ಸಿದ್ದರಾಮಯ್ಯ ಸರಕಾರಕ್ಕೆ ತುರ್ತು ನೊಟೀಸ್; ಮಂಗಳವಾರ 5 ಗಂಟೆಯೊಳಗೆ ವಿವರಣೆ ನೀಡಲು ಮುಖ್ಯ ಕಾರ್ಯದರ್ಶಿಗೆ ಪತ್ರ
ಬೆಂಗಳೂರು/ಹೈದರಾಬಾದ್: ತನ್ನ ಗ್ಯಾರಂಟಿ ಯೋಜನೆಗಳ ಜಾಹೀರಾತುಗಳನ್ನು ತೆಲಂಗಾಣದ ತೆಲುಗು ಪತ್ರಿಕೆಗಳಿಗೆ ನೀಡಿದ ಕರ್ನಾಟಕದ ಕಾಂಗ್ರೆಸ್ ಸರಕಾರ ಕೇಂದ್ರ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿ ಆಗಿದೆ.
ತೆಲಂಗಾಣದ ಪ್ರಮುಖ ದಿನಪತ್ರಿಕೆಗಳಾದ ಈನಾಡು, ಸಾಕ್ಷಿ, ಆಂದ್ರಜ್ಯೋತಿ ಸೇರಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕರ್ನಾಟಕ ಸರಕಾರ ಜಾಹೀರಾತುಗಳನ್ನು ನೀಡಿರುವುದನ್ನು ತೀವ್ರವಾಗಿ ಆಕ್ಷೇಪಿಸಿ ಬಿಜೆಪಿ ಹಾಗೂ ಬಿಆರ್ ಎಸ್ ಪಕ್ಷಗಳು ಪ್ರತ್ಯೇಕವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. ಈ ದೂರುಗಳನ್ನು ಸ್ವೀಕಾರ ಮಾಡಿರುವ ಆಯೋಗ, ಪ್ರಕರಣವನ್ನು ಗಂಭೀರವಾಗಿ ಪರಿಣಿಸಿದೆ.
ಈ ಬಗ್ಗೆ ಕರ್ನಾಟಕ ಸರಕಾರದ ವಿವರಣೆ ಕೋರಿರುವ ಚುನಾವಣಾ ಆಯೋಗ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದಿದೆ. ಈ ಬಗ್ಗೆ ಮಂಗಳವಾರ ಸಂಜೆ ಐದು ಗಂಟೆಯೋಳಗೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರ ಬಗ್ಗೆಅಷಟ ವಿವರಣೆ ನೀಡಬೇಕು ಎಂದು ಹೇಳಿದೆ.
ತೆಲಂಗಾಣದಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಅಥವಾ ಮಾಧ್ಯಮಗಳಿಗೆ ನೀಡುವ ಮುನ್ನ ಕರ್ನಾಟಕ ಸರಕಾರ ತನ್ನ ಅನುಮತಿ ಪಡೆದಿಲ್ಲ. ಹೀಗಾಗಿ ಈ ಜಾಹೀರಾತುಗಳ ನೀಡಿಕೆ ಸಂಪೂರ್ಣವಾಗಿ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ಆಯೋಗ ನೇರ ಮಾತುಗಳಲ್ಲಿ ಮುಖ್ಯ ಕಾರ್ಯದರ್ಶಿಗೆ ಹೇಳಿದೆ.
ತನ್ನ ಅನುಮೋದನೆ ಸಿಗುವ ತನಕ ತೆಲಂಗಾಣದಲ್ಲಿ ಕರ್ನಾಟಕ ಸರಕಾರ ಯಾವುದೇ ಜಾಹೀರಾತುಗಳನ್ನು ನೀಡಬಾರದು ಎಂದು ಸಿದ್ದರಾಮಯ್ಯ ಸರಕಾರಕ್ಕೆ ಚುನಾವಣಾ ಆಯೋಗ ತಾಕೀತು ಮಾಡಿದೆ.
ಅಷ್ಟೇ ಅಲ್ಲ, ನೀತಿ ಸಂಹಿತೆ ಉಲ್ಲಂಘನೆ ಕಾರಣಕ್ಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಕಾರ್ಯದರ್ಶಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಬಾರದೇಕೆ ಎಂದು ಆಯೋಗವು ಮುಖ್ಯ ಕಾರ್ಯದರ್ಶಿಗಳನ್ನು ಖಾರವಾಗಿ ಪ್ರಶ್ನೆ ಮಾಡಿದೆ.
