಬೆಂಗಳೂರು: ʼಆಪರೇಷನ್ ಕಮಲʼಕ್ಕೂ ಮೊದಲೇ ʼಆಪರೇಷನ್ ಹಸ್ತʼ ಮಾಡಲು ಕಾಂಗ್ರೆಸ್ ಸಿದ್ದತೆ ಮಾಡಿಕೊಂಡಿದ್ದು, ಆ ಖೆಡ್ಡಾಕ್ಕೆ ಬೀಳಿಸಬೇಕಿರುವ ಪರಪಕ್ಷಗಳ ಶಾಸಕರ ಪಟ್ಟಿಯನ್ನು ರೆಡಿ ಮಾಡಿಟ್ಟುಕೊಂಡು ಮುಂದಡಿ ಇರಿಸಿದೆ.
ಮಹಾರಾಷ್ಟ್ರ ಮಾದರಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ʼಆಪರೇಷನ್ ಹಸ್ತʼ ಚುರುಕುಗೊಂಡಿದೆ. ಮತ್ತೊಂದೆಡೆ, 135+1 ಬಲ ಇರುವ ಸರಕಾರ ಅಸ್ಥಿರವಾದರೆ ಅದಕ್ಕಿಂತ ಅಪಮಾನ ಬೇರೆ ಇಲ್ಲ ಎಂದು ಕಾಂಗ್ರೆಸ್ ಸದಾ ಚಡಪಡಿಕೆಯಲ್ಲಿದೆ.
ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿದಂತೆ 8 ಬಿಜೆಪಿ ಶಾಸಕರು ನವೆಂಬರ್ 10ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಲೋಕಸಭೆಯ 20 ಕ್ಷೇತ್ರ ಗುರಿ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಕರ್ನಾಟಕದಲ್ಲಿಯೇ ಗೆಲ್ಲಲೇಬೇಕೆಂದು ಹಠ ತೊಟ್ಟಿರುವ ಕಾಂಗ್ರೆಸ್ ಪಕ್ಷವು, ತನ್ನ ಮತ ಗಳಿಕೆ ಪ್ರಮಾಣ ಗಣನೀಯವಾಗಿ ಏರಿಕೆ ಮಾಡಿಕೊಳ್ಳಲು ಬಿಜೆಪಿ ಶಾಸಕರು ಮತ್ತು ಮುಖಂಡರನ್ನು ಸೆಳೆದುಕೊಳ್ಳಲು ಮುಂದಾಗಿದೆ.
ಚುನಾವಣೆಯಲ್ಲಿ ಹೆಚ್ಚು ಮತ ಗಳಿಕೆ ತಂತ್ರ ಒಂದೆಡೆಯಾದರೆ, ಮತ್ತೊಂದೆಡೆ ಆಪರೇಷನ್ ಕಮಲದಿಂದ ಪಕ್ಷ ಮತ್ತು ಸರಕಾರಕ್ಕೆ ಹಿನ್ನಡೆ ಆಗಬಾರದೆಂಬ ಉದ್ದೇಶದಿಂದ ಪ್ರತಿಪಕ್ಷಗಳ ಸಂಖ್ಯಾಬಲವನ್ನು ಕುಗ್ಗಿಸುವ ಭಗೀರಥ ಯತ್ನವೂ ಇದಾಗಿದೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನಗೊಳ್ಳಲು ಕಾರಣರಾದ ಅಂದಿನ ಕಾಂಗ್ರೆಸ್ ಶಾಸಕರೇ ಇಂದು ಬಿಜೆಪಿಯಿಂದ ಆಪರೇಷನ್ ಹಸ್ತಕ್ಕೆ ಒಳಗಾಗುತ್ತಿದ್ದಾರೆ ಎನ್ನುವುದು ವಿಪರ್ಯಾಸ.
ಈ ಶಾಸಕರ ಜೊತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಿಂದ ಪರಾಭವಗೊಂಡ ಜೆಡಿಎಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳನ್ನು ಸೆಳೆದು ಮತ ಪ್ರಮಾಣ ವೃದ್ಧಿಸಿಕೊಳ್ಳುವ ಕಾರ್ಯಕ್ಕೆ ಕಾಂಗ್ರೆಸ್ ಚಾಲನೆ ನೀಡುತ್ತಿದೆ.
ಹೈಕಮಾಂಡ್ ಹಸಿರು ನಿಶಾನೆ
ತಮ್ಮ ಪಕ್ಷದ ಆಡಳಿತವಿರುವ ಸರಕಾರದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಬುಧವಾರ ದಿಢೀರನೆ ಬೆಂಗಳೂರಿಗೆ ಧಾವಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜತೆ ಸುದೀರ್ಘ ಚರ್ಚೆ ನಡೆಸಿದ್ದರು.
ಈ ಸಂದರ್ಭದಲ್ಲೇ ಪಕ್ಷ ಮತ್ತು ಸರಕಾರವನ್ನು ಮತ್ತಷ್ಟು ಬಲಗೊಳಿಸಿಕೊಳ್ಳಲು ಪಕ್ಷದ ಸಿದ್ಧಾಂತ ಒಪ್ಪಿ ಬಿಜೆಪಿ-ಜೆಡಿಎಸ್ ತೊರೆದು ಬರುವ ಶಾಸಕರು ಮತ್ತು ಮುಖಂಡರನ್ನು ಸೇರಿಸಿಕೊಳ್ಳಲು ಸಭೆಯಲ್ಲೇ ಎಐಸಿಸಿ ಮುಖಂಡರು ಹಸಿರು ನಿಶಾನೆ ತೋರಿಸಿದ್ದಾರೆ.
ವರಿಷ್ಠರ ಅನುಮತಿ ದೊರೆಯುತ್ತಿದ್ದಂತೆ ʼಆಪರೇಷನ್ ಹಸ್ತʼಕ್ಕೆ ವೇಗ ಬಂದಿದ್ದು; ಅತ್ಯಂತ ಗೌಪ್ಯವಾಗಿ ಪರಪಕ್ಷಗಳ ಶಾಸಕರನ್ನು ಸೆಳೆಯುವ ಕಾರ್ಯ ಭರದಿಂದ ಆರಂಭವಾಗಿದೆ.
ಮಹಾರಾಷ್ಟ್ರ ಮಾದರಿಯಲ್ಲಿ ಕಾಂಗ್ರೆಸ್ ಸರಕಾರ ಪತನ, ಡಿಕೆಶಿ ಶೀಘ್ರವೇ ಮಾಜಿ ಮಂತ್ರಿ ಆಗಲಿದ್ದಾರೆ..
ಸಿದ್ದರಾಮಯ್ಯ ಕೊಟ್ಟ ಪಂಚ್’ಗೆ ಡಿಕೆಶಿ ಬಣ ವಿಲವಿಲ