ಹಣವಂತರ ಪಾಲಾದ ಜಾಗ; ಅಧಿಕಾರಿಗಳಿಗೆ ಬೆವರಿಳಿಸಿದ ಪತ್ರಕರ್ತರು, ಎಡಿಎಲ್‌ಆರ್ ಕಚೇರಿಯಲ್ಲಿ ಧರಣಿ
ಬಾಗೇಪಲ್ಲಿ: ಪಟ್ಟಣದ ಪತ್ರಕರ್ತರಿಗೆ ನೀಡಲು ಮೀಸಲಿಟ್ಟಿದ್ದ ಸ್ಥಳವನ್ನು ಶ್ರೀಮಂತರಿಗೆ ನಿಯಮಬಾಹಿರವಾಗಿ ದುರಸ್ಥಿ ಮಾಡಿಕೊಟ್ಟಿರುವುದರಿಂದ ಕೆರಳಿದ ಪತ್ರಕರ್ತರು ಭೂಮಾಪನ ಇಲಾಖೆಯ ಕಚೇರಿ ಮುಂದೆ ಧರಣಿ ಮಾಡಿದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಪಟ್ಟಣಕ್ಕೆ ಸಮೀಪದ ಸ.ನಂ.44ರಲ್ಲಿ ಪತ್ರಕರ್ತರ ನಿವೇಶನಗಳಿಗೆ ಸ್ಥಳವನ್ನು ಮೀಸಲು ಇಟ್ಟು 2019ರಲ್ಲಿ ಭೂಮಾಪನ ಇಲಾಖೆಯ ಸರ್ವೆಯರ್ ಸ್ಕೆಚ್ ಮಾಡಿಕೊಟ್ಟಿದ್ದು ಅದರಂತೆ ಸರಕಾರದ ನಿಯಮಾವಳಿಗ ಪ್ರಕಾರ ಸರ್ಕಾರದ ಮಟ್ಟದಲ್ಲಿ ನಿವೇಶನಗಳ ಮಂಜೂರಾತಿಗೆ ಪ್ರಕ್ರಿಯೆ ನಡೆಯುತ್ತಿದೆ. ಒಂದಲ್ಲ ಒಂದು ಕುಂಟು ನೆಪ ಮುಂದಿಟ್ಟುಕೊಂಡು ನಿವೇಶನಗಳ ಕಡತವನ್ನು ವಾಪಸ್ಸು ಮಾಡುತ್ತಲೇ ನಾಲ್ಕು ವರ್ಷಗಳನ್ನು ಕಳೆಯಲಾಗಿದೆ.
ಆದರೆ ಸರ್ವೆ ನಂ 44ರಲ್ಲಿ ಕಳೆದ ತಿಂಗಳವರೆಗೂ ಸರಕಾರಿ ಭೂಮಿ ಎಂದು ಬರುತ್ತಿದ್ದ ಪಹಣಿಯಲ್ಲಿ ಇದೀಗ ಏಕಾಏಕಿ ಖಾಸಗಿ ವ್ಯಕ್ತಿಗಳ ಹೆಸರು ಕಾಣಿಸಿಕೊಂಡಿದ್ದು, ಸರ್ವೇ ನಂ.44 ಅನ್ನು ದುರಸ್ಥಿ ಮಾಡಿ ಹೊಸ ನಂಬರ್ ನೀಡಿದ್ದ ಪತ್ರಕರ್ತರ ನಿವೇಶನಗಳಿಗೆ ಸ್ಥಳವೇ ಇಲ್ಲದಂತೆ ಮಾಡಲಾಗಿದೆ.
