ಕಾಂಗ್ರೆಸ್ಸಿಗೆ ವೋಟು ಹಾಕಿದರೆ ಕರ್ನಾಟಕದ ದುರ್ಗತಿಯೇ ಗತಿ; 5 ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಡಿಕೆಶಿಗೆ ಸನ್ಯಾಸಿ ಎಂದು ಕುಟುಕಿದ ತೆಲಂಗಾಣ ಸಿಎಂ
ಹೈದರಾದ್: ಕಾಂಗ್ರೆಸ್ ಪಕ್ಷವನ್ನು ನಂಬಿ ವೋಟು ಹಾಕಿದರೆ ಕರ್ನಾಟಕದ ದುರ್ಗತಿಯೇ ಬರುತ್ತದೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಖರತ್ನಾಕ್ ರಾಜಕೀಯ ಮಾಡುತ್ತಿದೆ. ನಮ್ಮ ಬೆರಳಿನಿಂದಲೇ ನಮ್ಮ ಕಣ್ಣನ್ನು ತಿವಿಯುವ ಕೆಲಸ ಮಾಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಕ್ಷೇತ್ರದಲ್ಲಿ ಇಂದು ಚುನಾವಣೆ ಪ್ರಚಾರ ನಡೆಸಿದ ಅವರು; ಕರ್ನಾಟಕದಲ್ಲಿ ಕೇವಲ ಐದು ವಿದ್ಯುತ್ ನೀಡಲಾಗುತ್ತಿದೆ. ತೆಲಂಗಾಣದಲ್ಲಿ ದಿನದ 24 ಗಂಟೆಯೂ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿ ಜನರು ಮೋಸ ಹೋಗಿದ್ದಾರೆ. ಅಲ್ಲಿ ಕೇವಲ 5 ಗಂಟೆ ಮಾತ್ರ ವಿದ್ಯುತ್ ಕೊಡಲಾಗುತ್ತಿದೆ. ಅಲ್ಲಿ ಡಿ.ಕೆ.ಶಿವಕುಮಾರ್ ಎನ್ನುವ ಒಬ್ಬರಿದ್ದಾರೆ. ಆ ರಾಜ್ಯದ ಉಪ ಮುಖ್ಯಮಂತ್ರಿ. ಇಲ್ಲಿಗೆ ಬಂದು ಪ್ರಚಾರ ಮಾಡಿದ ಆ ವ್ಯಕ್ತಿ, ಕರ್ನಾಟಕದಲ್ಲಿ ನಾವು 5 ಗಂಟೆ ವಿದ್ಯುತ್ ಕೊಡುತ್ತಿದ್ದೇವೆ. ನಿಮಗೂ 5 ಗಂಟೆ ವಿದ್ಯುತ್ ಕೊಡುತ್ತೇನೆ ಎಂದು ಜನರಿಗೆ ಹೇಳಿದ್ದಾರೆ. ಕೆಸಿಆರ್ ಈ ವಿಷಯ ನಿಮಗೆ ಗೊತ್ತಾ? ಬೇಕಾದರೆ ಕರ್ನಾಟಕಕ್ಕೆ ಬಂದು ನೋಡಿ ಎಂದು ನನಗೆ ಹೇಳಿದ್ದಾರೆ.
ಅದಕ್ಕೆ; ಆ ಶಿವಕುಮಾರ್ ಗೆ ನಾನು ಹೇಳುವುದು ಇಷ್ಟೇ; ಅಯ್ಯೋ ಸನ್ಯಾಸಿ, ಐದು ಗಂಟೆಯಲ್ಲ, ನಾವು ದಿನಕ್ಕೆ 24 ಗಂಟೆ ವಿದ್ಯುತ್ ಕೊಡುತ್ತಿದ್ದೇವೆ ಎಂದು ಡಿಕೆಶಿಗೆ ಕುಟುಕಿದ್ದಾರೆ ಕೆಸಿಆರ್.
ತೆಲಂಗಾಣದಲ್ಲಿ ಡಿಕೆಶಿ ನೀಡಿದ್ದ ಐದು ಗಂಟೆ ವಿದ್ಯುತ್ ಸರಬರಾಜು ಭರವಸೆಯೇ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿದ್ದು, ತಮ್ಮ ಪ್ರತೀ ಸಭೆಯಲ್ಲಿ ಕೆಸಿಆರ್ ಇದನ್ನೇ ಹೇಳುತ್ತಿದ್ದಾರೆ. ಅಲ್ಲದೆ, ಆ ರಾಜ್ಯದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ, ಹಿಂದೆ ಒಮ್ಮೆ ʼರೈತರಿಗೆ ಮೂರು ಗಂಟೆ ವಿದ್ಯುತ್ ಸಾಕುʼ ಎಂದಿದ್ದರು. ಇವರಿಬ್ಬರ ಹೇಳಿಕೆಗಳು ಬಿಆರ್ ಎಸ್ ಪಕ್ಷಕ್ಕೆ ಅಸ್ತ್ರಗಳಾಗಿವೆ.