ಯಡಿಯೂರಪ್ಪ ಪುತ್ರನಿಗೆ ಒಲಿದ ಅದೃಷ್ಟ; ಶುಭ ಕೋರಿದ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಮಾಜಿ ಮುಖ್ಯಮಂತ್ತಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ವರಿಷ್ಠರು ನೇಮಕ ಮಾಡಿದ್ದಾರೆ.
ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಹಾಲಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಅವಧಿಯು ಎರಡು ವರ್ಷಗಳ ಹಿಂದೆಯೇ ಪೂರ್ಣಗೊಂಡಿದ್ದರೂ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಅವರನ್ನು ಮುಂದುವರಿಸಲಾಗಿತ್ತು.
ರಾಜ್ಯ ಘಟಕದ ವಿವಿಧ ಪದಾಧಿಕಾರಿಯಾಗಿ ಚುನಾವಣಾ ಸಂದರ್ಭದಲ್ಲಿ ಸಕ್ರಿಯವಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿರುವ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಯಡಿಯೂರಪ್ಪ ಅವರು ವರಿಷ್ಠರಿಗೆ ಮನವಿ ಮಾಡಿದ್ದರು.
ಈ ಸ್ಥಾನಕ್ಕಾಗಿ ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ನಾಯಕರು ಪ್ರಯತ್ನ ಮಾಡಿದ್ದರು. ಮುಂಬರುವ ಲೋಕಸಭಾ ಚುನಾವಣೆ, ಪಕ್ಷ ಸಂಘಟನೆ ಹಾಗೂ ಆಪರೇಷನ್ ಹಸ್ತಕ್ಕೆ ಕಡಿವಾಣ ಹಾಕಲು ವೀರಶೈವ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನವನ್ನು ಪಕ್ಷ ನೀಡಿದೆ.
ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಯಡಿಯೂರಪ್ಪ ಅವರ ವರ್ಚಸ್ಸು ಬಳಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬಹುದು ಎಂಬ ಉದ್ದೇಶ ವರಿಷ್ಟರಿಗೆ ಇದ್ದಂತಿದೆ.
47 ವರ್ಷದ ವಿಜಯೇಂದ್ರ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿ ಶಾಸಕರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲು ಲೋಕಸಭಾ ಚುನಾವಣೆಯಲ್ಲಿ ಮರುಕಳಿಸಬಾರದು ಎಂಬ ಉದ್ದೇಶದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸ ಮುಖದ ಹುಡುಕಾಟವನ್ನು ವರಿಷ್ಠರು ನಡೆಸಿದ್ದರು.
ವಿಜಯೇಂದ್ರ ಸಂತಸ
ಇದೇ ವೇಳೆ ವಿಜಯೇಂದ್ರ ಅವರು ತಮ್ಮನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
“ಅಚಲ ವಿಶ್ವಾಸವಿಟ್ಟು ಪಕ್ಷ ಸಂಘಟನೆಯ ಬಹುದೊಡ್ಡ ಜವಾಬ್ದಾರಿ ವಹಿಸಿದ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರಿಗೆ, ಗೃಹ ಸಚಿವ ಅಮಿತ್ ಶಾ ಅವರಿಗೆ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರುಗಳಿಗೆ ತುಂಬು ಹೃದಯದ ಕೃತಜ್ಞತೆಗಳು. ಸಂಘದ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸರ್ವರ ನಿರೀಕ್ಷೆ ಹಾಗೂ ಜನರ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ತುಂಬಲು ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ಅಹರ್ನಿಶಿ ದುಡಿಯುವ ಸಂಕಲ್ಪ ತೊಟ್ಟಿರುವೆ. ನಾಡಿನ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ” ಎಂದು ಅವರು ಹೇಳಿದ್ದಾರೆ.
ಶುಭ ಕೋರಿದ ಹೆಚ್ ಡಿಕೆ
ಬಿಜೆಪಿ ಮಿತ್ರಪಕ್ಷವಾದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ವಿಜಯೇಂದ್ರ ಅವರಿಗೆ ಶುಭ ಕೋರಿದ್ದಾರೆ.
“ಕರ್ನಾಟಕ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ಶ್ರೀ ಬಿ.ವೈ.ವಿಜಯೇಂದ್ರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಯುವನಾಯಕರಾಗಿ ಸಂಘಟನೆಯಲ್ಲಿ ಈಗಾಗಲೇ ಕ್ರಿಯಾಶೀಲರಾಗಿರುವ ಅವರಿಗೆ ಕಿರಿಯ ವಯಸ್ಸಿನಲ್ಲಿಯೇ ಬಹುದೊಡ್ಡ ಜವಾಬ್ದಾರಿ ಅರಸಿ ಬಂದಿದೆ. ತಮಗೆ ವಹಿಸಿರುವ ಈ ಗುರುತರ ಹೊಣೆಯನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಶ್ರೀ ವಿಜಯೇಂದ್ರ ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.
ತಂದೆಯ ಆಶೀರ್ವಾದ ಪಡೆದ ವಿಜಯೇಂದ್ರ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಕಟಿಸುತ್ತಿದ್ದಂತೆ ವಿಜಯೇಂದ್ರ ಅವರು ತಮ್ಮ ತಂದೆ ಯಡಿಯೂರಪ್ಪ ಅವರ ಆಶೀರ್ವಾದ ಪಡೆದು, ಸಿಹಿ ತಿನ್ನಿಸಿದರು.