ಮತ್ತೆ ಗುಡಿಬಂಡೆ ಪ.ಪಂ. ಅಧಿಕಾರ ಹಿಡಿದ ಕಾಂಗ್ರೆಸ್; ನೂತನ ಅಧ್ಯಕ್ಷೆಯಾಗಿ ನಗೀನ್ ತಾಜ್ ಅವಿರೋಧ ಆಯ್ಕೆ
by GS Bharath Gudibande
ಗುಡಿಬಂಡೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ತಕ್ಕೆಗೆ ಬಿದ್ದಿದೆ.
ಹೌದು. 2021ರ ನವೆಂಬರ್ ತಿಂಗಳಿನಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ಜಿದ್ದಾಜಿದ್ದಿನ ರಾಜಕೀಯ ಮೇಲಾಟವೇ ನಡೆದಿತ್ತು. ಒಂದೆಡೆ ಅಂದಿನ ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಬೆಂಗಳೂರಿನಲ್ಲಿ ಕೂತು ಕಾರ್ಯತಂತ್ರ ರೂಪಿಸಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದರು. ಅದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಮುನಿರಾಜು ಕಾರಣರಾಗಿದ್ದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಬರಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಬೆಂಬಲಿಗರು ರಸ್ತೆಯಲ್ಲಿ ಕೂತು ಪ್ರತಿಭಟನೆ ಮಾಡಿದ್ದರು. ಆದರೂ ಸ್ಥಳೀಯ ಶಾಸಕರ ಪ್ರಯತ್ನ ಅಂದು ವಿಫಲವಾಗಿತ್ತು. ಈಗ ಕಾಲಚಕ್ರ ಉರುಳಿದೆ. ಸುಬ್ಬಾರೆಡ್ಡಿ ಶಾಸಕರಾಗಿದ್ದಾರೆ, ಅವರ ಪಕ್ಷ ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಅಂದು ಚಕ್ರ ತಿರುಗಿಸಿದ್ದ ಡಾ.ಸುಧಾಕರ್ ಚುನಾವಣೆಯಲ್ಲಿ ಸೋತಿದ್ದಾರೆ, ಅವರ ಬಿಜೆಪಿ ಪಕ್ಷವೂ ಅಧಿಕಾರ ಕಳೆದುಕೊಂಡಿದೆ.
ಅಂದು ಶಪಥ ಮಾಡಿದ್ದ ಎಸ್.ಎನ್ ಸುಬ್ಬಾರೆಡ್ಡಿ ಅವರು ತಮ್ಮ ಬೆಂಬಲಿತ ಅಭ್ಯರ್ಥಿಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ತರುವ ಮೂಲಕ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ತಿರುಗೇಟು ನೀಡುವಲ್ಲಿ ಸಫಲರಾಗಿದ್ದಾರೆ.
ಕಳೆದ ಅ.21ರಂದು ಪ.ಪಂ ಅಧ್ಯಕ್ಷರಾಗಿ ಬಷೀರಾ ರಿಜ್ವಾನ್ ವಿರುದ್ದ ಅವಿಶ್ವಾಸ ಮಂಡನೆಯಿಂದ ತೆರವಾಗಿದ್ದ ಸ್ಥಾನಕ್ಕೆ 10ನೇ ವಾರ್ಡಿನ ಸದಸ್ಯೆ ನಗೀನ್ ತಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನವಾಣಾಧಿಕಾರಿ ತಹಶಿಲ್ದಾರ್ ಮನಿಷಾ ಅವರು ಘೋಷಣೆ ಮಾಡಿದ್ದಾರೆ.
ಗುಡಿಬಂಡೆ ಪಟ್ಟಣ ಪಂಚಾಯತಿಯು ಒಟ್ಟು 11 ಸದಸ್ಯ ಬಲ ಹೊಂದಿದ್ದು, ಕೆಲ ದಿನಗಳ ಹಿಂದೆ 2ನೇ ವಾರ್ಡಿನ ಸದಸ್ಯ ಹಾಗೂ ಉಪಾಧ್ಯಕ್ಷರಾಗಿದ್ದ ಅನೀಲ್ ಅವರು ಮೃತಪಟ್ಟಿದ್ದರು. ಉಳಿದಂತೆ 10 ಮಂದಿ ಸದಸ್ಯರಿದ್ದು, ಅ.21 ರಂದು ಪ.ಪಂ ಸದಸ್ಯರು ಅವಿಶ್ವಾಸ ಮಂಡನೆ ಮಾಡಿದ್ದರು. ಅವಿಶ್ವಾಸ ಮಂಡನೆ ಯಶಸ್ವಿಯಾಗಿ ನಡೆದಿದ್ದು, ನ.24 ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಪಡಿಸಲಾಗಿತ್ತು. ಅದರಂತೆ ಚುನಾವಣೆ ನಡೆದಿದ್ದು, ನಿಯಮಾವಳಿಯಂತೆ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ನಾಮಪತ್ರ ಸಲ್ಲಿಸಿದ 10ನೇ ವಾರ್ಡಿನ ಸದಸ್ಯೆ ನಗೀನ್ ತಾಜ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಪಟ್ಟಣದಲ್ಲಿನ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆ. ಚರಂಡಿ, ನೀರಿನ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುತ್ತೇನೆ. ನನ್ನ ಆಯ್ಕೆ ಮಾಡಿದಂತಹ ಸದಸ್ಯರಿಗೂ, ಶಾಸಕ ಸುಬ್ಬಾರೆಡ್ಡಿಯವರಿಗೂ ನಾನು ಅಭಾರಿಯಾಗಿರುತ್ತೇನೆ.
ನಗೀನ್ ತಾಜ್, ನೂತನ ಅಧ್ಯಕ್ಷೆ
ಈ ಸಮಯದಲ್ಲಿ ಪ.ಪಂ ಉಪಾಧ್ಯಕ್ಷ ವಿಕಾಸ್, ಸದಸ್ಯರಾದ ಬಶೀರ್ ಅಹಮದ್, ರಾಜೇಶ್, ವೀಣಾ, ಇಸ್ಮಾಯಿಲ್ ಆಜಾದ್ ಬಾಬು, ಗಂಗರಾಜು, ಅನೂಷ, ಮಂಜುಳಮ್ಮ, ಮುಖಂಡರಾದ ಆನಂದರೆಡ್ಡಿ, ರಿಯಾಜ್ ಪಾಷ, ರಮೇಶ್, ಪ್ರಕಾಶ್, ಫಯಾಜ್, ನಾಗರಾಜ್, ಅಪ್ಪಯ್ಯಪ್ಪ, ನಿತಿನ್, ಅಜಯ್ ಸೇರಿದಂತೆ ಹಲವರು ಇದ್ದರು.
Comments 1