ಅಧಿಕಾರಿಗಳ ಹಣದಾಹ ಪತ್ರಕರ್ತರ ನಿವೇಶನಗಳ ಕನಸಿನ ಆಸೆಗೆ ಎಳ್ಳುನೀರು ಬಿಟ್ಟಂತಾಗಿದ್ದು, ಇದು ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಭಾನುವಾರ ಮಧ್ಯಾಹ್ನವೇ ಎಡಿಎಲ್‌ಆರ್ ಕಚೇರಿಗೆ ಆಗಮಿಸಿದ ಪತ್ರಕರ್ತರು, ತಮಗೆ ತಮಗೆ ಮೀಸಲಿಟ್ಟಿರುವ ಸ್ಥಳವನ್ನು ನಮಗೆ ತೋರಿಸುವಂತೆ ಪಟ್ಟುಹಿಡಿದರು. ಹಣಕ್ಕಾಗಿ ಸರಕಾರಿ ಭೂಮಿಯನ್ನು ಮಾರಾಟ ಮಾಡಿಕೊಳ್ಳಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಎಡಿಎಲ್‌ಆರ್-ಸರ್ವೇಯರ್‌ಗೆ ತರಾಟೆ
ನಮಗೆ ನೀಡಿದ್ದ ಸರ್ವೆ ಸ್ಕೆಚ್ ಬದಲಿಸಿ ರೈತರಲ್ಲದವರಿಗೆ ಕಲ್ಲುಗುಟ್ಟ ಪ್ರದೇಶವನ್ನು ಹಿಡುವಳಿ ಜಮೀನು ಎಂದು ದಾಖಲೆ ಸೃಷ್ಟಿಸಿ ದುರಸ್ಥಿ ಮಾಡಲಾಗಿದೆ. ಮೂಲ ದಾಖಲೆಗಳನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ದಪಡಿಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ಸರ್ಕಾರಿ ಭೂಮಿಯನ್ನು ಕೋಟ್ಯಾಧೀಶ ವ್ಯಕ್ತಿಗಳಿಗೆ ನೀಡಿದ್ದರ ಹಿಂದೆ ದೊಡ್ಡಮಟ್ಟದಲ್ಲಿ ಹಣದ ವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ಪತ್ರಕರ್ತರು ಅನುಮಾನ ವ್ಯಕ್ತಪಡಿಸಿದರು.
ಈ ಬಗ್ಗೆ ಎಡಿಎಲ್ ಆರ್ ನಾಗಾಂಜನೇಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪತ್ರಕರ್ತರು; ನಮಗೆ ಮೀಸಲಿಟ್ಟ ಸ್ಥಳವನ್ನು ತೋರಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ರಾತ್ರಿ ಎಂಟು ಗಂಟೆಯವರೆವಿಗೂ ಕಚೇರಿಯಲ್ಲಿಯೇ ಠಿಕಾಣಿ ಹೂಡಿದ್ದರು. ಸೋಮವಾರದವರೆಗೂ ಅನಿರ್ಧಿಷ್ಠ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸೋಮವಾರ ಸಮಸ್ಯೆಗೆ ಪರಿಹಾರದ ಭರವಸೆ
ಈ ಬಗ್ಗೆ ಅನಿರ್ಧಿಷ್ಠ ಧರಣಿ ನಡೆಸುವ ಹಂತದಲ್ಲಿಯೇ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ದೂರವಾಣಿಯಲ್ಲಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಅವರೊಂದಿಗೆ ಮಾತನಾಡಿ, ಪತ್ರಕರ್ತರಿಗೆ ಮೀಸಲಿಟ್ಟಿರುವ ಸ್ಥಳವನ್ನು ಸೋಮವಾರ ತೋರಿಸಲಾಗುವುದು. ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಧರಣಿ ವಾಪಸ್ಸು ತೆಗೆದುಕೊಳ್ಳಿ ಎಂದು ಮನವಿ ಮಾಡಿದ ಹಿನ್ನಲೆ ಹಾಗೂ ದುರಸ್ಥಿಯನ್ನು ರದ್ದುಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ಎಡಿಎಲ್‌ಆರ್ ನೀಡಿದ ಭರವಸೆ ಹಿನ್ನಲೆಯಲ್ಲಿ ಒಟ್ಟಿಗೆ ಚರ್ಚಿಸಿ ಪತ್ರಕರ್ತರು ಧರಣಿಯನ್ನು ಹಿಂದಕ್ಕೆ ಪಡೆದುಕೊಂಡರು.
ಧರಣಿ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವೆಂಕಟೇಶ್, ಗೌರವಾಧ್ಯಕ್ಷ ಬಿ.ಆರ್.ಕೃಷ್ಣ, ಖಜಾಂಚಿ ಜಿ.ರಾಮಕೃಷ್ಣ, ಉಪಾಧ್ಯಕ್ಷ ಸಿದ್ದೀಕ್, ಪತ್ರಕರ್ತರಾದ ಬಿ.ಟಿ.ಚಂದ್ರಶೇಖರರೆಡ್ಡಿ, ಜಿ.ಎಂ.ಗುರುಮೂರ್ತಿ, ಮಣಿಕಂಠ, ಎಸ್.ಎಸ್.ಶ್ರೀನಿವಾಸ್, ಎಸ್.ಶಂಕರರಾವ್, ಅಬ್ದುಲ್ ಕರೀಂಸಾಬ್, ಬಿ.ಎಸ್.ಸುರೇಶ್, ಮುನೀರ್, ಗೋಪಾಲ ರೆಡ್ಡಿ, ಮಂಜುನಾಥ್, ರವೀಂದ್ರ, ರಂಗನಾಥ್, ಸೂರಿ ಮತ್ತಿತರರು ಇದ್ದರು.