ನವೆಂಬರ್ ೩೦ರಂದು ತೆಲಂಗಾಣದಲ್ಲಿ ಒಂದೇ ಹಂತದ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ನಡುವೆ ತೆಲಂಗಾಣಕ್ಕೆ ದಾಂಗುಡಿ ಇಟ್ಟಿರುವ ಕರ್ನಾಟಕ ಕಾಂಗ್ರೆಸ್ ನಾಯಕರು, ಗೆಲುವಿಗಾಗಿ ಇಲ್ಲಿ ನಡೆಸಿದ್ದ ಪ್ರಯೋಗಗಳನ್ನೇ ಅಲ್ಲೂ ಮುಂದುವರಿಸಿದ್ದಾರೆ. ಸೋಮವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇಡೀ ಸಂಪುಟವೇ ತೆಲಂಗಾಣದಲ್ಲಿ ಪ್ರಚಾರ ಮಾಡಿತ್ತು.
ಯಾವ ಜಾಹೀರಾತು?
ಶಕ್ತಿ ಯೋಜನೆಯ ಜಾಹೀರಾತನ್ನು ತೆಲಂಗಾಣದ ಎಲ್ಲಾ ತೆಲುಗು ಪತ್ರಿಕೆಗಳಿಗೆ ನೀಡಲಾಗಿದೆ. ತೆಲುಗು ಭಾಷೆಯಲ್ಲೇ ಇರುವ ಆ ಜಾಹೀರಾತನ್ನು ಕರ್ನಾಟಕ ಸಾರಿಗೆ ಇಲಾಖೆಯೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪತ್ರಿಕೆಗಳಿಗೆ ಬಿಡುಗಡೆ ಮಾಡಿದೆ. ಸೋಮವಾರ ಬೆಳಗ್ಗೆ ಪತ್ರಿಕೆಗಳಲ್ಲಿ ಕಂಡ ಈ ಜಾಹೀರಾತನ್ನು ಗಮನಿಸಿದ ಬಿಜೆಪಿಯು, ಆಯೋಗಕ್ಕೆ ದೂರು ನೀಡಿದ್ದು; ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆ ಅನ್ವಯ ಕಾಂಗ್ರೆಸ್, ಅದರಲ್ಲೂ ಕರ್ನಾಟಕ ಸರಕಾರದ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿತ್ತು.
- ತೆಲಂಗಾಣದ ʼಸಾಕ್ಷಿʼ & ‘ ಆಂಧ್ರಜ್ಯೋತಿ ‘ ಲುಗು ಪತ್ರಿಕೆಯಲ್ಲಿ ಪ್ರಕಟವಾಗಿರುವ ಕರ್ನಾಟಕ ಸರಕಾರದ ʼಶಕ್ತಿʼ ಯೋಜನೆಯ ಜಾಹೀರಾತು.
ʼಕರ್ನಾಟಕ ಪ್ರಭುತ್ವಂ, ಗ್ಯಾರಂಟಿ ಪ್ರಭುತ್ವಂʼ ಎನ್ನುವ ಟೈಟಲ್ಲಿನ ಈ ಜಾಹೀರಾತಿನಲ್ಲಿ ಶಕ್ತಿ ಯೋಜನೆಯ ಯಶಸ್ಸಿನ ಅಂಶಗಳನ್ನು ಮುದ್ರಿಸಲಾಗಿದೆ. ಬಿಜೆಪಿ, ಬಿಆರ್ ಎಸ್ ಪಕ್ಷಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವುದು ಒಂದೆಡೆಯಾದರೆ, ಚುನಾವಣಾ ಆಯೋಗವೂ ಗರಂ ಆಗಿದೆ. ಅಲ್ಲದೆ; ಚುನಾವಣೆ ವಿಶ್ಲೇಷಕರು ಕೂಡ, ವಾಮಮಾರ್ಗದಲ್ಲಿ ಕಾಂಗ್ರೆಸ್ ಗೆಲ್ಲುವ ಪ್ರಯತ್ನ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.